ADVERTISEMENT

ರಾಷ್ಟ್ರೀಯ ಹೆದ್ದಾರಿ ಮೇಲೆ ಜಲರಾಶಿ

ಸತತ 3 ಗಂಟೆ ಸುರಿದ ಮಳೆ, ರಸ್ತೆಗೆ ನುಗ್ಗಿದ ತಾಳ್ಯ ಕೆರೆಯ ನೀರು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 5:55 IST
Last Updated 21 ಅಕ್ಟೋಬರ್ 2022, 5:55 IST
ಹೊಳಲ್ಕೆರೆ– ಚಿತ್ರದುರ್ಗ ಮಾರ್ಗದ ಹಳೇಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–13ರ ಮೇಲೆ ನೀರು ಹರಿಯುತ್ತಿರುವ ದೃಶ್ಯ.
ಹೊಳಲ್ಕೆರೆ– ಚಿತ್ರದುರ್ಗ ಮಾರ್ಗದ ಹಳೇಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–13ರ ಮೇಲೆ ನೀರು ಹರಿಯುತ್ತಿರುವ ದೃಶ್ಯ.   

ಹೊಳಲ್ಕೆರೆ: ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ ತಾಳ್ಯ ಹಾಗೂ ಟಿ.ಎಮ್ಮಿಗನೂರು ಕೆರೆಗಳ ಕೋಡಿ ನೀರು ರಾಷ್ಟ್ರೀಯ ಹೆದ್ದಾರಿ– 13ರ ಮೇಲೆ ಹರಿದು ಸಂಚಾರಕ್ಕೆ ಅಡಚಣೆ ಆಯಿತು.

ಹಳೇಹಳ್ಳಿ– ಶಿವಗಂಗಾ ಮಧ್ಯದ ರಾಷ್ಟ್ರೀಯ ಹೆದ್ದಾರಿ ಮೇಲೆ 3 ಅಡಿ ನೀರು ಹರಿದಿದ್ದರಿಂದ ವಾಹನ ಸವಾರರು ಪರದಾಡುವಂತೆ ಆಯಿತು. ಶಿವಗಂಗಾ– ಹೊಸದುರ್ಗ ಮಾರ್ಗದ ರಸ್ತೆಯ ಮೇಲೂ ಹೆಚ್ಚು ನೀರು ಹರಿಯುತ್ತಿದ್ದು, ಈ ಮಾರ್ಗದ ರಸ್ತೆ ಮಧ್ಯಾಹ್ನದವರೆಗೆ ಬಂದ್ ಆಗಿತ್ತು.

‘ನಾವು ಎಂದೂ ಇಂತಹ ಮಳೆ ನೋಡಿಲ್ಲ. ತಾಳ್ಯ ಕೆರೆಯ ಕೋಡಿ ನೀರು ನದಿಯಂತೆ ಹರಿಯುತ್ತಿದ್ದು, ನೀರು ಅಡಿಕೆ ತೋಟಗಳಿಗೆ ನುಗ್ಗುತ್ತಿದೆ’ ಎಂದು ದಾಸಯ್ಯನ ಹಟ್ಟಿಯ ರಮೇಶ್ ತಿಳಿಸಿದರು.

ADVERTISEMENT

ಪಟ್ಟಣದಲ್ಲೂ ರಾತ್ರಿ 3ರಿಂದ ಬೆಳಿಗ್ಗೆ 6ರವರೆಗೆ ಸತತ ಮಳೆ ಸುರಿದಿದ್ದು, ಹಲವು ಮನೆಗಳು ಕುಸಿದಿವೆ. ಹಿರೆಕೆರೆ ಹಿನ್ನೀರು ಮನೆಗಳಿಗೆ ನುಗ್ಗಿದ್ದು,
ಜನ ಕಷ್ಟ ಅನುಭವಿಸುವಂತೆ ಆಗಿದೆ. ಹಿರೆಕೆರೆಯ ಎರಡೂ ಕೋಡಿಗಳಲ್ಲಿ ಹೆಚ್ಚು ನೀರು ಹರಿಯುತ್ತಿದೆ. ಕೆರೆಯ ಹಿನ್ನೀರು ಚೀರನಹಳ್ಳಿ ರಸ್ತೆಯನ್ನು ಆವರಿಸಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.

ಎಮ್ಮೆಹಟ್ಟಿಯ ಹರಳಪ್ಪ ಎಂಬುವರ ಮನೆಯ ಗೋಡೆ ಕುಸಿದಿದ್ದು, ಬಸವರಾಜು ಎಂಬುವರ ಮಗ ಗಾಯಗೊಂಡಿದ್ದಾರೆ. ಒಂಟಿಕಂಬದ ಮಠದ ಕಡೆಯಿಂದ ಹರಿದು ಬರುವ ಹಳ್ಳದ ನೀರು ಪುರಸಭೆ ಸದಸ್ಯ ಮುರಗೇಶ್ ಅವರ ಪೆಟ್ರೋಲ್ ಬಂಕ್‌ಗೆ ನುಗ್ಗಿದೆ. ಪಟ್ಟಣದಲ್ಲೂ ಹೆಚ್ಚು ಮಳೆಯಾಗಿದ್ದು ಹಲವು ಮನೆಗಳಿಗೆ ನೀರು ನುಗ್ಗಿದೆ. ಹಿರೇಕೆರೆಯ ಕೋಡಿ ನೀರು ಅವಳಿಹಟ್ಟಿ ರಸ್ತೆಯಲ್ಲಿರುವ ಸನ್‌ಶೈನ್ ಶಾಲೆಯ ಆವರಣಕ್ಕೆ ನುಗ್ಗಿದ್ದು, ಪುರಸಭೆ ಸಿಬ್ಬಂದಿ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.

ಹಿರೇಕೆರೆ ಕೋಡಿ ನೀರು ಅವಳಿಹಟ್ಟಿ ರಸ್ತೆಯ ಸೇತುವೆಯ ಮೇಲೆ ಹರಿಯುತ್ತಿರುವುದರಿಂದ ಅಯ್ಯನ ಕಟ್ಟೆ ಬಡಾವಣೆಗೆ ಸಂಪರ್ಕ ಕಡಿತಗೊಂಡಿದೆ. ಅವಳಿಹಟ್ಟಿ, ಮಾಳೇನಹಳ್ಳಿ
ಭಾಗದ ಜನ ನೀರಿನಲ್ಲೇ ಸಾಗುವಂತಾಗಿದೆ.

ಎಚ್.ಡಿ.ಪುರ ಭಾಗದಲ್ಲಿ 64.6 ಮಿ.ಮೀ. ಮಳೆಯಾಗಿದ್ದು, ನಂದನ ಹೊಸೂರು ಗೊಲ್ಲರಹಟ್ಟಿಯಲ್ಲಿ ಮನೆ ಗಳಿಗೆ ನೀರು ನುಗ್ಗಿದೆ. ಬುಧವಾರ ರಾತ್ರಿ ಹೊಳಲ್ಕೆರೆ ಪಟ್ಟಣದಲ್ಲಿ 40.4 ಮಿ.ಮೀ, ರಾಮಗಿರಿಯಲ್ಲಿ 50.2 ಮಿ.ಮೀ,
ತಾಳ್ಯದಲ್ಲಿ 49.2 ಮಿ.ಮೀ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.