ADVERTISEMENT

ವಾಣಿವಿಲಾಸ ಜಲಾಶಯ: ನೀರಿನ ಮಟ್ಟ ನೂರು ಅಡಿಯತ್ತ

ಅಚ್ಚುಕಟ್ಟು ಪ್ರದೇಶದ ರೈತರ ಸಂತಸ ಇಮ್ಮಡಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 4:49 IST
Last Updated 31 ಅಕ್ಟೋಬರ್ 2020, 4:49 IST
ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ
ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ   

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದ ನೀರಿನಮಟ್ಟ 100 ಅಡಿಯತ್ತ ಸಾಗುತ್ತಿದ್ದು, ಅಚ್ಚುಕಟ್ಟು ಪ್ರದೇಶದ ರೈತರ ಸಂತಸ ಇಮ್ಮಡಿಗೊಂಡಿದೆ.

1911ರಿಂದ ಜಲಾಶಯದಲ್ಲಿ ನೀರು ಸಂಗ್ರಹ ಕಾರ್ಯ ಆರಂಭವಾಗಿದ್ದು, ಮೊದಲ ವರ್ಷವೇ 109.66 ಅಡಿ ನೀರು ಸಂಗ್ರಹವಾಗಿತ್ತು. ಈವರೆಗೆ 57 ಬಾರಿ ಜಲಾಶಯದ ನೀರಿನಮಟ್ಟ 100 ಅಡಿಯ ಗಡಿ ದಾಟಿದೆ.

ಕಳೆದ ವರ್ಷ ಇದೇ ದಿನ (ಅ. 30ರಂದು) ನೀರಿನಮಟ್ಟ 93.40 ಅಡಿ ಇತ್ತು. ಪ್ರಸಕ್ತ ವರ್ಷ 98.80 ಅಡಿ ನೀರು ಸಂಗ್ರಹವಾಗಿದೆ. ಈಗ ಬರುತ್ತಿರುವ ಪ್ರಮಾಣದಲ್ಲಿ ಒಳ ಹರಿವು ಮುಂದುವರಿದಲ್ಲಿ ಐದಾರು ದಿನಗಳಲ್ಲಿ ನೂರು ಅಡಿ ತಲುಪಲಿದೆ.

ADVERTISEMENT

130 ಅಡಿ ಗರಿಷ್ಠಮಟ್ಟ ಇರುವ ಜಲಾಶಯ ಇದುವರೆಗೂ ಒಮ್ಮೆ ಮಾತ್ರ (1933ರಲ್ಲಿ) ಭರ್ತಿಯಾಗಿದೆ. ಈವರೆಗೆ 11 ಬಾರಿ 120 ಅಡಿಗಿಂತ ಹೆಚ್ಚು ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.

2019ರ ಜೂನ್ ತಿಂಗಳಲ್ಲಿ ಪ್ರಥಮ ಬಾರಿಗೆ ಜಲಾಶಯ ಡೆಡ್‌ಸ್ಟೋರೇಜ್‌ಗೆ (60 ಅಡಿ) ಇಳಿದಿತ್ತು. ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಹಿಂಗಾರು ಮಳೆ ಉತ್ತಮವಾಗಿ ಆಗಿದ್ದರಿಂದ, ಜತೆಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ಪರ್ಯಾಯ ಮಾರ್ಗ ನಿರ್ಮಿಸಿ ನೀರು ಹರಿಸಿದ್ದರಿಂದ 2020ರ ಜನವರಿ ವೇಳೆಗೆ ನೀರಿನ ಮಟ್ಟ 102.60 ಅಡಿಗೆ ಏರಿತ್ತು.

ಪ್ರಸಕ್ತ ವರ್ಷ ಮಳೆ ನೀರಿನ ಜತೆಗೆ ಭದ್ರಾ ನೀರು ಬರುತ್ತಿರುವ ಕಾರಣ ನಿಧಾನಕ್ಕೆ ಜಲಾಶಯದ ನೀರಿನ ಮಟ್ಟ ಏರುತ್ತಿದೆ. ಶಾಂತಿಪುರ ಮತ್ತು ಬೆಟ್ಟದ ತಾವರಕೆರೆ ಬಳಿ ಲಿಫ್ಟ್‌ಗಳಲ್ಲಿ ಎರಡು ಪಂಪ್‌ಗಳನ್ನು ಚಾಲೂ ಮಾಡಿ, ಮಾರ್ಚ್‌ವರೆಗೆ ಹರಿಸಿದಲ್ಲಿ ನೀರಿನ ಮಟ್ಟ 115 ಅಡಿ ತಲುಪುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.