ಹಿರಿಯೂರು: ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ, ಆಸ್ಪತ್ರೆಯಲ್ಲಿ ಹಾಜರಿರದ ಆರೋಗ್ಯಾಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದಿವಾಕರ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಗುರುವಾರ ಪತ್ರ ಬರೆದಿದ್ದಾರೆ.
ತಾಲ್ಲೂಕಿನ ಐಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ್ದ ದಿವಾಕರ್, ‘ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ ವೈದ್ಯರು ಆಸ್ಪತ್ರೆಯಲ್ಲಿ ಹಾಜರಿರದ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ವೈದ್ಯರು ರಜೆ ಎಂದು ಒಬ್ಬರು, ದೂರವಾಣಿ ಕರೆ ಮಾಡಿ ರಜೆ ಎಂದು ತಿಳಿಸಿದ್ದಾರೆ ಎಂದು ಮತ್ತೊಬ್ಬರು ಹೇಳಿದರು. ವೈದ್ಯರ ಪರವಾಗಿ ಬೇರೆ ಯಾರೋ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿರುವುದು ಕಂಡು ಬಂದಿದ್ದು, ಇದುಅಪರಾಧ’ ಎಂದು ಸಿಇಒ ಪತ್ರದಲ್ಲಿ ಹೇಳಿದ್ದಾರೆ.
‘ಕೆಲವು ಸಿಬ್ಬಂದಿ ಹೆಸರಿನ ಮುಂದೆ ನಿಯೋಜನೆ ಎಂದು, ಮತ್ತೆ ಕೆಲವರ ಹೆಸರಿನ ಮುಂದೆ 3 ದಿನ ನಿಯೋಜನೆ ಎಂದು ಬರೆಯಲಾಗಿದೆ. ಇವೆಲ್ಲ ನಿಯೋಜನೆಗಳು ಸಕ್ರಮ ಪ್ರಾಧಿಕಾರದಿಂದ ಆಗಿದೆಯೇ ಅಥವಾ ಅವರೇ ನಿರ್ಧರಿಸಿರುತ್ತಾರೆಯೇ ಎಂಬ ಬಗ್ಗೆ ಪರಿಶೀಲಿಸಿ 7 ದಿನಗಳ ಒಳಗೆ ವರದಿ ನೀಡಿ ಹಾಗೂ ಗೈರು ಹಾಜರಾದ ಹೆಸರಿನ ಮುಂದೆ ಸಹಿ ಮಾಡಿರುವವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿ’ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.