ಚಿತ್ರದುರ್ಗ: ಸರ್ಕಾರಿ ವೈದ್ಯಕೀಯ ಕಾಲೇಜಿಗೆ 150 ಸೀಟುಗಳನ್ನು ಮಂಜೂರು ಮಾಡಿರುವ ರಾಷ್ಟ್ರೀಯ ವೈದ್ಯಕೀಯ ಮಂಡಳಿ, 2023–24ನೇ ಸಾಲಿನ ಪ್ರವೇಶಾತಿಗೆ ಅವಕಾಶ ಕಲ್ಪಿಸಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
‘ಚಿತ್ರದುರ್ಗ ಜಿಲ್ಲೆಯ ಜನರ ಬಹುದಿನದ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅನುಮತಿ ನೀಡಿದೆ. ತಾತ್ಕಾಲಿಕ ಕಟ್ಟಡದ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಜಿಲ್ಲಾಡಳಿತ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸ್ಪಂದಿಸುವ ನಿರೀಕ್ಷೆ ಇದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರಾಜ್ಯ ಸರ್ಕಾರ ಕಳೆದ ವರ್ಷ ಮಂಜೂರಾತಿ ನೀಡಿತ್ತು. ರಾಷ್ಟ್ರೀಯ ವೈದ್ಯಕೀಯ ಮಂಡಳಿಯಲ್ಲಿ ಬೆಂಗಳೂರಿನವರೇ ಆಗಿರುವ ಗಂಗಾಧರಯ್ಯ ನಿರ್ದೇಶಕರಾಗಿರುವುದರಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾಲೇಜು ಪ್ರಾರಂಭವಾಗುತ್ತಿದೆ. ಸೀಟು ಮಂಜೂರು ಮಾಡಿ ವೈದ್ಯಕೀಯ ಮಂಡಳಿ ಮೂರು ದಿನಗಳ ಹಿಂದೆ ಆದೇಶ ಹೊರಡಿಸಿದೆ’ ಎಂದು ವಿವರಿಸಿದರು.
‘ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ತಾತ್ಕಾಲಿಕವಾಗಿ ಕಟ್ಟಡವೊಂದರ ಅಗತ್ಯವಿದೆ. ಖಾಸಗಿ ಕಟ್ಟಡದಲ್ಲಿ ಕಾಲೇಜಿಗೆ ಅವಕಾಶ ಸಿಕ್ಕಿಲ್ಲ. ಚಿತ್ರದುರ್ಗ ತಾಲ್ಲೂಕಿನ ಜಿ.ಆರ್.ಹಳ್ಳಿಯಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಪರಿಶೀಲಿಸಲಾಗಿದೆ. ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿದರೆ ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.
‘ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವನ್ನು ಮರುಪರಿಶೀಲನೆ ಮಾಡುವ ಅಗತ್ಯವಿದೆ. ವಿಶಾಲ ಪ್ರದೇಶದಲ್ಲಿ ಕಾಲೇಜು ನಿರ್ಮಾಣವಾದರೆ ಅನುಕೂಲ. ಇಂಗಳದಾಳ್ ಸಮೀಪದ ಬೆಟ್ಟ ಪ್ರದೇಶವನ್ನು ಪರಿಶೀಲಿಸಲಾಗಿದೆ. ಚಿಕ್ಕಾಪುರ ಗ್ರಾಮ ವ್ಯಾಪ್ತಿಯ 30 ಎಕರೆ ಜಮೀನು ಲಭ್ಯವಿದೆ. ಜಾಲಿಕಟ್ಟೆ ಗ್ರಾಮದ ವ್ಯಾಪ್ತಿಯಲ್ಲಿ 40 ಎಕರೆ ಜಾಗ ಇದ್ದು, ಗ್ರಾಮಸ್ಥರ ಸಹಕಾರ ಬೇಕಿದೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ಉಪಾಧ್ಯಕ್ಷ ಸಂಪತ್, ಕಾರ್ಯದರ್ಶಿ ಮೋಹನ್, ಮುಖಂಡರಾದ ದಗ್ಗೆ ಶಿವಪ್ರಕಾಶ್, ಜಯಣ್ಣ, ನಾಗರಾಜ್ ಬೇದ್ರೆ ಇದ್ದರು.
ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಕುಂಚಿಟಿಗರನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ಕೆಲ ತೊಡಕುಗಳು ಎದುರಾಗಿವೆ.ಎ.ನಾರಾಯಣಸ್ವಾಮಿಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.