ADVERTISEMENT

ಕೋವಿಡ್ ನಿಯಂತ್ರಣಕ್ಕೆ ಪರೀಕ್ಷೆ ಹೆಚ್ಚಿಸಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ದೀಪಾ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 7:01 IST
Last Updated 18 ಅಕ್ಟೋಬರ್ 2020, 7:01 IST

ಚಿತ್ರದುರ್ಗ: ‘ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಿ. ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಿ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ದೀಪಾ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಮಳೆ ಹಾಗೂ ಚಳಿಗಾಲವಾಗಿರುವುದರಿಂದ ವೈರಸ್ ಬಹುಬೇಗ ಜಾಗೃತಗೊಳ್ಳುತ್ತವೆ. ಹೀಗಾಗಿ ವ್ಯಾಪಕ ಪ್ರಚಾರ ಕೈಗೊಂಡು ಸೋಂಕಿತರ ಸಂಖ್ಯೆ ಕಡಿಮೆಗೊಳಿಸಲು ಮುಂದಾಗಿ’ ಎಂದು ಹೇಳಿದರು.

‘ನವರಾತ್ರಿಯಿಂದ ಸಾಲು ಸಾಲು ಹಬ್ಬಗಳಿವೆ. ಜನ ಅಲ್ಲಲ್ಲಿ ಗುಂಪು ಸೇರುವ ಸಾಧ್ಯತೆ ಇದೆ. ಇದನ್ನು ತಡೆಯಲೇಬೇಕು. ಸರ್ಕಾರದ ಮಾರ್ಗಸೂಚಿ ಪ್ರಕಾರ ನಿಯಮ ಪಾಲಿಸಬೇಕು. ಆರೋಗ್ಯ ಇಲಾಖೆ ಜಾಗ್ರತೆ ವಹಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ‘ಜಿಲ್ಲೆಯಲ್ಲಿ 12,786 ಹೆಕ್ಟೇರ್ ಈರುಳ್ಳಿ ಸೇರಿ ಒಟ್ಟು 17 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ₹ 17.21 ಕೋಟಿ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಸಭೆಗೆ ಮಾಹಿತಿ ನೀಡಿದರು.

ADVERTISEMENT

‘ಬೆಳೆ ಹಾನಿ ಸಂಬಂಧ ನಷ್ಟದ ವಿವರವನ್ನು ಶೀಘ್ರ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡಿ’ ಎಂದು ದೀಪಾ ಸೂಚಿಸಿದರು.

‘ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಅಧಿಕ ಮಳೆಯಾಗಿದ್ದು, ಅತಿವೃಷ್ಟಿಯಿಂದ ಶೇಂಗಾ ಬೆಳೆಯ ಇಳುವರಿಯಲ್ಲಿ ಸಾಕಷ್ಟು ಕುಂಠಿತವಾಗಿದೆ. ಸಂಭವಿಸಿದ ನಷ್ಟದ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ಅಳವಡಿಸಿ’ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

‘2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 76,538 ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ ಒಟ್ಟು 50,577 ಫಲಾನುಭವಿಗಳಿಗೆ ₹ 72 ಕೋಟಿ ವಿಮಾ ಪರಿಹಾರ ಪಾವತಿಯಾಗಿದೆ. ಪ್ರಸಕ್ತ 2020-21ನೇ ಸಾಲಿನ ಮುಂಗಾರು ಹಂಗಾಮಿಗೆ 85,912 ರೈತರು ಬೆಳೆವಿಮೆ ನೋಂದಣಿ ಮಾಡಿಸಿದ್ದಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಸಭೆಗೆ ಮಾಹಿತಿ ನೀಡಿದರು.

‘ಜಿಲ್ಲೆಯ ವಾಡಿಕೆ ಮಳೆ 535 ಮಿ.ಮೀ ಇದೆ. ಆದರೆ, ಸೆಪ್ಟೆಂಬರ್ ಅಂತ್ಯದವರೆಗೆ 657 ಮಿ.ಮೀ ಮಳೆಯಾಗಿದೆ. ಶೇ 48ರಷ್ಟು ಅಧಿಕ ಮಳೆಯಾಗಿದೆ. ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಶೇಂಗಾ ಇಳುವರಿಯಲ್ಲಿ ಕುಸಿತವಾಗಿದೆ. ಆದ್ದರಿಂದ ರೈತ ಸಂಘಟನೆಗಳು ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಸರ್ಕಾರದ ಗಮನಸೆಳೆಯಬೇಕು’ ಎಂದು ಮನವಿ ಮಾಡಿದರು.

182 ಮಕ್ಕಳು ಮುಖ್ಯವಾಹಿನಿಗೆ: ‘2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 244 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ನೇರ ದಾಖಲಾತಿಯಲ್ಲಿ 21 ಹಾಗೂ ಸ್ವಯಂಸೇವಕ ರಹಿತ ಕಾರ್ಯಕ್ರಮದಡಿ 161 ಮಕ್ಕಳು ಸೇರಿ ಒಟ್ಟು 182 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ. ಬಾಕಿ ಉಳಿದ 62 ಮಕ್ಕಳನ್ನು ತ್ವರಿತವಾಗಿ ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಡಿಪಿಐ ರವಿಶಂಕರ್ ರೆಡ್ಡಿ ಹೇಳಿದರು.

ಜಿಲ್ಲೆಯ 3,064 ಅಗಸ ವೃತ್ತಿಯ ಕಾರ್ಮಿಕರಿಗೆ ಹಾಗೂ 1,454 ಕ್ಷೌರಿಕ ವೃತ್ತಿಯ ಕಾರ್ಮಿಕರು ಸೇರಿ 4,518 ಕಾರ್ಮಿಕರಿಗೆ ತಲಾ ₹ 5 ಸಾವಿರದಂತೆ ಒಟ್ಟು ₹ 2.26 ಕೋಟಿ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾ ಕಾರ್ಮಿಕರ ಅಧಿಕಾರಿ ವಿನುತಾ ಸಭೆಗೆ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಟಿ.ಯೋಗೇಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.