ADVERTISEMENT

ಯುವಕನ ಕೊಲೆ: ಮೂವರ ಬಂಧನ

ಸಾಲ ಮರಳಿಸುವಂತೆ ಪೀಡಿಸಿದ್ದಕ್ಕೆ ಕುಪಿತಗೊಂಡ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 14:06 IST
Last Updated 7 ಡಿಸೆಂಬರ್ 2021, 14:06 IST
ಮುಬಾರಕ್, ಪ್ರದೀಪ್ ಹಾಗೂ ಹುಸೇನ್
ಮುಬಾರಕ್, ಪ್ರದೀಪ್ ಹಾಗೂ ಹುಸೇನ್   

ಚಿತ್ರದುರ್ಗ: ಸಾಲ ಮರಳಿಸುವಂತೆ ಪೀಡಿಸಿದ್ದರಿಂದ ಕುಪಿತಗೊಂಡ ಮೂವರು ಆರೋಪಿಗಳು ಮೊಹಮ್ಮದ್ ಅಜರ್‌(28) ಎಂಬಾತನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹತ್ಯೆ ನಡೆದ ಆರು ಗಂಟೆಯ ಒಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಾರುತಿ ನಗರದ ಮುಬಾರಕ್ (31), ಕವಾಡಿಗರಹಟ್ಟಿಯ ಪ್ರದೀಪ್ (26) ಹಾಗೂ ಚೇಳುಗುಡ್ಡದ ಹುಸೇನ್ (30) ಬಂಧಿತರು. ನ್ಯಾಯಾಧೀಶರ ಎದುರು ಹಾಜರುಪಡಿಸಿ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ.

‘ಹೊರಪೇಟೆ ನಿವಾಸಿ ಮೊಹಮ್ಮದ್‌ ಅಜರ್‌ ದ್ವಿಚಕ್ರ ವಾಹನ ಮಾರಾಟ ಮಾಡುತ್ತಿದ್ದನು. ಆರ್ಥಿಕವಾಗಿ ಸಬಲನಾಗಿದ್ದ ಯುವಕ ಇಸ್ಪಿಟ್‌, ಜೂಜು ದಂಧೆಯಲ್ಲಿ ಸಕ್ರಿಯನಾಗಿದ್ದನು. ಸಾಲ ಕೊಟ್ಟು ಬಡ್ಡಿ ವಸೂಲಿ ಮಾಡುತ್ತಿದ್ದನು. ಅಜರ್‌ ಸ್ನೇಹ ಸಂಪಾದಿಸಿದ ಮುಬಾರಕ್‌ ₹ 40 ಸಾವಿರ ಹಾಗೂ ಪ್ರದೀಪ್‌ ₹ 20 ಸಾವಿರ ಸಾಲ ಪಡೆದಿದ್ದರು. ಈ ಸಾಲ ಮರಳಿಸುವಂತೆ ಅಜರ್‌ ಪೀಡಿಸುತ್ತಿದ್ದನು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.

ADVERTISEMENT

‘ಸಾಲವನ್ನು ಮರಳಿಸುವ ವಿಚಾರದಲ್ಲಿ ಅಜರ್‌ ಮತ್ತು ಮುಬಾರಕ್‌ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಮುಬಾರಕ್‌ ಪತ್ನಿಯ ಬಗ್ಗೆ ಅಜರ್‌ ಹಗುರವಾಗಿ ಮಾತನಾಡಿದ್ದಾನೆ. ಇದರಿಂದ ಕುಪಿತಗೊಂಡ ಮುಬಾರಕ್‌, ಅಜರ್‌ ಕೊಲೆಗೆ ನಿರ್ಧರಿಸಿದ್ದಾನೆ. ಅಜರ್‌ ಬಳಿ ಸಾಲ ಪಡೆದಿದ್ದ ಪ್ರದೀಪ್‌ ಹಾಗೂ ಸ್ನೇಹಿತ ಹುಸೇನ್‌ನೊಂದಿಗೆ ಸೇರಿ ಸಂಚು ರೂಪಿಸಿದ್ದನು’ ಎಂದು ವಿವರಿಸಿದ್ದಾರೆ.

‘ಸಾಲ ಮರಳಿಸುವುದಾಗಿ ಅಜರ್‌ಗೆ ಫೋನ್‌ ಮಾಡಿ ಸೋಮವಾರ ರಾತ್ರಿ 10.30ಕ್ಕೆ ಕರೆಸಿಕೊಂಡಿದ್ದಾರೆ. ಬಾಲಕಿಯರ ಪದವಿ ಪೂರ್ವ ಕಾಲೇಜು ಸಮೀಪದ ಗಲ್ಲಿಯಲ್ಲಿ ₹ 30 ಸಾವಿರ ನೀಡಿದ್ದಾರೆ. ದ್ವಿಚಕ್ರ ವಾಹನದ ಮೇಲೆ ಕುಳಿತು ಹಣ ಎಣಿಕೆ ಮಾಡಿಕೊಳ್ಳುತ್ತಿದ್ದ ಅಜರ್‌ ಕುತ್ತಿಗೆಗೆ ಮುಬಾರಕ್‌ ಚಾಕುವಿನಿಂದ ಚುಚ್ಚಿದ್ದಾನೆ. ಪ್ರದೀಪ್‌ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ನೆಲಕ್ಕೆ ಬಿದ್ದಾಗ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

‘ತಕ್ಷಣ ಕಾರ್ಯಕಪ್ರವೃತ್ತರಾದ ನಗರ ಠಾಣೆಯ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದರು. ವಿದ್ಯಾನಗರದಲ್ಲಿ ಮಂಗಳವಾರ ನಸುಕಿನಲ್ಲಿ ಮೂವರನ್ನು ವಶಕ್ಕೆ ಪಡೆಯಲಾಯಿತು. ಸ್ವತ್ತು ಕಳವು, ಡ್ರಗ್ಸ್‌ ಸೇರಿ ಐದು ಪ್ರಕರಣದಲ್ಲಿ ಮುಬಾರಕ್‌ ಆರೋಪಿಯಾಗಿದ್ದನು. ಹುಸೇನ್‌ ವಿರುದ್ಧವೂ ಡಕಾಯಿತಿ, ಕಳವು ಸೇರಿ ಐದು ಪ್ರಕರಣ ದಾಖಲಾಗಿದ್ದವು’ ಎಂದು ಹೇಳಿದರು.

***

ಅಜರ್‌ ಹತ್ಯೆಗೆ ಆರೋಪಿಗಳು ಮೂರು ಬಾರಿ ಯತ್ನಿಸಿದ್ದರು. ಹಣ ಕೊಡುವುದಾಗಿ ಕರೆಸಿಕೊಂಡಿದ್ದರು. ಆ ಸಮಯದಲ್ಲಿ ಅಜರ್‌ ಜೊತೆಗೆ ಸ್ನೇಹಿತರೂ ಇದ್ದಿದ್ದರಿಂದ ಸಂಚು ವಿಫಲಗೊಂಡಿತ್ತು.

ಜಿ.ರಾಧಿಕಾ,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.