ADVERTISEMENT

ಕೊಳವೆಬಾವಿಯಿಂದ ಉಕ್ಕುತ್ತಿರುವ ನೀರು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 19:45 IST
Last Updated 4 ಡಿಸೆಂಬರ್ 2019, 19:45 IST
ಹೊಸದುರ್ಗ ತಾಲ್ಲೂಕಿನ ಅಗಸರಹಳ್ಳಿ ರೈತ ಲಕ್ಷ್ಮಣ್‌ ಅವರ ಕೊಳವೆಬಾವಿಯಲ್ಲಿ ನೀರು ಉಕ್ಕುತ್ತಿರುವುದು
ಹೊಸದುರ್ಗ ತಾಲ್ಲೂಕಿನ ಅಗಸರಹಳ್ಳಿ ರೈತ ಲಕ್ಷ್ಮಣ್‌ ಅವರ ಕೊಳವೆಬಾವಿಯಲ್ಲಿ ನೀರು ಉಕ್ಕುತ್ತಿರುವುದು   

ಹೊಸದುರ್ಗ: ತಾಲ್ಲೂಕಿನ ಗುಡ್ಡದನೇರಲಕೆರೆ ಗ್ರಾಮ ಪಂಚಾಯಿತಿಯ ಅಗಸರಹಳ್ಳಿ ಗ್ರಾಮದ ರೈತ ಲಕ್ಷ್ಮಣ್‌ ಅವರ ಕೊಳವೆಬಾವಿಯಲ್ಲಿ ಸುಮಾರು ಎರಡು ತಿಂಗಳಿನಿಂದ ನೀರು ಉಕ್ಕುತ್ತಿದ್ದು, ಅಚ್ಚರಿಯನ್ನುಂಟು ಮಾಡಿದೆ.

ಕಳೆದ ಫೆಬ್ರುವರಿಯಲ್ಲಿ 540 ಅಡಿ ಕೊಳವೆಬಾವಿ ಕೊರೆಸಲಾಯಿತು. ಆಗ ಎರಡು ಇಂಚು ನೀರು ಸಿಕ್ಕಿತ್ತು. ಪಂಪ್‌ಸೆಟ್‌ ಆನ್‌ ಮಾಡಿದ ಅರ್ಧತಾಸು ಆದ ನಂತರ ನೀರು ಗ್ಯಾಪ್‌ ಒಡೆಯುತ್ತಿತ್ತು. ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಭಾರಿ ಮಳೆಯಾಗಿದ್ದರಿಂದ ಅಂತರ್ಜಲ ಹೆಚ್ಚಾಗಿದೆ. ಇದರಿಂದ ಪಂಪ್‌ಸೆಟ್‌ ಆನ್‌ ಮಾಡದಿದ್ದರೂ ಸ್ವಾಭಾವಿಕವಾಗಿ ನೀರು ಉಕ್ಕಿ ಸಮೀಪದ ಕೆರೆಗೆ ಹರಿಯುತ್ತಿದೆ.

ಪಂಪ್‌ಸೆಟ್‌ ಆನ್‌ ಮಾಡಿದರೂ ಅರ್ಧ ತಾಸು ನೀರು ಉಕ್ಕುತ್ತದೆ. ಪೈಪ್‌ನಲ್ಲೂ ನೀರು ಬರುತ್ತದೆ. ಪಂಪ್‌ಸೆಟ್‌ ಬಂದ್‌ ಮಾಡಿದ ಅರ್ಧ ತಾಸಿನ ನಂತರ ಮತ್ತೆ ನೀರು ಉಕ್ಕುತ್ತಿರುವುದು ವಿಸ್ಮಯವನ್ನುಂಟು ಮಾಡಿದೆ. ಇದು ಸತತ ಬರದಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಹರ್ಷವನ್ನುಂಟು ಮಾಡಿದೆ. ರೈತರು ಕುತೂಹಲದಿಂದ ಜಮೀನಿಗೆ ಬಂದು ಉಕ್ಕುತ್ತಿರುವ ನೀರು ವೀಕ್ಷಿಸುತ್ತಿದ್ದಾರೆ.

ADVERTISEMENT

ಎರಡು ಇಂಚಿನ ಪೈಪ್‌ತುಂಬ ನೀರು ಬರುತ್ತಿದ್ದು, ಸುಮಾರು 3 ಎಕರೆ ಜಮೀನಿನಲ್ಲಿ ತೆಂಗು, ಅಡಿಕೆ, ಈರುಳ್ಳಿ, ಸುಗಂಧರಾಜ ಬೆಳೆ ಬೆಳೆಯಲು ಹೊಲವನ್ನು ಹಸನು ಮಾಡಲಾಗಿದೆ ಎಂದು ಲಕ್ಷ್ಮಣ್‌ ಪುತ್ರ ನಾಗು ಅಗಸರಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.