ADVERTISEMENT

ಅನ್ನಭಾಗ್ಯದ ಅಕ್ಕಿ ದುರ್ಬಳಕೆ ವಿರುದ್ಧ ಎಚ್ಚರಿಕೆ

ಕಿಲೋಗೆ 1 ರೂಪಾಯಿ ಅಕ್ಕಿ ಯೋಜನೆ ಆರಂಭ; ಬಡ ಕುಟುಂಬಗಳಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 11:07 IST
Last Updated 11 ಜುಲೈ 2013, 11:07 IST

ಮಂಗಳೂರು: ಬಡವರು ಅರೆಹೊಟ್ಟೆಯಿಂದ ಇರಬಾರದು, ಕನಿಷ್ಠ ಅವರ ಎರಡು ಹೊತ್ತಿನ ಊಟದ ವ್ಯವಸ್ಥೆಯನ್ನಾದರೂ ಮಾಡಬೇಕು ಎಂಬ ಕಾಳಜಿಯೊಂದಿಗೆ ಸರ್ಕಾರ ಜಾರಿಗೆ ತಂದಿರುವ `ಅನ್ನಭಾಗ್ಯ' ಯೋಜನೆಯನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಬಾರದು, ಕಾಳಸಂತೆಯಲ್ಲಿ ಅಗ್ಗದ ಅಕ್ಕಿ ಮಾರಾಟವಾಗದಂತೆ ಸಮಾಜವೇ ಎಚ್ಚರಿಕೆ ವಹಿಸಿ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕೇಳಿಕೊಂಡಿದ್ದಾರೆ.

ನಗರದ ಪುರಭವನದಲ್ಲಿ ಬುಧವಾರ ಬಿಪಿಎಲ್ ಕುಟುಂಬಗಳಿಗೆ ಒಂದು ರೂಪಾಯಿಗೆ ಕಿಲೋ ಅಕ್ಕಿ ನೀಡುವ `ಅನ್ನಭಾಗ್ಯ' ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಯನ್ನು ಈಡೇರಿಸಿದೆ. ಸರ್ಕಾರ ರಚನೆಗೊಂಡ ಎರಡು ತಿಂಗಳೊಳಗೆ ಒಂದು ರೂಪಾಯಿಗೆ ಅಕ್ಕಿ ಕೊಡುತ್ತಿರುವುದು ಪಕ್ಷದ ಬದ್ಧತೆಗೆ ನಿದರ್ಶನ ಎಂದರು.

ಕಾಂಗ್ರೆಸ್ ಸರ್ಕಾರ ಈ ಹಿಂದೆ ಜಾರಿಗೆ ತಂದ ಹಲವು ಜನಪರ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ ಅವರು, ಕೇಂದ್ರ ಇದೀಗ ಜಾರಿಗೆ ತಂದಿರುವ ಆಹಾರ ಭದ್ರತೆ ಯೋಜನೆ ರಾಜ್ಯದ ಅನ್ನಭಾಗ್ಯ ಯೋಜನೆಗೆ ಪೂರಕವಾಗಿದೆ. ಕೇಂದ್ರದ ಯೋಜನೆಯಿಂದ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಜನರಿಗೆ ಅಗ್ಗದ ದರದಲ್ಲಿ ಆಹಾರಧಾನ್ಯ ದೊರೆಯುವಂತಾಗಲಿದೆ ಎಂದು ಸಚಿವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ.ಆರ್.ಲೋಬೊ ಮಾತನಾಡಿ, ಕೇಂದ್ರವು ಆಹಾರ ಭದ್ರತೆ ಯೋಜನೆಯನ್ನು ಜಾರಿಗೆ ತಂದಿರುವುದರಿಂದ ಮುಂದಿನ ದಿನಗಳಲ್ಲಿ ಕಿಲೋಗೆ 3 ರೂಪಾಯಿ ಅಕ್ಕಿ ಯೋಜನೆ ಜಾರಿಗೆ ಬಂದು, ರಾಜ್ಯ ಸರ್ಕಾರದ ಕಿಲೋಗೆ 1 ರೂಪಾಯಿ ಅಕ್ಕಿ ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಅಥವಾ ಎರಡೂ ಯೋಜನೆಗಳು ಮುಂದುವರಿಯಬಹುದು ಎಂದರು.

`ಅನ್ನಭಾಗ್ಯ' ಯೋಜನೆಯಲ್ಲಿ ಯಾವುದೇ ರಾಜಕೀಯ ಇಲ್ಲ ಎಂದ ಅವರು, ಸರ್ಕಾರದ ಯೋಜನೆಯನ್ನು ಬಡವರು ಸಮರ್ಪಕವಾಗಿ ಬಳಸಿಕೊಂಡಾಗ ಯೋಜನೆ ಯಶಸ್ಸುಗೊಳ್ಳಲು ಸಾಧ್ಯ ಎಂದರು.

ಇನ್ನೊಬ್ಬ ಶಾಸಕ ಬಿ.ಎ.ಮೊಯಿದ್ದೀನ್ ಬಾವ ಮಾತನಾಡಿ, ಕಿಲೋಗೆ 1 ರೂಪಾಯಿಗೆ ಅಕ್ಕಿ ಕೊಡಲು ಸಂಕಲ್ಪ ತೊಟ್ಟ ಸಿದ್ದರಾಮಯ್ಯ ಅವರು ಯಾವುದೇ ಅಡ್ಡಿ ಎದುರಾದರೂ ಅದೆಲ್ಲವನ್ನೂ ನಿವಾರಿಸಿಕೊಂಡು ಯೋಜನೆಯನ್ನು ಜಾರಿಗೆ ತರಿಸುವಲ್ಲಿ ಸಫಲರಾಗಿದ್ದಾರೆ ಎಂದರು.

ಜಿಲ್ಲಾಧಿಕಾರಿ ಎನ್.ಪ್ರಕಾಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ವಿಜಯಪ್ರಕಾಶ್ ಇದ್ದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಶರಣಬಸಪ್ಪ ಸ್ವಾಗತಿಸಿದರು. ಇಲಾಖೆಯ ತಾಲ್ಲೂಕು ವ್ಯವಸ್ಥಾಪಕ ಎಂ.ವಿ.ರಾಜನ್ ವಂದಿಸಿದರು.

ಸರ್ಕಾರಿ ಕಾರ್ಯಕ್ರಮವಾದರೂ ಪುರಭವನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಅಪರೂಪಕ್ಕೆ ಎಂಬಂತೆ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು. ಬಂದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಾಂಕೇತಿಕವಾಗಿ ನಾಲ್ಕಾರು ಮಂದಿಗೆ ವೇದಿಕೆಯಲ್ಲಿ ಅಕ್ಕಿಯ ಮೂಟೆಯನ್ನು ನೀಡಲಾಯಿತು.

`ಇನ್ನು ಊಟಕ್ಕೆ ತೊಂದರೆ ಇಲ್ಲ'
`ನಮ್ಮ ಮನೆಯಲ್ಲಿ 10 ಮಂದಿ ಇದ್ದೇವೆ. ಗಂಡ ರಿಕ್ಷಾ ಓಡಿಸುತ್ತಾರೆ, ನಾನು ಬೇರೆಯವರ ಮನೆಗೆ ಹೋಗಿ ಕೆಲಸ ಮಾಡುತ್ತೇನೆ. ಈ ಹಿಂದೆ ತಿಂಗಳಿಗೆ 20 ಕೆ.ಜಿ. ಅಕ್ಕಿ ಸಿಗುತ್ತಿತ್ತು. ಆಗ ಇನ್ನೂ 20 ಕೆ.ಜಿ.ಅಕ್ಕಿಯನ್ನು ಅಂಗಡಿಯಿಂದ ತರಬೇಕಿತ್ತು. ಇದೀಗ 1 ರೂಪಾಯಿಗೆ 30 ಕೆ.ಜಿ. ಅಕ್ಕಿ ದೊರೆಯುವುದರಿಂದ ನಾವೆಲ್ಲ ನಿಶ್ಚಿಂತೆಯಿಂದ ಹೊಟ್ಟೆ ತುಂಬ ಊಟವಂತೂ ಮಾಡಬಹುದು'
-ಜಾನಕಿ ಮುಳಿಹಿತ್ಲು, ಉಸ್ತುವಾರಿ ಸಚಿವರಿಂದ 30 ಕೆ.ಜಿ.ಅಕ್ಕಿ ಪಡೆದ ಮೊದಲ ಫಲಾನುಭವಿ

ಇನ್ನೂ ಬಾರದ ಅಕ್ಕಿ
ಜಿಲ್ಲೆಯ ಹಲವಾರು ನ್ಯಾಯಬೆಲೆ ಅಂಗಡಿಗಳಿಗೆ ಆರಂಭದ ದಿನವೇ ಅನ್ನಭಾಗ್ಯದ ಅಕ್ಕಿ ಬಾರದೆ ಬಿಪಿಎಲ್ ಕಾರ್ಡ್‌ದಾರರಿಗೆ ನಿರಾಸೆ ಉಂಟಾಯಿತು. ಮಂಗಳೂರಿನ ಮಣ್ಣಗುಡ್ಡೆಯಲ್ಲಿನ ಎರಡು ನ್ಯಾಯಬೆಲೆ ಅಂಗಡಿಗಳೂ ಇದರಲ್ಲಿ ಸೇರಿದ್ದವು.

ಈ ಬಗ್ಗೆ ಆಹಾರ ಇಲಾಖೆಯ ಉಪನಿರ್ದೇಶಕ ಶರಣಬಸಪ್ಪ ಅವರನ್ನು ಕೇಳಿದಾಗ, 500 ಕ್ಕಿಂತ ಅಧಿಕ ಕಾರ್ಡ್‌ಗಳಿರುವ ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ ಪೂರೈಸಲಾಗಿದೆ, ಉಳಿದ ಅಂಗಡಿಗಳಿಗೆ 2 ದಿನದೊಳಗೆ ಅಕ್ಕಿ ರವಾನೆಯಾಗಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.