ADVERTISEMENT

ಭೂಸ್ವಾಧೀನ; ಸೂಕ್ತ ಪರಿಹಾರಕ್ಕೆ ಆಗ್ರಹ

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯ ಕೆಲವೆಡೆ ಭ್ರಷ್ಟಾಚಾರ; ಕಿಸಾನ್ ಸಂಘ ಆರೋಪ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 9:52 IST
Last Updated 18 ನವೆಂಬರ್ 2019, 9:52 IST
ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ನಡೆಯಲಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಾಗಿ ರೈತರಿಂದ ಭೂಸ್ವಾಧೀನ ಪಡೆಯುವ ವೇಳೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಕಿಸಾನ್ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ನಡೆಯಲಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಾಗಿ ರೈತರಿಂದ ಭೂಸ್ವಾಧೀನ ಪಡೆಯುವ ವೇಳೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಕಿಸಾನ್ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.   

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಾಗಿ ರೈತರ ಜಮೀನನ್ನು ವಶಪಡಿಸಿಕೊಳ್ಳುವ ಸಮಯದಲ್ಲಿ ಎಕರೆ, ಗುಂಟೆ ಬದಲಿಗೆ ಚದುರಡಿ ಲೆಕ್ಕದಲ್ಲೇ ದರ ನಿಗದಿಪಡಿಸಬೇಕು ಎಂದು ರಾಷ್ಟ್ರೀಯ ಕಿಸಾನ್ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ರೈತ ಸಮುದಾಯಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಈ ಹಿನ್ನಲೆಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ತಾಲ್ಲೂಕಿನ ಬೆಳಗಟ್ಟ, ಕಲ್ಲೇನಹಳ್ಳಿ, ಹಾಯ್ಕಲ್ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ 80ರಿಂದ 100ಮಂದಿ ರೈತರ ಸುಮಾರು 623 ಎಕರೆಯಷ್ಟು ಜಾಗವನ್ನು ಕೆಲ ಗುತ್ತಿಗೆದಾರರುಅತ್ಯಂತ ಕಡಿಮೆ ದರಕ್ಕೆ ರೈತರನ್ನು ವಂಚಿಸಿ ಪಡೆದಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ADVERTISEMENT

ರೈತರನ್ನು ವಂಚಿಸಿ ಪಡೆದ ಪ್ರತಿ ಎಕರೆಗೂ ₹ 10ಲಕ್ಷ ದರ ನಿಗದಿ ಪಡಿಸಬೇಕು. ಅದಕ್ಕೂ ಮುನ್ನ ವಂಚನೆಗೆ ಒಳಗಾದ ಗ್ರಾಮಗಳ ರೈತರೊಂದಿಗೆ ನೋಂದಣಿ ಇಲಾಖೆ ಅಧಿಕಾರಿಗಳು, ತಹಶೀಲ್ದಾರರು ಜಂಟಿ ಸಭೆ ಕರೆದು ದರ ನಿಗದಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೃಷಿ ಭೂಮಿ ಕಳೆದುಕೊಂಡ ಪ್ರತಿ ರೈತ ಕುಟುಂಬಕ್ಕೆ ಸರ್ಕಾರಿ ನೌಕರಿ ಒದಗಿಸಬೇಕು. ಸಾಲ ಮನ್ನಾ ಮಾಡಬೇಕು. ಮಕ್ಕಳ ಶೈಕ್ಷಣಿಕ ಅಭ್ಯಾಸ ಹಾಗೂ ವಿವಾಹ ವೆಚ್ಚ ಭರಿಸಬೇಕು. ಭೂಸ್ವಾಧೀನ ಪ್ರಕ್ರಿಯೆಯನ್ನು ಕಾನೂನಾತ್ಮಕವಾಗಿ ಮಾಡದೇ ಕಾಮಗಾರಿ ಕೈಗೊಂಡಿದ್ದರೆ, ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ, ಮಹಿಳಾ ಅಧ್ಯಕ್ಷೆ ಮಂಜುಳಾ ಡಾ. ಸ್ವಾಮಿ, ರಾಜ್ಯ ಸಂಚಾಲಕರಾದ ಚಂದ್ರಕಲಾ, ಆರ್. ಹೇಮಂತ್‌ಕುಮಾರ್, ಸದಸ್ಯರಾದ ಶಾರದ ನಾಯ್ಕ, ಮಂಜುಳಾ ಅವರೂ ಇದ್ದರು.

ಅಮೋಘವರ್ಷ ಹೆಸರಿಡಲು ಒತ್ತಾಯ:ಕಲಬುರಗಿ ವಿಮಾನ ನಿಲ್ದಾಣಕ್ಕೆ ಕನ್ನಡನಾಡಿನ ಹೆಮ್ಮೆಯ ರಾಜ ಅಮೋಘವರ್ಷ ನೃಪತುಂಗ ಹೆಸರನ್ನು ಇಡಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಸರ್ವ ಧರ್ಮಗಳ ಸಮಾನತೆಯ ಹರಿಕಾರ, ಕನ್ನಡ ಭಾಷೆ ಬೆಳವಣಿಗೆಗೆ ನೀರೆರದು ಪ್ರೋತ್ಸಾಹಿಸಿದ ಅಮೋಘವರ್ಷ ನೃಪತುಂಗ ರಾಜನ ಹೆಸರಿಡುವುದು ಸೂಕ್ತ. ಆದ್ದರಿಂದ ಸರ್ಕಾರ ಕೂಡಲೇ ನಾಮಕರಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಕೆ.ಟಿ. ಶಿವಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷರಾದ ಟಿ. ಆನಂದ್, ಹನುಮಂತರಾಯ, ಮುಖಂಡರಾದ ಪ್ರಕಾಶ್ ಎಚ್. ಕೊಡಗವಳ್ಳಿ, ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.