ADVERTISEMENT

ಎಲ್ಲಾ ಸೆಲ್ಫ್ ಚೆಕ್; ಹೈಕೋರ್ಟ್‌ ಅತೃಪ್ತಿ: ಮುರುಘಾ ಶರಣರ ಅರ್ಜಿ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 19:37 IST
Last Updated 29 ಸೆಪ್ಟೆಂಬರ್ 2022, 19:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾರಣಕ್ಕೆ ಪೋಕ್ಸೊ ಮತ್ತು ಎಸ್ಸಿ-ಎಸ್ಟಿ ಜಾತಿನಿಂದನೆ ಆರೋಪದಡಿ ಜೈಲಿನಲ್ಲಿರುವ ಚಿತ್ರ ದುರ್ಗ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘ ರಾಜೇಂದ್ರ ಶರಣರು ಜೈಲಿನಿಂದಲೇ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ ಸಹಿ ಮಾಡಲು ಅವಕಾಶ ನೀಡಬೇಕು ಎಂಬ ಕೋರಿಕೆಗೆ ಸಂಬಂಧಿಸಿದಂತೆ ಅವರ ಪರ ವಕೀಲರು ಸಲ್ಲಿಸಿದ ಪ್ರಸ್ತಾವಕ್ಕೆ ಹೈಕೋರ್ಟ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.

ಈ ಸಂಬಂಧ ಆರೋಪಿ ಶಿವ ಮೂರ್ತಿ ಶರಣರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯ ಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಶರಣರ ಪರ ವಕೀಲೆ ಸ್ವಾಮಿನಿ ಗಣೇ‌ಶ್ ಮೋಹನಂಬಾಳ್, ಸಹಿ ಮಾಡಬೇಕಾದ ಚೆಕ್‌ ಮತ್ತು ಕೆಲ ದಾಖಲೆಗಳನ್ನು ನ್ಯಾಯಪೀಠಕ್ಕೆ ನೀಡಿದರು.

ಚೆಕ್‌ಗಳನ್ನು ವಿವರವಾಗಿ ಪರಿಶೀಲಿಸಿದ ನ್ಯಾಯಪೀಠ, ‘ನೌಕರರಿಗೆ ಸಂಬಳ ನೀಡಬೇಕಾದ ಎಲ್ಲಾ ಚೆಕ್‌ಗಳೂ ಸೆಲ್ಫ್ ಆರ್‌ಟಿಜಿಎಸ್‌ ಎಂದಿವೆ. ₹ 14.30 ಲಕ್ಷಗಳಷ್ಟು ಬೃಹತ್ ಮೊತ್ತದ ಈ ಚೆಕ್‌ಗಳನ್ನು ಸೆಲ್ಫ್ ಎಂದು ನಮೂದಿಸಿರುವುದು ಯಾಕೆ?,
‍ಪ್ರಸ್ತಾವದಲ್ಲಿ ಸ್ಪಷ್ಟತೆಯೇ ಇಲ್ಲ’ ಎಂದು ಅನುಮಾನ ವ್ಯಕ್ತಪಡಿಸಿತು.

ADVERTISEMENT

ಅರ್ಜಿದಾರರ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಕಿರಣ್ ಜವಳಿ, ‘ಅರ್ಜಿದಾರರು ಸಲ್ಲಿಸಿರುವ ಪ್ರಸ್ತಾವ ಮೇಲ್ನೋಟಕ್ಕೆ ಸಮರ್ಪಕವಾಗಿಲ್ಲ. ಈ ಪ್ರಸ್ತಾವವನ್ನು ನ್ಯಾಯಪೀಠವು ಚಿತ್ರದುರ್ಗ ಸೆಷನ್ಸ್ ಕೋರ್ಟ್‌ಗೇ ವರ್ಗಾಯಿಸುವುದು ಸೂಕ್ತ’ ಎಂದರು.

ಇದಕ್ಕೆ ಮೌಖಿಕವಾಗಿ ಸಮ್ಮತಿಸಿದ ನ್ಯಾಯಪೀಠ, ‘ನೌಕರರು ಹಸಿವಿನಿಂದ ಬಳಲಬಾರದು ಎಂಬುದಷ್ಟೇ ಕೋರ್ಟ್ ಕಾಳಜಿ. ಆದರೆ, ನೀವು ಈ ರೀತಿ ಸೆಲ್ಫ್ ಚೆಕ್‌ಗಳನ್ನು ತೋರಿಸುತ್ತಿರುವುದು ಸರಿಯಲ್ಲ. ಸೆಷನ್ಸ್ ನ್ಯಾಯಾಲಯ‌ ಇದನ್ನು ತಕ್ಷಣವೇ ಪರಿಶೀಲಿಸುವಂತೆ ಆದೇಶಿಸುತ್ತೇವೆ. ನಾಳೆ ಪೂರ್ಣ ಸ್ಪಷ್ಟತೆಯೊಂದಿಗೆ ಜ್ಞಾಪನಾ ಪತ್ರ (ಮೆಮೊ) ಸಲ್ಲಿಸಿ’ ಎಂದು ವಿಚಾರಣೆಯನ್ನು ಇದೇ 30ಕ್ಕೆ (ಶುಕ್ರವಾರ) ಮುಂದೂಡಿತು.

ಪ್ರಕರಣವೇನು?:‘ಮಠದ ದೈನಂದಿನ ವ್ಯವಹಾರಗಳಿಗೆ ಅನುವಾಗುವಂತೆ ಮತ್ತು ಮಠದ ಸಿಬ್ಬಂದಿಯ ಸಂಬಳ ಬಿಡುಗಡೆಗೆ ಸಂಬಂಧಿಸಿದ ಚೆಕ್‌ ಮತ್ತು ಇತರೆ ದಾಖಲೆಗಳಿಗೆ ಜೈಲಿನಿಂದಲೇ ಸಹಿ ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ಶರಣರು ಹೈಕೋರ್ಟ್‌ನಲ್ಲಿ ಈ ಮೇಲ್ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.