ADVERTISEMENT

ಚಳ್ಳಕೆರೆಯಲ್ಲಿ ಬಿರುಗಾಳಿ, ಮಳೆ: ಮನೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 19 ಮೇ 2022, 3:03 IST
Last Updated 19 ಮೇ 2022, 3:03 IST
ಚಳ್ಳಕೆರೆ ತಾಲ್ಲೂಕಿನ ಪಗಡಲಬಂಡೆ ಗ್ರಾಮದ ತಿಮ್ಮಕ್ಕ ಅವರ ಮನೆಯ ಚಾವಣಿಗೆ ಹಾನಿಯಾಗಿರುವುದು
ಚಳ್ಳಕೆರೆ ತಾಲ್ಲೂಕಿನ ಪಗಡಲಬಂಡೆ ಗ್ರಾಮದ ತಿಮ್ಮಕ್ಕ ಅವರ ಮನೆಯ ಚಾವಣಿಗೆ ಹಾನಿಯಾಗಿರುವುದು   

ಚಳ್ಳಕೆರೆ: ಮಂಗಳವಾರ ರಾತ್ರಿ ಸುರಿದ ಮಳೆ ಹಾಗೂ ಬಿರುಗಾಳಿಗೆ ತಾಲ್ಲೂಕಿನ ಪಗಡಲಬಂಡೆ ಗ್ರಾಮದ ತಿಮ್ಮಕ್ಕ ಅವರ ಮನೆಯ ಚಾವಣೆಯ ಹೆಂಚುಗಳು ಹಾರಿವೆ.

ಹನುಂತನಹಳ್ಳಿ ಗ್ರಾಮದ ತಿಪ್ಪೇಸ್ವಾಮಿ ಅವರಿಗೆ ಸೇರಿ ಹಳೆ ಮನೆಯ ಚಾವಣೆಯಲ್ಲಿ ರಂಧ್ರ ಬಿದ್ದು ಮಳೆ ನೀರು ಸೋರುತ್ತಿದೆ.

ರಾಮಜೋಗಿಹಳ್ಳಿ ಗ್ರಾಮದ ಯಶೋದಮ್ಮ ಅವರಿಗೆ ಸೇರಿದ ಜಮೀನಿನಲ್ಲಿ ಏಳು ಅಡಿಕೆ ಮರ, ಹತ್ತು ಸಿಲ್ವರ್ ಮತ್ತು ಎಂಟು ಬೇವಿನ ಮರ, ಕುರುಡಿಹಳ್ಳಿ ಯಶೋದಮ್ಮ ತಿಮ್ಮಾರೆಡ್ಡಿ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದ ಐದು ಅಡಿಕೆ, ಏಳು ಸಿಲ್ವರ್, 9 ಬೇವಿನಮರಗಳು ಉರುಳಿ ಬಿದ್ದಿದ್ದು,₹ 50 ಸಾವಿರ ನಷ್ಟವಾಗಿದೆ.

ADVERTISEMENT

ಗೌರಸಮುದ್ರ ಗ್ರಾಮದ ಬಾಲಚಂದ್ರಪ್ಪ ಅವರ ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ಹಾನಿಯಾಗಿದ್ದು, ₹ 40 ಸಾವಿರ ನಷ್ಟವಾಗಿದೆ. ಮಾರಕ್ಕರವರ ಜಮೀನಿನ ಒಂದು ಎಕರೆ ಮೆಕ್ಕೆಜೋಳ, ನಾಗವೇಣಿ ಅವರು ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ, ಘಟಪರ್ತಿ ಗ್ರಾಮದ ತಿಪ್ಪೇಸ್ವಾಮಿ ಅವರ ಎರಡು ಎಕರೆಯ ಮೆಕ್ಕೆಜೋಳ, ಅಂಜಿನಮ್ಮ ಅವರ ಎರಡು ಎಕರೆ ಮೆಕ್ಕೆಜೋಳ ಹಾನಿಯಾಗಿದೆ.

ತಾಲ್ಲೂಕಿನಲ್ಲಿ ಒಟ್ಟು ₹ 2.60 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದರು.

ಪ್ರತಿ ದಿನ ಗ್ರಾಮಗಳಿಗೆ ಭೇಟಿ ನೀಡಿ ಮಳೆಹಾನಿಯ ವರದಿಯನ್ನು ಇಲಾಖೆಗೆ ನೀಡಬೇಕು ಎಂದು ಕಂದಾಯ ಅಧಿಕಾರಿಗಳು ಹಾಗೂ ಪಿಡಿಒಗಳಿಗೆ ತಹಶೀಲ್ದಾರ್‌ ಸೂಚಿಸಿದರು.

ಕಸಬಾದಲ್ಲಿ 4.2 ಮಿ.ಮೀ, ಪರಶುರಾಂಪುರ 21 ಮಿ.ಮೀ, ತಳಕು 18 ಮಿ.ಮೀ, ನಾಯಕನಹಟ್ಟಿ 16.4 ಮಿ.ಮೀ, ದೇವರಮರಿಕುಂಟೆ 23.4 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.