ADVERTISEMENT

ಅರಣ್ಯ ಒತ್ತುವರಿ: ಹಳೆಯ ಪ್ರಕರಣಗಳಿಗೆ ಸಿಗದ ಮುಕ್ತಿ!

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 10:00 IST
Last Updated 8 ಫೆಬ್ರುವರಿ 2011, 10:00 IST

ಮಂಗಳೂರು: ಒಟ್ಟು 4087 ಚದರ ಕಿಮೀ ವ್ಯಾಪ್ತಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆಯ ಜಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಳ್ಳುವ ಒತ್ತುವರಿ ನಡೆದಿಲ್ಲವಾದರೂ ತುಂಬ ಹಳೆಯ ಅರಣ್ಯ ಸಂಬಂಧಿ ಅಪರಾಧ ಪ್ರಕರಣಗಳು ಮಾತ್ರ ಈವರೆಗೆ ಮುಕ್ತಿ ಸಿಗದೆ ನೆನೆಗುದಿಗೆ ಬಿದ್ದಿವೆ.ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ಅತ್ಯಧಿಕ ಅರಣ್ಯ ಪ್ರದೇಶ ಇರುವುದು ಸುಳ್ಯ, ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ. ಒಟ್ಟು ದಾಖಲಾಗಿರುವ 4087 ಚದರ ಕಿಮೀ ಅರಣ್ಯ ಪ್ರದೇಶದಲ್ಲಿ 1228 ಚದರ ಕಿಮೀ ಮೀಸಲು ಅರಣ್ಯ ಎಂದು ಘೋಷಿಸಲಾಗಿದ್ದು ಹೆಚ್ಚಿನ ಅಪರಾಧ ಪ್ರಕರಣಗಳು ವರದಿಯಾಗುವುದು ಇದೇ ಭಾಗದಲ್ಲಿ.

ನಾಲ್ವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್)ಗಳ ವ್ಯಾಪ್ತಿಯಲ್ಲಿ ಒಟ್ಟು ಎಂಟು ಪ್ರಾದೇಶಿಕ ವಲಯಗಳಿದ್ದು ಅವರೊಂದಿಗೆ ಅರಣ್ಯ ಸಂಚಾರಿ ದಳ ಹಾಗೂ ಕಳ್ಳ ಸಾಗಣೆ ತಡೆ ಸಂಚಾರಿ ದಳವೂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಭೂಮಿಯ ಅತಿಕ್ರಮಣ ಹಾಗೂ ಅರಣ್ಯ ಸಂಪತ್ತು ಕಳ್ಳ ಸಾಗಣೆಯ ಮೇಲೆ ಪರಿಣಾಮಕಾರಿ ನಿಯಂತ್ರಣ ಸಾಧಿಸಲು ಸಾಧ್ಯವಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

1978ರ ಏಪ್ರಿಲ್ 27ಕ್ಕಿಂತ ಮುಂಚೆ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ 166 ಹೆಕ್ಟೇರ್ ಅರಣ್ಯ ಜಾಗ ಒತ್ತುವರಿ ಸಂಬಂಧಿ 228 ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಿಂದಾಗಿ ಎಂಟು ಪ್ರಕರಣಗಳನ್ನು (7.47 ಹೆಕ್ಟೆರ್ ಜಾಗಕ್ಕೆ ಸಂಬಂಧಿಸಿ) ಮಾತ್ರ ಇತ್ಯರ್ಥಮಾಡಲಾಗಿದ್ದು ಉಳಿದ ಪ್ರಕರಣಗಳು ವಿವಿಧ ಹಂತದ ವಿಚಾರಣೆಯಲ್ಲಿವೆ.

1978ರ ನಂತರ 2010ರ ನವೆಂಬರ್ ತಿಂಗಳಿಗೆ ಅಂತ್ಯಗೊಂಡಂತೆ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಉಪ್ಪಿನಂಗಡಿ, ಸುಳ್ಯ, ಪಂಜ ಹಾಗೂ ಸುಬ್ರಹ್ಮಣ್ಯ ಅರಣ್ಯ ವಲಯದ ವ್ಯಾಪ್ತಿಯಲ್ಲಿ 1615.341 ಹೆಕ್ಟರ್ ಜಾಗಕ್ಕೆ ಸಂಬಂಧಿಸಿ ಒಟ್ಟು 2622 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 105 ಪ್ರಕರಣಗಳ 53.800 ಹೆಕ್ಟೆರ್ ಜಾಗದ ಒತ್ತುವರಿ ತೆರವುಗೊಳಿಸಲಾಗಿದೆ.

ಸದ್ಯದ ಸ್ಥಿತಿಯಲ್ಲಿ 237 ಪ್ರಕರಣಗಳು (1985ರಿಂದ 2009) ವಿಚಾರಣೆಗೆ ಬಾಕಿ ಇದ್ದು 61 ಪ್ರಕರಣಗಳಲ್ಲಿ ಅರಣ್ಯ ಇಲಾಖೆಗೆ ಭರ್ತಿಯಾಗಬೇಕಾದ ಶುಲ್ಕ ಪಾವತಿಯಾಗಿಲ್ಲ. 1992 ಹಾಗೂ 1994 ರಲ್ಲಿ ವರದಿಯಾದ ಪ್ರಕರಣಗಳಲ್ಲಿ ಬಹುತೇಕ ಇನ್ನೂ ಇತ್ಯರ್ಥವಾಗಿಲ್ಲ. ಅರಣ್ಯ ಭೂಮಿ ಒತ್ತುವರಿ, ಅರಣ್ಯ ಸಂಪತ್ತು ಲೂಟಿ, ವನ್ಯಮೃಗಗಳ ಬೇಟೆ ಮತ್ತಿತರ 120 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಆದರೆ 2010ರ ಏಪ್ರಿಲ್‌ನಿಂದ ಈತನಕ ಇಂತಹ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಇಲಾಖೆ ದಾಖಲೆಗಳು ತಿಳಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.