ADVERTISEMENT

ಧರೆಗೆ ಉರುಳಿದವು ನೂರಾರು ಮರ

ಜಿ.ಬಿ.ನಾಗರಾಜ್
Published 20 ಏಪ್ರಿಲ್ 2021, 3:30 IST
Last Updated 20 ಏಪ್ರಿಲ್ 2021, 3:30 IST
ಚಿತ್ರದುರ್ಗದ ಬಿ.ಡಿ.ರಸ್ತೆ ವಿಸ್ತರಣೆಗೆ ಹನನವಾದ ಮರಗಳು. (ಸಂಗ್ರಹ ಚಿತ್ರ)
ಚಿತ್ರದುರ್ಗದ ಬಿ.ಡಿ.ರಸ್ತೆ ವಿಸ್ತರಣೆಗೆ ಹನನವಾದ ಮರಗಳು. (ಸಂಗ್ರಹ ಚಿತ್ರ)   

ಚಿತ್ರದುರ್ಗ: ವಾಹನ ಸವಾರರಿಗೆ ನೆರಳಾಗಿದ್ದ ನೂರಾರು ಮರಗಳು ರಸ್ತೆ ವಿಸ್ತರಣೆಗೆ ಬಲಿಯಾಗಿವೆ. ಅರಣ್ಯ ಇಲಾಖೆಯ ಅನುಮತಿ ಮೇರೆಗೆ ಕಣ್ಣಿಗೆ ಕಾಣಿಸಿದ ಮರಗಳನ್ನು ಧರೆಗೆ ಉರುಳಿಸಲಾಗಿದೆ. ಹಸಿರಿನಿಂದ ಕಂಗೊಳಿಸುತ್ತಿದ್ದ ರಸ್ತೆಗಳಲ್ಲಿ ಕಾಂಕ್ರೀಟ್‌ ಕಟ್ಟಡಗಳಷ್ಟೇ ಕಣ್ಣಿಗೆ ರಾಚುತ್ತಿವೆ.

ಬಿ.ಡಿ.ರಸ್ತೆಯಲ್ಲಿ 167 ಮರ, ತುರುವನೂರು ಮಾರ್ಗದಲ್ಲಿ 108, ದೊಡ್ಡಪೇಟೆ ರಾಜಬೀದಿಯಲ್ಲಿ 20ಕ್ಕೂ ಅಧಿಕ ತೆಂಗಿನ ಮರ... ಹೀಗೆ ಪ್ರತಿ ರಸ್ತೆಯಲ್ಲಿಯೂ ಹಲವು ಮರಗಳ ಕಡಿತಲೆಯಾಗಿದೆ. ಈ ಮಾರ್ಗದಲ್ಲಿ ಸಾಗುವ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಬಿಸಿಲಿನ ತಾಪದ ಅನುಭವ ಆಗುತ್ತಿದೆ.

ಸಾರ್ವಜನಿಕರಿಗೆ ನೆರಳಾಗುವ ಉದ್ದೇಶದಿಂದ ರಸ್ತೆ ಬದಿಯಲ್ಲಿ ಮರ ಬೆಳೆಸುವ ಪರಿಪಾಠಕ್ಕೆ ಅಶೋಕ ಸಾಮ್ರಾಟನ ಕಾಲದ ಹಿನ್ನೆಲೆ ಇದೆ. ಹೆದ್ದಾರಿ ಬದಿಯಲ್ಲಿ ಗಿಡ, ಮರ ಬೆಳೆಸಲು ಕೇಂದ್ರ ಸಾರಿಗೆ ಇಲಾಖೆ ಮುಂದಾಗಿದೆ. ಆದರೆ, ರಸ್ತೆ ವಿಸ್ತರಣೆಯ ನೆಪದಲ್ಲಿ ಮರಗಳನ್ನು ಹನನ ಮಾಡುತ್ತಿರುವುದು ವಿಪರ್ಯಾಸ ಎಂಬುದು ಪರಿಸರ ಪ್ರೇಮಿಗಳ ಕಿಡಿ.

ADVERTISEMENT

ರಸ್ತೆ ವಿಸ್ತರಣೆಯ ನೆಪದಲ್ಲಿ ಎಲ್ಲ ಮರಗಳನ್ನು ಕಡಿಯುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಬಿ.ಡಿ.ರಸ್ತೆಯ ಕಲಾ ಕಾಲೇಜು ಮುಂಭಾಗದಲ್ಲಿದ್ದ 68 ಮರಗಳನ್ನು ರಸ್ತೆ ವಿಸ್ತರಣೆಗೆ ಅಡ್ಡಿ ಆಗಿರಲಿಲ್ಲ ಎಂಬುದು ಟಾರ್ಗೆಟ್‌ ಯುವಕರ ವೇದಿಕೆಯ ಅಭಿಪ್ರಾಯ. ಮರಗಳನ್ನು ಉಳಿಸಿಕೊಂಡೇ ರಸ್ತೆ ವಿಸ್ತರಣೆ ಮಾಡುವಂತೆ ಒತ್ತಡ ಹೇರುವ ಪ್ರಯತ್ನವನ್ನು ಯುವಕರು ನಡೆಸಿದರು.

ಕಡಿದ ಮರಗಳು 40ರಿಂದ 70 ವರ್ಷದವು ಎಂದು ಗುರುತಿಸಲಾಗಿದೆ. ಪ್ರತಿ ಮರವನ್ನು ₹ 300ರಿಂದ ₹ 5 ಸಾವಿರದವರೆಗೆ ಹರಾಜು ಹಾಕಲಾಗಿದೆ. ಜೋಗಿಮಟ್ಟಿ ವೃತ್ತದಲ್ಲಿದ್ದ ಬೃಹತ್‌ ಗಾತ್ರದ ಬೇವಿನ ಮರ ಕೂಡ ಕೆಲವೇ ಸಾವಿರಗಳಿಗೆ ಹರಾಜಾಗಿದೆ. ಇದರ ಮೊತ್ತವನ್ನು ಬಹಿರಂಗಪಡಿಸಲು ಅರಣ್ಯ ಇಲಾಖೆ ಹಿಂದೇಟು ಹಾಕಿದೆ. ಮರಗಳ ಹನನದ ಹಿಂದೆ ಟಿಂಬರ್ ಮಾಫಿಯಾ ಕೆಲಸ ಮಾಡಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಕಡಿತಲೆ ಮಾಡುವ ಮರವೊಂದಕ್ಕೆ ಪರ್ಯಾಯವಾಗಿ ಹತ್ತು ಸಸಿಗಳನ್ನು ನೆಡಬೇಕು ಎಂಬುದು ಸರ್ಕಾರದ ನಿಯಮ. ಇದಕ್ಕೆ ತಗಲುವ ವೆಚ್ಚವನ್ನು ಗುತ್ತಿಗೆದಾರರು ಅಥವಾ ಸಂಬಂಧಿಸಿದ ಪ್ರಾಧಿಕಾರ ಭರಿಸಬೇಕು. ಗಿಡಗಳನ್ನು ಬೆಳೆಸುವ ಹೊಣೆಗಾರಿಕೆಯನ್ನು ಅರಣ್ಯ ಇಲಾಖೆ ಹೊರಬೇಕು. ಬಿ.ಡಿ. ರಸ್ತೆಯಲ್ಲಿ ಹನನ ಮಾಡಿದ ಮರಗಳಿಗೆ ಪರ್ಯಾಯವಾಗಿ ಸಸಿ ನಡೆಲು ಅರಣ್ಯ ಇಲಾಖೆಗೆ ಮೊದಲ ಕಂತಿನಲ್ಲಿ ₹ 10 ಲಕ್ಷ ಸಂದಾಯವಾಗಿತ್ತು. ತುರುವನೂರು ಮಾರ್ಗದ ಮರಗಳನ್ನು ತೆರವು ಮಾಡುತ್ತಿರುವುದಕ್ಕೆ ಪರಿಹಾರವಾಗಿ ಲೋಕೋಪಯೋಗಿ ಇಲಾಖೆ ಹಣ ಪಾವತಿಸುವುದಾಗಿ ಘೋಷಣೆ ಮಾಡಿತ್ತು.

ಕಡಿತಲೆ ಮಾಡಿದ ಮರಗಳಿಗೆ ಪರ್ಯಾಯವಾಗಿ ಗಿಡಗಳನ್ನು ನೆಡಲು ಸ್ಥಳ ಸೂಚಿಸುವಂತೆ ಅರಣ್ಯ ಇಲಾಖೆ ನಗರಸಭೆಯನ್ನು ಕೋರಿತ್ತು. ನಗರಸಭೆ ಸೂಚಿಸುವ ಸ್ಥಳದಲ್ಲಿ ಅರಣ್ಯ ಇಲಾಖೆ ಸಸಿ ಬೆಳೆಸಬೇಕಿದೆ. ಈ ಬಗ್ಗೆ ಮಾಹಿತಿ ಒದಗಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಚಂದ್ರಶೇಖರ ನಾಯಕ ಅವರು ಹಿಂದೇಟು ಹಾಕಿದರು.

860 ಮರಗಳ ಹನನ

ನಗರ ವ್ಯಾಪ್ತಿಯ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿಗೆ ಎರಡು ವರ್ಷಗಳಲ್ಲಿ 860 ಮರಗಳನ್ನು ಹನನ ಮಾಡಲಾಗಿದೆ ಎಂದು ಟಾರ್ಗೆಟ್‌ ಯುವಕರ ವೇದಿಕೆ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ಪರಿಸರ ಪ್ರೇಮಿಗಳು ಸೇರಿ ‘ಟಾರ್ಗೆಟ್‌ ಟೆನ್‌ ತೌಸಂಡ್‌’ ಅಭಿಯಾನ ನಡೆಸುತ್ತಿರುವ ವೇದಿಕೆ, ಮರಗಳ ಕಡಿತಲೆಗೆ ವಿರೋಧ ವ್ಯಕ್ತಪಸಿದೆ. ಮರ, ಗಿಡಗಳನ್ನು ಉಳಿಸಿಕೊಂಡು ಅಭಿವೃದ್ಧಿ ಕಾಮಗಾರಿ ನಡೆಸುವಂತೆ ಮಾಡಿಕೊಂಡ ಮನವಿ ಫಲಿಸಲಿಲ್ಲ.

ಸಸ್ಯ ಸಂಪತ್ತು ಹೆಚ್ಚಿಸಲು ವೇದಿಕೆಯ ಸ್ವಯಂ ಸೇವಕರು ರಸ್ತೆ ಬದಿಯಲ್ಲಿ ಹಾಕಿದ್ದ ಗಿಡಗಳು ಬಲಿಯಾಗಿವೆ. ಪ್ರತಿ ಬೀದಿ ಸುತ್ತಿದ ಕಾರ್ಯಕರ್ತರು ಕಡಿತಲೆಯಾದ ಮರಗಳ ಸಮೀಕ್ಷೆ ನಡೆಸಿದ್ದಾರೆ.

ಆಲದಮರ ಉಳಿಸುವ ಪ್ರಯತ್ನ

ರಂಗಯ್ಯನ ಬಾಗಿಲು ಸಮೀಪದ ಆಲದ ಮರವನ್ನು ಉಳಿಸಿಕೊಳ್ಳಲು ಪರಿಸರ ಪ್ರೇಮಿಗಳು ಸಾಕಷ್ಟು ಹೋರಾಟ ನಡೆಸಿದರು. ಕೊನೆಗೂ ಮರವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

‘ಸುಮಾರು 80 ವರ್ಷದ ಈ ಮರ ಹಲವರಿಗೆ ನೆರಳಾಗಿತ್ತು. ಮರದ ಸುತ್ತ ಕಟ್ಟಿದ್ದ ಕಟ್ಟೆ ಸ್ಥಳೀಯರಿಗೆ ಆಸರೆಯಾಗಿತ್ತು. ಕಟ್ಟೆಯ ಮೇಲೆ ಕುಳಿತು ಜನರು ವಿಶ್ರಾಂತಿ ಪಡೆಯುತ್ತಿದ್ದರು. ವಿಸ್ತರಣೆ ಮಾಡಲು ಉದ್ದೇಶಿಸಿದ್ದ ರಸ್ತೆಯಿಂದ ಮರ ಸಾಕಷ್ಟು ದೂರದಲ್ಲಿತ್ತು. ಆದರೂ, ಏಕೆ ಮರ ಕಡಿದರೂ ಅರ್ಥವಾಗಲಿಲ್ಲ’ ಎನ್ನುತ್ತಾರೆ ಟಾರ್ಗೆಟ್‌ ಯುವಕರ ವೇದಿಕೆಯ ಸಿದ್ದರಾಜು ಜೋಗಿ.

ಮರಗಳನ್ನು ಉಳಿಸಿಕೊಂಡು ರಸ್ತೆ ಅಭಿವೃದ್ಧಿಪಡಿಸಲು ಅವಕಾಶವಿತ್ತು. ಆದರೆ, ಅದರ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ವಿನಾ ಕಾರಣ ಮರ ಕಡಿಯಲಾಗಿದೆ.
–ಸಿದ್ದರಾಜು ಜೋಗಿ, ಟಾರ್ಗೆಟ್‌ ಯುವಕರ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.