ADVERTISEMENT

30 ಅಲೆಮಾರಿಗಳಿಗಷ್ಟೇ ತಲುಪಿದ ಸೌಲಭ್ಯ

ಸ್ವಯಂ ಉದ್ಯೋಗ ಯೋಜನೆಯ ₹ 50 ಸಾವಿರ ಸಾಲ ಸೌಲಭ್ಯಕ್ಕೆ 168 ಅಲೆಮಾರಿಗಳು ಆಯ್ಕೆ

ಕೆ.ಎಸ್.ಪ್ರಣವಕುಮಾರ್
Published 19 ಜೂನ್ 2021, 4:03 IST
Last Updated 19 ಜೂನ್ 2021, 4:03 IST
ಚಿತ್ರದುರ್ಗ ಜಿಲ್ಲೆಯ ಧರ್ಮಪುರದ ಹೊರವಲಯದಲ್ಲಿ ಅಸಹಾಯರಾಗಿರುವ ಕೊರಚ ಸಮುದಾಯದ ಕುಟುಂಬಗಳು (ಪ್ರಜಾವಾಣಿ ಸಂಗ್ರಹ ಚಿತ್ರ)
ಚಿತ್ರದುರ್ಗ ಜಿಲ್ಲೆಯ ಧರ್ಮಪುರದ ಹೊರವಲಯದಲ್ಲಿ ಅಸಹಾಯರಾಗಿರುವ ಕೊರಚ ಸಮುದಾಯದ ಕುಟುಂಬಗಳು (ಪ್ರಜಾವಾಣಿ ಸಂಗ್ರಹ ಚಿತ್ರ)   

ಚಿತ್ರದುರ್ಗ: ಕೋವಿಡ್‌ನಿಂದಾಗಿ ಅಲೆಮಾರಿ, ಅರೆ ಅಲೆಮಾರಿ, ಬುಡಕಟ್ಟು ಸಮುದಾಯ ಸತತ ಎರಡನೇ ವರ್ಷವೂ ತತ್ತರಿಸಿ ಹೋಗಿದೆ. ಕೊರೊನಾಕ್ಕಿಂತ ಮುಂಚಿನಿಂದಲೂ ಸಂಕಷ್ಟಕ್ಕೆ ಸಿಲುಕಿರುವ ಸಮುದಾಯದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ₹ 50 ಸಾವಿರ ಸಾಲ ಸೌಲಭ್ಯ ದೊರೆಯುತ್ತಿದೆ. ಆದರೆ, ಇದು ಸಿಗುತ್ತಿರುವುದು ಕಡಿಮೆ ಸಂಖ್ಯೆ ಜನರಿಗೆ. ಇದರಿಂದಾಗಿ ಅನೇಕರು ಸ್ವಾವಲಂಬಿಯಾಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಅಂಬೇಡ್ಕರ್ ಅಭಿವೃದ್ಧಿ ನಿಗಮವು ಅಲೆಮಾರಿ ಅಭಿವೃದ್ಧಿ ಕೋಶದಿಂದ ಈ ಸೌಲಭ್ಯ ನೀಡುತ್ತಿದೆ. ₹ 50 ಸಾವಿರ ಸಾಲಕ್ಕೆ ₹ 25 ಸಾವಿರ ಸಬ್ಸಿಡಿ ಕೂಡ ದೊರೆಯಲಿದೆ. ಉಳಿದ ₹ 25 ಸಾವಿರ ಸಾಲವನ್ನು ಪಡೆದವರು 3 ವರ್ಷದೊಳಗೆ ಮರು ಪಾವತಿಸಬೇಕು. 2017–18ರಲ್ಲಿ 153 ಜನರು ಮಾತ್ರ ಸೌಲಭ್ಯ ಪಡೆದಿದ್ದರು. ಎರಡು ವರ್ಷಗಳಿಂದ ಯಾರೂ ಸೌಲಭ್ಯ ಪಡೆದಿಲ್ಲ.

ನಿಗಮವು ಪ್ರಸಕ್ತ ಸಾಲಿನಲ್ಲಿ ಸ್ವಯಂ ಉದ್ಯೋಗ ಯೋಜನೆಯ ಅಡಿ ಜಿಲ್ಲೆಯಲ್ಲಿ ಸಾಲ ಸೌಲಭ್ಯ ನೀಡಲು ಸಮುದಾಯದ 168 ಜನರನ್ನು ಆಯ್ಕೆ ಮಾಡಿದೆ. ಆದರೆ, ₹ 50 ಸಾವಿರ ಪಡೆದವರ ಸಂಖ್ಯೆ 30 ಕೂಡ ದಾಟಿಲ್ಲ. ಅಲೆಮಾರಿ ಸಮುದಾಯಕ್ಕೆ ಸೇರಿದ ಜಾತಿ ಪ್ರಮಾಣ ಪತ್ರ, ಸ್ವಂತವಾಗಿ ಯಾವ ಉದ್ಯೋಗ ಕೈಗೊಳ್ಳುತ್ತೇವೆ ಎಂಬ ನಿಖರ ಮಾಹಿತಿಯನ್ನು ನಿಗಮಕ್ಕೆ ನೀಡಬೇಕು. ಅವರು ಇರುವ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ADVERTISEMENT

ಕೋವಿಡ್–ಲಾಕ್‌ಡೌನ್‌ಕಾರಣಕ್ಕೆ ದುಡಿಮೆ ಇಲ್ಲದೆಯೇ ವಿವಿಧ ಕ್ಷೇತ್ರಗಳು ನಲುಗಿ ಹೋಗಿವೆ. ಹೀಗಾಗಿ, ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದವರ ಸಂಖ್ಯೆಯೂ ಕಡಿಮೆಯಾಗಿದೆ. ಹಲವು ಅನುಮಾನಗಳಿಂದ ಸಮುದಾಯದ ಬಹುತೇಕರು ಸೌಲಭ್ಯ ಪಡೆಯಲು ಮುಂದೆ ಬರುತ್ತಿಲ್ಲ.

2011ರ ಜನಗಣತಿ ಪ್ರಕಾರ ಸುಡುಗಾಡು ಸಿದ್ಧರು–1,431, ಹಂದಿ ಜೋಗಿ–120, ಕೊರಮ–3,814, ಶಿಳ್ಳೆಕ್ಯಾತ 1,246, ಕೊರಚ–5,123, ಬುಡಗಜಂಗಮ–2,691, ಚನ್ನದಾಸರು–965 ಸೇರಿ 10ಕ್ಕೂ ಹೆಚ್ಚು ಸಮುದಾಯದ ಸಾವಿರಾರು ಜನರಿದ್ದಾರೆ. ಇವರೆಲ್ಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ. ನಗರ, ಪಟ್ಟಣ ಪ್ರದೇಶದಲ್ಲಿ 5 ಸಾವಿರ ಹಾಗೂ ಜಿಲ್ಲೆಯಲ್ಲಿ ಒಟ್ಟು 15 ಸಾವಿರಕ್ಕೂ ಹೆಚ್ಚು ಅಲೆಮಾರಿ ಜನರು ಇರಬಹುದು ಎಂದು ಅಂದಾಜಿಸಲಾಗಿದೆ.

ಊರಿನ ಪಾಳು ಜಾಗಗಳಲ್ಲಿ ಟೆಂಟ್‌ಗಳು, ಗುಡಾರ ಹಾಗೂ ಗುಡಿಸಲುಗಳನ್ನು ಹಾಕಿಕೊಂಡು ಬದುಕುತ್ತಿದ್ದಾರೆ. ರಸ್ತೆ ಬದಿ ಹಾಗೂ ದೇಗುಲಗಳ ಅಕ್ಕಪಕ್ಕದ ಜಾಗಗಳಲ್ಲೂ ವಾಸವಿದ್ದಾರೆ. ಸಮುದಾಯದವರಿಗೆ ವಾಸಿಸಲು ಸ್ವಂತ ನಿವೇಶನ, ಮನೆಯೂ ಇಲ್ಲ; ಜಮೀನು ಇಲ್ಲ. ಕೆಲವರು ಪುಟ್ಟ ಮನೆಗಳಲ್ಲಿ ಬಾಡಿಗೆ ಇದ್ದಾರೆ.

ನಿತ್ಯ ಒಪ್ಪತ್ತಿನ ಊಟವಿಲ್ಲದೇ ಪರದಾಡುತ್ತಿದ್ದಾರೆ. ಕೆಲವರು ಪಿನ್ನು, ಟೇಪು, ಬಾಚಣಿಕೆ, ಪ್ಲಾಸ್ಟಿಕ್ ಸಾಮಾನುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಕೊಡೆ, ಬೀಗ ರಿಪೇರಿ ಮಾಡುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಕೂಲಿ ಕೆಲಸ, ನಗರ ವ್ಯಾಪ್ತಿಯಲ್ಲಿ ಕೆಲವರು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದರು. ಭಿಕ್ಷಾಟನೆಗೆ ಸರ್ಕಾರ ನಿರ್ಬಂಧ ವಿಧಿಸಿದ ನಂತರ ದಿನ ದೂಡುವುದು ಅನೇಕರಿಗೆ ಕಷ್ಟಕರವಾಗಿದೆ.

‘ನಿಗಮದಿಂದ ನೀಡುತ್ತಿರುವ ಸಾಲ ಸೌಲಭ್ಯ ಅಲೆಮಾರಿ ಸಮುದಾಯದ ಹೆಚ್ಚು ಜನರಿಗೆ ಸಿಗುವಂತೆ ಮಾಡಬೇಕು. ಸಂಕಷ್ಟಕ್ಕೆ ಒಳಗಾದ ಕೆಲ ಸಮುದಾಯಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶೇಷ ಪ್ಯಾಕೇಜ್‌ ಘೋಷಿಸಿದ್ದಾರೆ. ಆದರೆ, ಅದರಲ್ಲಿ ಅಲೆಮಾರಿಗಳನ್ನು ಕಡೆಗಣಿಸಲಾಗಿದೆ. ಕೋವಿಡ್‌ ಸಂದರ್ಭ ಹಸಿವು ನೀಗಿಸಲಿಕ್ಕಾದರೂ ಅಲೆಮಾರಿಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು’ ಎಂದು ಶಿಳ್ಳೆಕ್ಯಾತ ಸಂಘಟನೆಯ ಅಧ್ಯಕ್ಷ ತ್ಯಾಗರಾಜ್ ಒತ್ತಾಯಿಸಿದ್ದಾರೆ.

‘54 ದಿನ ಆಹಾರ ನೀಡಿದ್ದೇವೆ’
‘ಕೋವಿಡ್‌ನಿಂದಾಗಿ ಊಟಕ್ಕೆ ಆಹಾರದ ಸಾಮಗ್ರಿಗಳು ಇಲ್ಲದೇ ಬದುಕು ಸಾಗಿಸಲು ಸಮುದಾಯದವರು, ಬಡವರು, ನಿರ್ಗತಿಕರು ತುಂಬಾ ಕಷ್ಟ ಪಡುತ್ತಿದ್ದಾರೆ. ಅದಕ್ಕಾಗಿ 54 ದಿನಗಳಿಂದ ನಗರ ವ್ಯಾಪ್ತಿಯಲ್ಲಿ ತಿಂಡಿ, ಊಟದ ಪೊಟ್ಟಣ, ನೀರು ವಿತರಿಸುತ್ತಿದ್ದೇವೆ’ ಎಂದು ರಾಜ್ಯ ನಿರ್ಗತಿಕರ ಮತ್ತು ಮಕ್ಕಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಂಜುನಾಥ್‌ ತಿಳಿಸಿದ್ದಾರೆ.

‘ಮೊದಲ ಒಂದು ತಿಂಗಳು 500 ಜನಕ್ಕೆ ವಿತರಿಸಿದ್ದೇವೆ. ಈಗ 150ರಿಂದ 200 ಜನಕ್ಕೆ ನೀಡಲಾಗುತ್ತಿದೆ. ನಾವು ಕೂಡ ಆರ್ಥಿಕ ತೊಂದರೆ ಅನುಭವಿಸುತ್ತಿದ್ದೇವೆ. ಸಮುದಾಯದವರಿಗೆ ನೆರವಿನ ಅಗತ್ಯವಿದೆ’ ಎನ್ನುತ್ತಾರೆ ಅವರು.

***
ನಿಗಮ ನೀಡಿದ ಗುರಿಯ ಅನ್ವಯ ಅರ್ಹರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಗುರುತಿಸಲಾದ 168 ಜನರು ಅರ್ಹರಾಗಿದ್ದರೆ, ಎಲ್ಲರಿಗೂ ಸೌಲಭ್ಯ ಸಿಗಲಿದೆ.
–ಪರಮೇಶ್ವರಪ್ಪ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.