ADVERTISEMENT

ಅಧಿಕಾರ ವಿಕೇಂದ್ರೀಕರಣದ ಪರ ಇಲ್ಲ ಬಿಜೆಪಿ: ಸಿದ್ದರಾಮಯ್ಯ ಆರೋಪ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 14:24 IST
Last Updated 28 ನವೆಂಬರ್ 2021, 14:24 IST
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸಿದರು. ಕೆಪಿಸಿಸಿ ವಕ್ತಾರ ಬಿ.ಎನ್‌.ಚಂದ್ರಪ್ಪ, ಮಾಜಿ ಶಾಸಕ ಡಿ.ಸುಧಾಕರ್‌, ಹನುಮಲಿ ಷಣ್ಮುಖಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಕಾಂಗ್ರೆಸ್ ಅಭ್ಯರ್ಥಿ ಬಿ.ಸೋಮಶೇಖರ್‌, ಶಾಸಕ ಜಮೀರ್‌ ಅಹಮ್ಮದ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಕಾರ್ಯಾಧ್ಯಕ್ಷ ಕೆ.ಎಂ.ಹಾಲೇಶ್‌ ಇದ್ದಾರೆ.
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸಿದರು. ಕೆಪಿಸಿಸಿ ವಕ್ತಾರ ಬಿ.ಎನ್‌.ಚಂದ್ರಪ್ಪ, ಮಾಜಿ ಶಾಸಕ ಡಿ.ಸುಧಾಕರ್‌, ಹನುಮಲಿ ಷಣ್ಮುಖಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಕಾಂಗ್ರೆಸ್ ಅಭ್ಯರ್ಥಿ ಬಿ.ಸೋಮಶೇಖರ್‌, ಶಾಸಕ ಜಮೀರ್‌ ಅಹಮ್ಮದ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಕಾರ್ಯಾಧ್ಯಕ್ಷ ಕೆ.ಎಂ.ಹಾಲೇಶ್‌ ಇದ್ದಾರೆ.   

ಚಿತ್ರದುರ್ಗ: ಗ್ರಾಮ, ಜಿಲ್ಲೆ, ರಾಜ್ಯ ಹಾಗೂ ಕೇಂದ್ರದ ನಡುವೆ ಅಧಿಕಾರ ಹಂಚಿಕೆಯಾದಾಗ ಪ್ರಜಾತಂತ್ರ ಯಶಸ್ಸು ಕಾಣುತ್ತದೆ. ಕೇಂದ್ರೀಕೃತ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟುಕೊಂಡಿರುವ ಬಿಜೆಪಿ, ಅಧಿಕಾರದ ವಿಕೇಂದ್ರೀಕರಣದ ಪರ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಇಲ್ಲಿನ ಬಿಗ್‌ಬಾಸ್‌ ಹೋಟೆಲ್‌ ಸಭಾಂಗಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಸೋಮಶೇಖರ ಪರ ಮತಯಾಚನೆಗೆ ಭಾನುವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘50 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಈವರೆಗೆ ಬಿಜೆಪಿ ವಿಕೇಂದ್ರೀಕೃತ ವ್ಯವಸ್ಥೆಯ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ. ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿಯೂ ಸರ್ಕಾರ ಇರಬೇಕು ಎಂಬುದು ಕಾಂಗ್ರೆಸ್ ಪರಿಕಲ್ಪನೆ. ಯಾವ ಪಕ್ಷದ ಅಭ್ಯರ್ಥಿಯನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಿದರೆ ಪಂಚಾಯತ್‌ ರಾಜ್‌ ವ್ಯವಸ್ಥೆ ಉಳಿಯುತ್ತದೆ ಎಂಬುದನ್ನು ನೀವೆ ಅರ್ಥಮಾಡಿಕೊಳ್ಳಿ’ ಎಂದು ಹೇಳಿದರು.

ADVERTISEMENT

‘ಗ್ರಾಮ ಪಂಚಾಯಿತಿ ಹಂತದಲ್ಲಿ ನಡೆಯುವ ಗ್ರಾಮ ಸಭೆಗೆ ಮಹತ್ವವಿದೆ. ವಸತಿ ಯೋಜನೆಗಳ ಫಲಾನುಭವಿ ಆಯ್ಕೆ ಪ್ರಕ್ರಿಯೆ ಈ ಸಭೆಯಲ್ಲಿ ನಡೆಯುತ್ತದೆ. ಶಾಸಕರಿಗಿಂತಲೂ ಹೆಚ್ಚು ಅಧಿಕಾರ ಹೊಂದಿರುವ ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಬಿಜೆಪಿ ಹಾಳು ಮಾಡುತ್ತಿದೆ. ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿದೆ’ ಎಂದು ದೂರಿದರು.

‘ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಏಳು ವರ್ಷ ಕಳೆದಿದೆ. ಈವರೆಗೆ ಇಂತಹ ಯಾವುದೇ ಜನಪರ ವ್ಯವಸ್ಥೆಯನ್ನು ರೂಪಿಸಿಲ್ಲ. ಸೋನಿಯಾಗಾಂಧಿ ಹಾಗೂ ಮನಮೋಹನ್‌ ಸಿಂಗ್‌ ಅವರು ರೂಪಿಸಿದ್ದ ನರೇಗಾ ಯೋಜನೆಗೂ ಸರಿಯಾದ ಅನುದಾನ ನೀಡುತ್ತಿಲ್ಲ. ಬೆಲೆ ಏರಿಕೆ ಮಾಡಿ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದ್ದಾರೆ’ ಎಂದು ಟೀಕಿಸಿದರು.

‘ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರತಿ ವರ್ಷ ಮೂರು ಲಕ್ಷ ಮನೆ ಮಂಜೂರು ಮಾಡಿದೆ. ಐದು ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ಒಂದು ಆಶ್ರಯ ಮನೆ ಕೂಡ ನೀಡಿಲ್ಲ. ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಕಡಿಮೆ ಮಾಡಿ ಬಡವರ ಹೊಟ್ಟೆಗೆ ಹೊಡೆಯಲಾಗಿದೆ’ ಎಂದು ಕಿಡಿಕಾರಿದರು.

‘ಜಿ.ರಘು ಆಚಾರ್‌ ಅವರು ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರು. ವೈಯಕ್ತಿಕ ಕಾರಣದಿಂದ ಸ್ಪರ್ಧೆಯಿಂದ ಹಿಂದೆ ಸರಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬಿ.ಸೋಮಶೇಖರ ಅವರಿಗೆ ಪಕ್ಷ ಅವಕಾಶ ನೀಡಿದೆ. ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೇ ಹೆಚ್ಚಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ, ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ’ ಎಂದು ಹೇಳಿದರು.

‘ಸೋತು ಬೆಲೆ ಇಳಿಸಿದ ಬಿಜೆಪಿ’

ದೇಶದ ಹಲವು ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ಬಳಿಕ ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಕೆ ಮಾಡಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಡೀಸೆಲ್‌ ಮೇಲಿನ ಸುಂಕ ಕೇವಲ ₹ 3.45 ಇತ್ತು. ಪ್ರಧಾನಿ ಮೋದಿ ಅವರು ಇದನ್ನು ₹ 31.8ಕ್ಕೆ ಏರಿಕೆ ಮಾಡಿದರು. ₹ 9.2 ಇದ್ದ ಪೆಟ್ರೋಲ್‌ ಮೇಲಿನ ಸುಂಕವನ್ನು ₹ 32.9ಕ್ಕೆ ಹೆಚ್ಚಿಸಿದರು. 2013ರಲ್ಲಿ ₹ 414 ಇದ್ದ ಅಡುಗೆ ಅನಿಲದ ಸಿಲಿಂಡರ್‌ ಬೆಲೆ ₹ 952ಕ್ಕೆ ಏರಿಕೆಯಾಗಿದೆ’ ಎಂದು ಆರೋಪಿಸಿದರು.

ಜಾರಕಿಹೊಳಿಗೆ ಕಿವಿಗೊಡದ ಕಾರ್ಯಕರ್ತರು

ಮತಯಾಚನೆ ಉದ್ದೇಶದಿಂದ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಭಾಷಣಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಕಿವಿಗೊಡಲಿಲ್ಲ. ಇದರಿಂದ ಅಸಹಾಯಕರಾದ ಕಾಂಗ್ರೆಸ್‌ ನಾಯಕರು ಸಭೆಯನ್ನು ಮೊಟಕುಗೊಳಿಸಿದರು.

ಮೈಸೂರಿಗೆ ತೆರಳುವ ಧಾವಂತದಲ್ಲಿದ್ದ ಸಿದ್ದರಾಮಯ್ಯ ಅವರು ಭಾಷಣ ಪೂರ್ಣಗೊಳಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಸಭಾಂಗಣ ಖಾಲಿ ಆಯಿತು. ‘ಸಭೆ ಮುಕ್ತಾಯವಾಗಿಲ್ಲ. ಸತೀಶ ಜಾರಕಿಹೊಳಿ ಮಾತನಾಡಲಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕರು ಮನವಿ ಮಾಡಿಕೊಂಡರೂ, ಯಾರೊಬ್ಬರೂ ಕುಳಿತುಕೊಳ್ಳಲಿಲ್ಲ. ಅನಿವಾರ್ಯವಾಗಿ ಸಭೆಯನ್ನು ಮೊಟಕುಗೊಳಿಸಲಾಯಿತು.

ಕೆಪಿಸಿಸಿ ವಕ್ತಾರ ಬಿ.ಎನ್‌.ಚಂದ್ರಪ್ಪ, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಎಚ್.ಆಂಜನೇಯ, ರಮಾನಾಥ್ ರೈ, ಡಿ.ಸುಧಾಕರ್, ಶಾಸಕರಾದ ಜಮೀರ್ ಅಹಮ್ಮದ್, ಯು.ಟಿ.ಖಾದರ್, ಟಿ.ರಘುಮೂರ್ತಿ, ರಾಮಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲೇಶ್‌, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಮಂಜಪ್ಪ, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಎಸ್‌.ತಿಪ್ಪೇಸ್ವಾಮಿ, ರಾಜೇಶ್, ಎ.ವಿ.ಉಮಾಪತಿ, ಮುಖಂಡರಾದ ಜಬ್ಬಾರ್, ಜಯಮ್ಮ ಬಾಲರಾಜ್, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಮೆಹಬೂಬ್ ಪಾಷಾ, ಹನುಮಲಿ ಷಣ್ಮುಖಪ್ಪ, ಡಾ.ಯೋಗೇಶ್‌ ಬಾಬು, ಗೀತಾ ನಂದಿನಿಗೌಡ ಇದ್ದರು.

***

ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಎಂಬುದಾಗಿ ಪರಿಗಣಿಸಿ ಪಕ್ಷ ಅವಕಾಶ ನೀಡಿದೆ. ಗ್ರಾಮ ಪಂಚಾಯಿತಿ ಸದಸ್ಯ, ಅಧ್ಯಕ್ಷನಾಗಿ ಕೆಲಸ ಮಾಡಿದ ಅನುಭವವಿದೆ. ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬೆಂಬಲಿಸಲು ಕೋರಿಕೆ.

ಬಿ.ಸೋಮಶೇಖರ,ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.