ADVERTISEMENT

ಆಸ್ಪತ್ರೆಗೆ ಸಮರ್ಪಕ ಸೌಲಭ್ಯ ಕಲ್ಪಿಸಿ

ಹೊಳಲ್ಕೆರೆ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ್ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 7:54 IST
Last Updated 15 ಡಿಸೆಂಬರ್ 2020, 7:54 IST
ಹೊಳಲ್ಕೆರೆಯ ಸಾರ್ವಜನಿಕ ಆಸ್ಪತ್ರೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ್ ಹಾಗೂ ಉಪಾಧ್ಯಕ್ಷ ಕೆ.ಸಿ. ರಮೇಶ್ ಸೋಮವಾರ ಭೇಟಿ ನೀಡಿ ಬಾಣಂತಿಯರ ಆರೋಗ್ಯ ವಿಚಾರಿಸಿದರು.
ಹೊಳಲ್ಕೆರೆಯ ಸಾರ್ವಜನಿಕ ಆಸ್ಪತ್ರೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ್ ಹಾಗೂ ಉಪಾಧ್ಯಕ್ಷ ಕೆ.ಸಿ. ರಮೇಶ್ ಸೋಮವಾರ ಭೇಟಿ ನೀಡಿ ಬಾಣಂತಿಯರ ಆರೋಗ್ಯ ವಿಚಾರಿಸಿದರು.   

ಹೊಳಲ್ಕೆರೆ: ರೋಗಿಗಳಿಗೆ ಸಂಬಂಧ ಇಲ್ಲದ ಅಪರಿಚಿತರನ್ನು ಆಸ್ಪತ್ರೆಯ ಒಳಗೆ ಬಿಡಬೇಡಿ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ್ ತಾಲ್ಲೂಕು ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ಅವರಿಗೆ ಸೂಚಿಸಿದರು.

‘ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಸೌಲಭ್ಯಗಳ ಪರಿಶೀಲನೆ ನಡೆಸಿದ ಅವರು, ರಾತ್ರಿ ವೇಳೆ ರೋಗಿಗಳಿಗೆ ಸಂಬಂಧವೇ ಇಲ್ಲದವರು ಆಸ್ಪತ್ರೆಯ ಒಳಗೆ ಬರುತ್ತಾರೆ. ಕುಡಿತದ ಅಮಲಿನಲ್ಲಿ ಇರುವವರು ಆಸ್ಪತ್ರೆ ಪ್ರವೇಶಿಸಿ ಒಳ ರೋಗಿಗಳ ವಾರ್ಡ್‌ಗಳಲ್ಲಿ ಮಲಗುತ್ತಾರೆ ಎಂಬ ದೂರುಗಳು ಬಂದಿವೆ. ಆಸ್ಪತ್ರೆಯಲ್ಲಿ ಬಾಣಂತಿಯರು, ಮಹಿಳಾ ರೋಗಿಗಳು, ಮಹಿಳಾ ಸಿಬ್ಬಂದಿ ಇರುತ್ತಾರೆ. ಏನಾದರೂ ಅನಾಹುತ ನಡೆದರೆ ಯಾರು ಹೊಣೆ? ರಾತ್ರಿ ಕಾವಲುಗಾರನನ್ನು ನೇಮಿಸಿ ಆಸ್ಪತ್ರೆಗೆ ಭೇಟಿ ನೀಡುವವರ ಪೂರ್ಣ ವಿವರ ಪಡೆದ ನಂತರವೇ ಒಳಗೆ ಬಿಡಬೇಕು. ಕೆಲವರು ಎಲೆ ಅಡಿಕೆ ಹಾಕಿಕೊಂಡು ಶೌಚಾಲಯ, ವಾರ್ಡ್ ಗೋಡೆಗಳಿಗೆ ಉಗುಳುತ್ತಾರೆ’ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕೆ.ಸಿ. ರಮೇಶ್, ‘ಶಾಸಕ ಎಂ. ಚಂದ್ರಪ್ಪ ಅವರು ಮುತುವರ್ಜಿಯಿಂದ ದೊಡ್ಡ ಆಸ್ಪತ್ರೆ ಕಟ್ಟಿಸಿದ್ದಾರೆ. ಇಲ್ಲಿನ ವೈದ್ಯರ ಬಗ್ಗೆ ಹೆಚ್ಚು ದೂರುಗಳಿಲ್ಲ. ಆದರೆ, ಸೌಲಭ್ಯಗಳ ಕೊರತೆ ಬಗ್ಗೆ ದೂರುಗಳಿವೆ. ಇಲ್ಲಿಂದ ಬೇರೆ ಕಡೆಗೆ ನಿಯೋಜನೆ ಆಗಿರುವ ಸಿಬ್ಬಂದಿಯನ್ನು ವಾಪಸ್ ಕರೆಸಿ. ಮಧುಮೇಹ ಪರೀಕ್ಷೆ ನಡೆಸುವ ಕಿಟ್ ಇಲ್ಲ. ಸಮಯಕ್ಕೆ ಸರಿಯಾಗಿ ಆಮ್ಲಜನಕ ಸಿಗುತ್ತಿಲ್ಲ. ಡಯಾಲಿಸಿಸ್ ಘಟಕ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತ ವೈದ್ಯಾಧಿಕಾರಿ ಸರಿಯಾಗಿ ಆಸ್ಪತ್ರೆಯಲ್ಲಿ ಇರುವುದಿಲ್ಲ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ಈ ಬಗ್ಗೆ ಕ್ರಮ ವಹಿಸಿ’ ಎಂದರು.

ADVERTISEMENT

‘ತಿಂಗಳಿಗೆ ₹ 13,000 ನೀಡಬೇಕಿದ್ದು, ಕೇವಲ ₹ 6,000 ನೀಡಲಾಗುತ್ತಿದೆ’ ಎಂದು ಡಿ ದರ್ಜೆ ನೌಕರರರು ದೂರಿದರು. ‘ಮೊದಲು ಏಜೆನ್ಸಿಯನ್ನು ಕರೆಸಿ ಸಮಸ್ಯೆ ಸರಿಪಡಿಸಿ’ ಎಂದು ಅಧ್ಯಕ್ಷ ಅಶೋಕ್ ವೈದ್ಯಾಧಿಕಾರಿಗೆ ಸೂಚಿಸಿದರು.

‘ಆಸ್ಪತ್ರೆಯಲ್ಲಿದ್ದ ಜನೌಷಧ ಕೇಂದ್ರ ಮುಚ್ಚಿದ್ದು, ರೋಗಿಗಳು ಹೆಚ್ಚು ಬೆಲೆಗೆ ಔಷಧ ಕೊಳ್ಳುವಂತಾಗಿದೆ. ವರ್ಷವಾದರೂ ಆಂಬಲೆನ್ಸ್‌ ದುರಸ್ತಿ ಮಾಡಿಸದೇ ಇರುವುದರಿಂದ ಬಡ ರೋಗಿಗಳಿಗೆ ತೊಂದರೆ ಆಗಿದೆ. ಆಸ್ಪತ್ರೆ ಸ್ವಚ್ಛ ಮಾಡುವ ಸಿಬ್ಬಂದಿಗೆ ಸರಿಯಾಗಿ ವೇತನ ನೀಡಿ’ ಎಂದು ವಕೀಲ ಎಸ್. ವೇದಮೂರ್ತಿ ಸಲಹೆ ನೀಡಿದರು.

ಡಾ. ಕೃಷ್ಣಮೂರ್ತಿ, ಡಾ.ಬಿ. ಮಂಜುನಾಥ್, ಡಾ. ವಿನಯ್ ಸಜ್ಜನ್, ಡಾ. ಹರೀಶ್, ಡಾ. ಭಕ್ತವತ್ಸಲ, ಡಾ.ಸಿ.ಎಚ್. ಮಂಜುನಾಥ್, ಡಾ. ಸುಮಾ, ಡಾ. ರುದ್ರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.