ADVERTISEMENT

ಚಿತ್ರದುರ್ಗ: ಬಾಡಿದ ತರಕಾರಿ ವ್ಯಾಪಾರಸ್ಥರ ಮೊಗ

‘ವಾರಾಂತ್ಯದ ಕರ್ಫ್ಯೂ’ನಲ್ಲಿ ನಡೆಯದ ವ್ಯಾಪಾರ, ಶೇ 70ರಷ್ಟು ನಷ್ಟ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 6:03 IST
Last Updated 9 ಜನವರಿ 2022, 6:03 IST
ಚಿತ್ರದುರ್ಗದ ತರಕಾರಿ ಮಾರುಕಟ್ಟೆ ಗ್ರಾಹಕರು ಇಲ್ಲದೇ ಶನಿವಾರ ಭಣಗುಡುತ್ತಿತ್ತು. ಚಿತ್ರ: ವಿ. ಚಂದ್ರಪ್ಪ
ಚಿತ್ರದುರ್ಗದ ತರಕಾರಿ ಮಾರುಕಟ್ಟೆ ಗ್ರಾಹಕರು ಇಲ್ಲದೇ ಶನಿವಾರ ಭಣಗುಡುತ್ತಿತ್ತು. ಚಿತ್ರ: ವಿ. ಚಂದ್ರಪ್ಪ   

ಚಿತ್ರದುರ್ಗ: ‘ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ..’ ಎನ್ನುತ್ತ ಆತಂಕದಲ್ಲೇ ಮೌನಕ್ಕೆ ಶರಣಾದರು ತರಕಾರಿ ವ್ಯಾಪಾರಿ ಇರ್ಫಾನ್. ಇದು ಕೇವಲ ಒಬ್ಬರ ನೋವಲ್ಲ, ದಿನದ ದುಡಿಮೆ ಮೇಲೆ ಬದುಕು ಕಟ್ಟಿಕೊಂಡ ಸಾವಿರಾರು ಜನರ ಸಂಕಷ್ಟ.

ಕೋವಿಡ್- ಓಮೈಕ್ರಾನ್ ಸೋಂಕು ಏರಿಕೆಯ ಕಾರಣ ಸರ್ಕಾರ ಜಾರಿಗೊಳಿಸಿದ ‘ವಾರಾಂತ್ಯದ ಕರ್ಫ್ಯೂ’ ದುಡಿಯುವ ವರ್ಗವನ್ನು ಸಂಕಷ್ಟದ ಕೂಪಕ್ಕೆ ನೂಕಿದೆ. ಎರಡು ವರ್ಷಗಳಿಂದ ಕೋವಿಡ್ ಸೃಷ್ಟಿಸಿದ ಅವಾಂತರದಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ಪುನಃ ನಡೆಯುತ್ತಿರುವ ವಿದ್ಯಮಾನಗಳು ತಲ್ಲಣ ಸೃಷ್ಟಿಸಿವೆ.

ಶುಕ್ರವಾರ ರಾತ್ರಿಯಿಂದ ಪ್ರಾರಂಭವಾದ ಕರ್ಫ್ಯೂ ಶನಿವಾರ ಬೆಳಿಗ್ಗೆಯಿಂದ ಕೊಂಚ ಬಿಗಿಯಾಯಿತು. ಅಗತ್ಯ ಸೇವೆಗೆ ಅವಕಾಶ ಕಲ್ಪಿಸಿದ್ದರಿಂದ ಜನ ಮಾರುಕಟ್ಟೆಗೆ ಬರುತ್ತಾರೆ ಎಂಬ ಅಂದಾಜಿನಲ್ಲಿ ಎಂದಿನಂತೆ ತರಕಾರಿಗಳನ್ನು ಖರೀದಿಸಿದ್ದ ವ್ಯಾಪಾರಸ್ಥರು ಸಮಸ್ಯೆಗೆ ಸಿಲುಕಿದರು.

ADVERTISEMENT

ಬೆಳಿಗ್ಗೆಯಿಂದಲೇ ನಗರದಲ್ಲಿ ಪೊಲೀಸರ ಗಸ್ತು ಹೆಚ್ಚಾದ ಕಾರಣ ಜನರು ಮಾರುಕಟ್ಟೆಗೆ ಬರಲು ಹಿಂದೇಟು ಹಾಕಿದರು. ಇದರಿಂದ ತರಕಾರಿ, ಹಣ್ಣು, ಬೀದಿ ಬದಿ ವ್ಯಾಪಾರಿಗಳು ಹಾಕಿದ ಬಂಡವಾಳ ವಾಪಸ್‌ ಬರುವುದಿಲ್ಲ ಎಂಬುದನ್ನು ಹತ್ತರ ವೇಳೆಗೆ ಖಚಿತಪಡಿಸಿಕೊಂಡು ಅಂಗಡಿಗಳನ್ನು ಬಂದ್ ಮಾಡಲು ಮುಂದಾದರು. ಬೆಳಗಾವಿ, ಹಾಸನ, ತುಮಕೂರು ಹಾಗೂ ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳಿಂದ ನಸುಕಿನ 3 ಗಂಟೆಗೆ ನಗರಕ್ಕೆ ಸಾವಿರಾರು ಟನ್ ತರಕಾರಿ ಬರುತ್ತದೆ. ಎಲ್ಲ ತರಕಾರಿ, ಸೊಪ್ಪು ಬೆಲೆ ಏರಿಕೆಯಾಗಿದ್ದರೂ ವಾರಾಂತ್ಯದ ಕಾರಣಕ್ಕೆ ಕೊಂಚ ಹೆಚ್ಚಾಗಿಯೇ ವ್ಯಾಪಾರಿಗಳು ಖರೀದಿಸಿದ್ದರು.

ಆತಂಕದಲ್ಲೇ ಶನಿವಾರ ಬೆಳಿಗ್ಗೆ ನಗರದ ಸಂತೆಹೊಂಡ, ಖಾಸಗಿ ಬಸ್ ನಿಲ್ದಾಣ, ಜೆಸಿಆರ್, ತ್ಯಾಗರಾಜ ಬೀದಿ, ಹೊಳಲ್ಕೆರೆ ರಸ್ತೆ, ಸ್ಟೇಡಿಯಂ ಮುಂಭಾಗ ಸೇರಿ ವಿವಿಧೆಡೆ ತರಕಾರಿ, ಹಣ್ಣು ಮಾರಾಟವನ್ನು ವ್ಯಾಪಾರಿಗಳು ಪ್ರಾರಂಭಿಸಿದ್ದರು. ಆದರೆ, ಗ್ರಾಹಕರು ಸುಳಿಯದ ಕಾರಣ ಆತಂಕದ ಕಾರ್ಮೋಡ ಕವಿಯಿತು.

ಮಧ್ಯಾಹ್ನ 12ಕ್ಕೆ ಮೊದಲ ಗಿರಾಕಿ: ‘ನೋಡಿ ಸಾ.. ಇಷ್ಟೊತ್ತಿಗೆ ಹಾಕಿದ ಬಂಡವಾಳ ವಾಪಸ್‌ ಬರುತ್ತಿತ್ತು. ಇವತ್ತು 12 ಗಂಟೆಗೆ ಮೊದಲ ಗ್ರಾಹಕರ ಮುಖ ನೋಡುತ್ತಿದ್ದೇವೆ’ ಎಂದು ₹ 150 ಅನ್ನು ಕಣ್ಣಿಗೆ ಒತ್ತಿಕೊಂಡರು ತರಕಾರಿ ವ್ಯಾಪಾರಿ ಪ್ರಕಾಶ್.

ಪ್ರತಿ ಶನಿವಾರ ಗಿಜಿಗುಡುತ್ತಿದ್ದ ಸಂತೆಹೊಂಡದ ತರಕಾರಿ ಮಾರುಕಟ್ಟೆ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಯಾರಾದರೂ ಹೋಗುವುದನ್ನು ಕಂಡರೆ ಸಾಕು ‘ಅಣ್ಣ..ಸರ್.. ಮೇಡಂ.. ಬನ್ನಿ ಫ್ರೆಶ್ ತರಕಾರಿ, ನೋಡಿ ಕೊಡ್ತಿವಿ’ ಬನ್ನಿ ಎಂಬ ಧ್ವನಿ ಮಾರುಕಟ್ಟೆಯಿಂದ ಕೇಳಿ ಬರುತ್ತಿತ್ತು. ಕೆಲವರು ಮಾರುಕಟ್ಟೆಗೆ ಬಂದು ‘ನಾಳೆ ಇರುತ್ತೇ ತಾನೇ’ ಎಂದು ಕೇಳುತ್ತಾ ವ್ಯಾಪಾರ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.

‘ಸರ್ಕಾರ ಜನರ ಆರೋಗ್ಯದ ದೃಷ್ಟಿಯಿಂದ ನಿಯಮ ಜಾರಿ ಮಾಡಲಿ. ಆದರೆ ಇಷ್ಟು ಗೊಂದಲ ಮಾಡಿದರೆ ಎಲ್ಲರಿಗೂ ಸಮಸ್ಯೆ ಆಗುತ್ತದೆ. ದಿನಪೂರ್ತಿ ಅವಕಾಶ ನೀಡುವ ಬದಲು ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದರೆ ನಮಗೂ ಅನುಕೂಲವಾಗುತ್ತದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.

**

ಸಾಮಾನ್ಯವಾಗಿ ಶನಿವಾರ, ಭಾನುವಾರ ಹೆಚ್ಚಾಗಿ ತರಕಾರಿ ವ್ಯಾಪಾರ ನಡೆಯುತ್ತದೆ. ಲಾಕ್‌ಡೌನ್ ವೇಳೆ ಮಾಡಿದ ಸಾಲವನ್ನು ತೀರಿಸಿ ನೆಮ್ಮದಿಯಾಗಿರೋಣ ಎನ್ನುವಷ್ಟರಲ್ಲಿ ಪುನಃ ಸಮಸ್ಯೆ ಶುರುವಾಗಿದೆ. ಒಂದೇ ದಿನಕ್ಕೆ ಶೇ 70ರಷ್ಟು ನಷ್ಟವಾಗಿದೆ.
-ಇರ್ಫಾನ್, ತರಕಾರಿ ವ್ಯಾಪಾರಿ

**

ಸೊಪ್ಪಿನ ವ್ಯಾಪಾರ ಬಿಟ್ಟರೆ ಬೇರೆ ಗೊತ್ತಿಲ್ಲ. ಬೆಳಗಿನ ಜಾವದಿಂದ ಮಧ್ಯಾಹ್ನ ಆದರೂ ವ್ಯಾಪಾರ ಆಗಿಲ್ಲ. ಸೊಪ್ಪು ನಾಳೆಗೆ ಮಾರಾಟ ಮಾಡೋಕೆ ಆಗಲ್ಲ. ಸಾವಿರಾರು ರೂಪಾಯಿ ನಷ್ಟ ಆಗಿದೆ.
-ಪ್ರಕಾಶ್, ಸೊಪ್ಪಿನ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.