ADVERTISEMENT

ಕೃಷಿ ಕಾಯ್ದೆ ವಿರೋಧಿಸಿ ‘ಗ್ರಾಮೀಣ’ ಜಾಥಾ

ರೈತ ಚಳವಳಿ ಬೆಂಬಲಿಸಿ ಸೈಕಲ್‌ ಏರಿದ ಯುವಸಮೂಹ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 11:30 IST
Last Updated 4 ಜನವರಿ 2021, 11:30 IST
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ವಾಹನ ಜಾಥಾಗೆ ಸೋಮವಾರ ಚಾಲನೆ ನೀಡಲಾಯಿತು.
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ವಾಹನ ಜಾಥಾಗೆ ಸೋಮವಾರ ಚಾಲನೆ ನೀಡಲಾಯಿತು.   

ಚಿತ್ರದುರ್ಗ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಸಂಬಂಧಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳವಳಿಗೆ ಬೆಂಬಲ ಸೂಚಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವಾಹನ ಜಾಥಾ ಹಾಗೂ ದೇಶಪ್ರೇಮಿ ಯುವ ಆಂದೋಲನದ ಸೈಕಲ್‌ ಜಾಥಾ ಸೋಮವಾರ ಪ್ರತ್ಯೇಕವಾಗಿ ಆರಂಭಗೊಂಡವು.

ಒನಕೆ ಓಬವ್ವ ವೃತ್ತದಿಂದ ಹೊರಟ ಎರಡೂ ಜಾಥಾಗಳು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಲಿವೆ. ಕೃಷಿ ಕಾಯ್ದೆಯಿಂದ ಆಗುವ ತೊಂದರೆ, ಮುಂಬರುವ ಬಿಕ್ಕಟ್ಟುಗಳ ಬಗ್ಗೆ ಜಾಗೃತಿ ಮೂಡಿಸಲಿವೆ. ರೈತರ ಚಳವಳಿಯನ್ನು ಬೆಂಬಸುವಂತೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಲಿವೆ.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ಗ್ರಾಮೀಣ ಜಾಥಾಗೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಚಾಲನೆ ನೀಡಿದರು. ‘ದೆಹಲಿ ರೈತರೊಂದಿಗೆ ನಾವಿದ್ದೇವೆ’, ‘ರೈತರ ಮೇಲೆ ನಡೆದ ಪೊಲೀಸ್‌ ದೌರ್ಜನ್ಯ ಖಂಡನೀಯ’, ‘ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ’ಯನ್ನು ಹಿಂಪಡೆಯಿರಿ ಎಂಬ ಪ್ಲೇಕಾರ್ಡ್‌ ಪ್ರದರ್ಶಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಜನ ವಿರೋಧಿ ನೀತಿಗಳನ್ನು ಅನುಷ್ಠಾನಗೊಳಿಸುತ್ತಿದೆ. ರೈತರು ಹಾಗೂ ದೇಶದ ಸಂಪತ್ತನ್ನು ಲೂಟಿ ಮಾಡಲು ಅಂಬಾನಿ, ಅದಾನಿಗೆ ಅವಕಾಶ ಮಾಡಿಕೊಟ್ಟಿದೆ. ಸರ್ಕಾರಕ್ಕೆ ಚುರುಕು ಮುಟ್ಟಿಸಲು ಅಂಬಾನಿ ಹಾಗೂ ಅದಾನಿ ಕಂಪನಿಗಳ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದರು.

ಕೃಷಿ ಸಂಬಂಧಿ ಕಾನೂನು ಜಾರಿಗೊಳಿಸುವ ಮೂಲಕ ರೈತರ ಬದುಕು ಕಿತ್ತುಕೊಳ್ಳಲಾಗುತ್ತಿದೆ. ಕಾರ್ಪೊರೇಟ್‌ ಕಂಪನಿಗಳು ಕೃಷಿ ಕ್ಷೇತ್ರ ಪ್ರವೇಶಕ್ಕೆ ಅವಕಾಶ ಸಿಕ್ಕಂತಾಗಿದೆ. ಕೃಷಿ ಭೂಮಿಯನ್ನು ರೈತರಿಂದ ಕಿತ್ತುಕೊಳ್ಳುವ ಹುನ್ನಾರವೂ ನಡೆಯುತ್ತಿದೆ. ರೈತರು ಖಾಸಗಿ ಕಂಪನಿಗಳ ಹಂಗಿನಲ್ಲಿ ಕೃಷಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಈ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ಚಳವಳಿ ಆರಂಭವಾಗಿ ಒಂದೂವರೆ ತಿಂಗಳು ಸಮೀಪಿಸುತ್ತಿದೆ. ನ.25,26ರಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡದೇ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ಈ ಹೋರಾಟವನ್ನು ಮುರಿಯುವ ಸರ್ಕಾರದ ಎಲ್ಲ ಪ್ರಯತ್ನಗಳನ್ನು ರೈತರು ಸೋಲಿಸಿ ಮುನ್ನಡೆಯುತ್ತಿದ್ದಾರೆ ಎಂದು ಹೇಳಿದರು.

ಐತಿಹಾಸಿಕ ಹೋರಾಟದಲ್ಲಿ ಕೋಟಿಗೂ ಅಧಿಕ ಜನರು ಪಾಲ್ಗೊಂಡಿದ್ದಾರೆ. ದೆಹಲಿ ಹೊರವಲಯದ ಸುಮಾರು 25 ಕಿ.ಮೀ ದೂರದವರೆಗೂ ರೈತರು ಜಮಾಯಿಸಿದ್ದಾರೆ. ಸುಮಾರು ಒಂದು ಲಕ್ಷ ಟ್ರ್ಯಾಕ್ಟರ್‌ಗಳು ಸೇರಿದ್ದು, ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನೆ ಆಗಿದೆ. ಇದರಿಂದ ವಿಚಲಿತವಾದ ಸರ್ಕಾರ ಕೃಷಿ ಕಾಯ್ದೆಗಳು ರೈತ ಪರವಾಗಿವೆ ಎಂದು ನಂಬಿಸಲು ಮುಂದಾಗಿದೆ. ಇದಕ್ಕೆ ಯಾರೊಬ್ಬರು ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಜೆ.ಯಾದವರೆಡ್ಡಿ, ಎಸ್‌ಯುಸಿಐ ಮುಖಂಡ ಎಚ್‌.ರವಿಕುಮಾರ್‌, ಹಿರಿಯ ವಕೀಲ ಬಿ.ಕೆ.ರಹಮತ್‌ ಉಲ್ಲಾ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಬಾಬು, ಕುಮುದ, ಸಜಂಯ್, ತ್ರಿವೇಣಿ ಸೇನ್ ಇದ್ದರು.

ಟವೆಲ್‌ ಧರಿಸಿದ ಯುವಪಡೆ

ಕೃಷಿ ಕಾಯ್ದೆಯ ಕರಾಳಮುಖವನ್ನು ರೈತರಿಗೆ ಪರಿಚಯಿಸಲು ಯುವಪಡೆಯೊಂದು ಸೈಕಲ್‌ ಏರಿದೆ. 17 ಜನರ ತಂಡ ಚಿತ್ರದುರ್ಗ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಜಾಥಾ ನಡೆಸುತ್ತಿದೆ.

ದೇಶಪ್ರೇಮಿ ಯುವ ಆಂದೋಲನ ವೇದಿಕೆಯ ಸದಸ್ಯರು ವಿಜಯಕುಮಾರ್‌ ನೇತೃತ್ವದಲ್ಲಿ ಸೈಕಲ್‌ ಜಾಥಾ ಹೊರಟಿದ್ದಾರೆ. ಹಸಿರು ಟವೆಲ್‌ ಧರಿಸಿ ಸೈಕಲ್‌ ಏರಿದ ತಂಡ ಮದಕರಿಪುರ, ಹೊಸಕಲ್ಲಹಳ್ಳಿಯಲ್ಲಿ ಸೋಮವಾರ ಅರಿವು ಮೂಡಿಸಿತು. ನಿತ್ಯ ನಾಲ್ಕಾರು ಊರು ಸುತ್ತಿ ರೈತರಲ್ಲಿ ಎಚ್ಚರ ಮೂಡಿಸಲಿದೆ. ಬೀದಿ ನಾಟಕ, ಭಾಷಣ, ಕರಪತ್ರದ ಮೂಲಕ ತಿಳಿವಳಿಕೆ ನೀಡಲಿದೆ.

ಮುಖಂಡರಾದ ಟಿ.ಷಫಿವುಲ್ಲಾ, ಹೊಳಿಯಪ್ಪ, ಕೊಟ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.