ADVERTISEMENT

ರಾಜೀವ ಗಾಂಧಿ ಆವಾಸ್‌ ಯೋಜನೆ: 1,018 ಮನೆ ಹಸ್ತಾಂತರ– ಖಾದರ್‌

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 14:11 IST
Last Updated 20 ಡಿಸೆಂಬರ್ 2018, 14:11 IST
ಯು.ಟಿ.ಖಾದರ್‌
ಯು.ಟಿ.ಖಾದರ್‌   

ಚಿತ್ರದುರ್ಗ: ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ವಸತಿ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ರಾಜೀವ ಗಾಂಧಿ ವಸತಿ ಯೋಜನೆಯಡಿ ಮಂಜೂರಾಗಿದ್ದ 1,563 ಮನೆಗಳಲ್ಲಿ 1,018 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್‌ ತಿಳಿಸಿದ್ದಾರೆ.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

‘1,304 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕೆಲ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಫಲಾನುಭವಿಗಳು ಶೇ 10ರಷ್ಟು ವಂತಿಕೆ ಕೂಡ ಭರಿಸದ ಪರಿಣಾಮ 80 ಮನೆಗಳ ಹಸ್ತಾಂತರ ಪ್ರಕ್ರಿಯೆಗೆ ಕೊಂಚ ತೊಡಕಾಗಿದೆ. ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ) ಹಾಗೂ ಬುಡಕಟ್ಟು ಉಪ ಯೋಜನೆಯಿಂದ (ಟಿಎಸ್‌ಪಿ) ಹಣಕಾಸಿನ ನೆರವು ಪಡೆಯಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಿಗೆ ಈ ಯೋಜನೆಯಡಿ ಕೇಂದ್ರ ಸರ್ಕಾರ ನೀಡುತ್ತಿದ್ದ ಶೇ 75ರಷ್ಟು ಅನುದಾನವನ್ನು 2016ರಲ್ಲಿ ಶೇ 60ಕ್ಕೆ ಇಳಿಸಿತು. ಇದರಿಂದ ಫಲಾನುಭವಿಗಳ ವೆಚ್ಚದ ಪಾಲು ಶೇ 10ರಿಂದ ಶೇ 25ಕ್ಕೆ ಏರಿಕೆ ಆಗಿದೆ’ ಎಂದು ವಿವರಣೆ ನೀಡಿದ್ದಾರೆ.

‘ಶೇ 25ರಷ್ಟು ವೆಚ್ಚವನ್ನು ಭರಿಸುವ ಕುರಿತು ಫಲಾನುಭವಿಗಳಿಗೆ ನಗರಸಭೆ ತಿಳುವಳಿಕೆ ನೀಡಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಆಗುತ್ತಿದ್ದ ಹೊರೆಯನ್ನು ತಪ್ಪಿಸಲು ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಅನುದಾನ ಪಡೆಯಲಾಗಿದೆ. ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಫಲಾನುಭವಿಗಳ ಹೆಚ್ಚುವರಿ ವಂತಿಗೆ ಹಣವನ್ನು ಭರಿಸುವಂತೆ ಬಿಸಿಎಂ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.