ಮಂಗಳೂರು:ಇದರಲ್ಲಿ ಯಕ್ಷಗಾನದ ಹಾಡು ಇದೆ, ಪಾತ್ರಗಳಿವೆ, ಕುಣಿತವೂ ಇದೆ; ವೇಷಭೂಷಣವೂ ಯಕ್ಷಗಾನದ್ದೇ. ಆದರೆ ಇದು ಯಕ್ಷಗಾನವಲ್ಲ. ಇದರಲ್ಲಿ ಯಕ್ಷಗಾನಕ್ಕಿಂತ ಸ್ವಲ್ಪ ಹೆಚ್ಚಿನದೂ ಇದೆ. ಮಂಗಳೂರಿನ ಯುವ ಗ್ರಾಫಿಕ್ಸ್ ಕಲಾವಿದರು ಸೇರಿ ವಿಡಿಯೊ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಯಕ್ಷಗಾನಕ್ಕೆ ಆಧುನಿಕ ಸ್ಪರ್ಶ ನೀಡಿದ್ದಾರೆ. ಈ ವಿನೂತನ ಪರಿಕಲ್ಪನೆಗೆ ಅವರು ಇಟ್ಟಿರುವ ಹೆಸರು- `ಯಕ್ಷಚಿತ್ರ~.
ಏನಿದರ ವಿಶೇಷ:
ಯಕ್ಷಗಾನದಲ್ಲಿ ಶಿವ ಪಾರ್ವತಿಯರ ನಡುವಿನ ಸಂಭಾಷಣೆ, ಕುಣಿತ ರಂಗಸ್ಥಳದ ಮೇಲೆ ನಡೆದರೆ, ಯಕ್ಷಚಿತ್ರದಲ್ಲಿ ಅದು ಸಾಕ್ಷಾತ್ ಕೈಲಾಸಗಿರಿಯಲ್ಲೇ ನಡೆಯುತ್ತದೆ. ಶಿವ ಪಾರ್ವತಿಯರು ಮಾತನಾಡುವಾಗ ಕೈಲಾಸ ಗಿರಿಯ ಕೊಳದಲ್ಲಿ ಬಾತುಗಳು ಈಜಾಡುವುದನ್ನೂ ಕಾಣಬಹುದು. ಶಿವನ ಕತ್ತಿನ ಹಾವೂ ಹರಿದಾಡುತ್ತದೆ. ಭಸ್ಮಾಸುರ-ಭಸ್ಮವಾಗುವುದನ್ನು ರಂಗಸ್ಥಳದಲ್ಲಿ ಸಾಂಕೇತಿಕವಾಗಿ ತೋರಿಸಿದರೆ, ಯಕ್ಷಚಿತ್ರದ ಭಸ್ಮಾಸುರ ಕಣ್ಣೆದುರೇ ಬೆಂಕಿಯಿಂದ ಧಗಿಸಿ ಭಸ್ಮವಾಗುತ್ತಾನೆ.
ವೈಂಕುಂಠವಾಸಿ ಹರಿ ಸಾಕ್ಷಾತ್ ಆದಿಶೇಷನ ಮೇಲೆಯೇ ಪವಡಿಸಿರುವುದನ್ನು ಇಲ್ಲಿ ಕಾಣಬಹುದು. ಆದರೆ, ಯಕ್ಷಚಿತ್ರದಲ್ಲಿ ಭಾಗವತರು ಕಾಣಿಸುವುದಿಲ್ಲ; ಅವರ ಧ್ವನಿ ಮಾತ್ರ ಕೇಳಿಸುತ್ತದೆ. ವಿಶೇಷ ಸಂದರ್ಭದಲ್ಲಿ ಸೂಕ್ತ ಸೌಂಡ್ ಎಫೆಕ್ಟ್ ಅನ್ನೂ ಬಳಸಬಹುದಾಗಿದೆ. ಈ ಹೊಸ ಪರಿಕಲ್ಪನೆ ಮೂಡಿದ್ದು ಮುಂಬೈನ ಭ್ರಾಮರಿ ಯಕ್ಷನೃತ್ಯ ಕಲಾನಿಲಯದ ಕಟೀಲು ಸದಾನಂದ ಶೆಟ್ಟಿ ಅವರಿಗೆ.
`ಮುಂಬೈನಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿರುವಾಗ ಹೊರಗಿನವರನ್ನೂ ಈ ಕಲೆಗೆ ಸೆಳೆಯಲು ಏನಾದರೂ ಮಾಡಬೇಕೆಂಬ ಹಂಬಲವಿತ್ತು. ಕೆಲವೊಂದು ಯಕ್ಷಗಾನ ಕಾರ್ಯಕ್ರಮಕ್ಕೆ ಎಲ್‌ಸಿಡಿ ಮಾನಿಟರ್ ಮೂಲಕ ದೃಶ್ಯಗಳನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ರಂಗಸ್ಥಳದಲ್ಲಿ ಇತರ ಬೆಳಕಿನ ಸಂಯೋಜನೆಯೂ ಇರುವುದರಿಂದ ಈ ಪ್ರಯತ್ನ ಯಶಸ್ವಿಯಾಗಲಿಲ್ಲ.
ಆಗ ವಿಷುವಲ್ ಗ್ರಾಫಿಕ್ಸ್ ತಂತ್ರಜ್ಞಾನ ಬಳಸುವ ಆಲೋಚನೆ ಮೂಡಿತು~ ಎಂದು ಸದಾನಂದ ಶೆಟ್ಟಿ `ಪ್ರಜಾವಾಣಿ~ಗೆ ತಿಳಿಸಿದರು.
ಅವರು ಮುಂಬೈನದೇ ಕೆಲವೊಂದು ವಿಷುವಲ್ ಗ್ರಾಫಿಕ್ಸ್ ತಂತ್ರಜ್ಞಾನ ಸಂಸ್ಥೆಗಳ ಮೊರೆ ಹೋದರು. ಆದರೆ ಅವರು ವಿಧಿಸುವ ದುಬಾರಿ ದರ ಅವರ ಆಸೆಗೆ ತಣ್ಣೀರೆರಚಿತ್ತು. ಮಂಗಳೂರಿನ ಕಲರ್ಸ್ ಆರ್ಟ್ ಸ್ಟುಡಿಯೋದ ಯುವಕರು ಅವರ ಕನಸನ್ನು ಈಡೇರಿಸಲು ಮುಂದಾದರು. ಯಕ್ಷಚಿತ್ರದ ಸಂಸ್ಕರಣೆ ಹಾಗೂ ಆರ್ಥಿಕ ನಿರ್ವಹಣೆಯ ಹೊಣೆಯನ್ನು ಕಲರ್ಸ್ ಆರ್ಟ್ ಸ್ಟುಡಿಯೊ, ಟ್ರೈಬಲ್ ಗ್ರಾಫಿಕ್ಸ್ ಹಾಗೂ ಇಮ್ಯಾಜಿನೇಷನ್ ಮೂವಿಸ್~ ಸಂಸ್ಥೆ ವಹಿಸಿಕೊಂಡಿತು.
ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಶ್ರುತಿ ವಿಷುವಲ್ ಇಫೆಕ್ಟ್ ಕಾರ್ಯದಲ್ಲಿ ನಾಗೇಶ್, ಪ್ರದೀಪ್‌ರಾಯ್, ಪುಷ್ಪರಾಜ್, ವಿಕಾಸ್ ಅಂಬ್ಲಮೊಗರು ಕಲರ್ ಕರೆಕ್ಷನ್ ಮತ್ತು ಹಿನ್ನೆಲೆ ಸುಧಾರಣೆ ಕಾರ್ಯವನ್ನು ನಿರ್ವಹಿಸಿದ್ದಾರೆ.
`ಯಕ್ಷಗಾನದ ಗಂಧವನ್ನು ಒಳಗೊಂಡ `ಯಕ್ಷಚಿತ್ರ~ ಸಂಪೂರ್ಣ ಬೇರೆಯೇ ಅನುಭವ ನೀಡುತ್ತದೆ. ಇದು ಯಕ್ಷಗಾನಕ್ಕೆ ಪರ್ಯಾಯವಲ್ಲ. ಇದೊಂದು ವಿಭಿನ್ನ ಪ್ರಯತ್ನ~ ಎನ್ನುತ್ತಾರೆ ಕಲರ್ಸ್ ಆರ್ಟ್ ಸ್ಟುಡಿಯೋದ ಸಂತೋಷ್ ಕುಮಾರ್ ಶೆಟ್ಟಿ.
`ಯಕ್ಷಚಿತ್ರಕ್ಕೆ ಕ್ರೋಮೋ ಕೀ ಶೂಟಿಂಗ್ ತಂತ್ರಜ್ಞಾನ ಬಳಸಿದ್ದೇವೆ. ಮನುಷ್ಯನ ಚರ್ಮದ ಬಣ್ಣದಲ್ಲಿ ಸಾಮಾನ್ಯವಾಗಿ ಕ್ರೋಮೊ ಹಸಿರು ಅಥವಾ ನೀಲಿ ಬಣ್ಣದ ಅಂಶ ಇರುವುದಿಲ್ಲ. ಅದಕ್ಕೆ ಪೂರಕವಾಗಿ ನಾವು ಹಸಿರು ಅಥವಾ ನೀಲಿ ಬಣ್ಣದ ಹಿನ್ನೆಲೆ ಪರದೆ ಬಳಸಿ, ಈ ಬಣ್ಣಗಳಿರದ ವೇಷಭೂಷಣ ಬಳಸಿ ಯಾವುದೇ ದೃಶ್ಯವನ್ನು ಚಿತ್ರೀಕರಿಸಿದರೆ ಅದರ ಹಿನ್ನೆಲೆಯ ದೃಶ್ಯಗಳನ್ನು ಬದಲಾಯಿಸಬಹುದು. ನಾವು ಹಸಿರು ಪರದೆಯನ್ನು ಬಳಸಿದೆವು. ವೇಷಭೂಷಣದಲ್ಲಿ ಎಲ್ಲಿಯೂ ಹಸಿರು ಇರದಂತೆ ಎಚ್ಚರವಹಿಸಿದೆವು~ ಎಂದು ಸಂತೋಷ್ ವಿವರಿಸಿದರು.
` ಯಕ್ಷಚಿತ್ರದ ವಿಡಿಯೊ ಭಾಗವನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರೀಕರಣದ ವೇಳೆ ಯಾವುದೇ ನೆರಳು ಮೂಡದಂತೆ ನೋಡಿಕೊಳ್ಳಬೇಕು ಹಾಗೂ ಯಾವ ದೃಶ್ಯವನ್ನು ಹೇಗೆ ಬದಲಾಯಿಸಬಹುದು ಎಂಬ ಪರಿಕಲ್ಪನೆ ನಮಗಿರಬೇಕು. ನಮ್ಮ ತಂಡದವರಲ್ಲಿ ಉತ್ತಮ ಸಮನ್ವಯ ಇದ್ದುದರಿಂದ ಈ ಯಕ್ಷಚಿತ್ರ ನಾವು ಊಹಿಸಿದ್ದಕ್ಕಿಂತ ಚೆನ್ನಾಗಿ ಮೂಡಿ ಬಂದಿದೆ~ ಎನ್ನುತ್ತಾರೆ ಟ್ರೈಬಲ್ ಗ್ರಾಫಿಕ್ಸ್‌ನ ನಾಗೇಶ್.
`ಇದು ಮೊದಲ ಪ್ರಯತ್ನ.ಯಕ್ಷಚಿತ್ರವನ್ನು ನಿರ್ಮಿಸಿದ ಬಳಿಕ ನಮ್ಮಲ್ಲಿ ಆತ್ಮವಿಶ್ವಾಸ ಮೂಡಿದೆ. ವಿಡಿಯೊ ಚಿತ್ರೀಕರಣ ನಡೆಸುವಾಗ ಇನ್ನಷ್ಟು ಎಚ್ಚರವಹಿಸಿದರೆ ನಮ್ಮ ಪ್ರಯತ್ನ ಮತ್ತಷ್ಟು ಪರಿಪೂರ್ಣವಾಗಿ ಮೂಡಿಬರಲಿದೆ~ ಎನ್ನುತ್ತಾರೆ ಕಲಾ ಪರಿಕಲ್ಪನೆ ಹೊಣೆ ಹೊತ್ತ ವಿಕಾಸ್.
`ಗ್ರಾಫಿಕ್ಸ್‌ಗಾಗಿ ಅಡೋಬ್ ಆಫ್ಟರ್ ಎಫೆಕ್ಟ್, ಮಾಯಾ ಹಾಗೂ ಫೋಟೋಶಾಪ್ ತಂತ್ರಾಂಶ ಬಳಸಿದ್ದೇವೆ. ಶೂಟಿಂಗ್ ಪೂರ್ಣಗೊಂಡ ಬಳಿಕ ಕೇವಲ ವಿಡಿಯೊ ಎಫೆಕ್ಟ್ ಮೂಡಿಸಲು ಸುಮಾರು ನಾಲ್ಕೂವರೆ ತಿಂಗಳು ಕೆಲಸ ಮಾಡಿದ್ದೇವೆ. ನಮ್ಮ ಶ್ರಮವನ್ನು ಹೊರತುಪಡಿಸಿ ಅಂದಾಜು 2 ಲಕ್ಷ ರೂಪಾಯಿಗೂ ಅಧಿಕ ವೆಚ್ಚವಾಗಿದೆ~ ಎಂದು ಸಂತೋಷ್ ವಿವರಿಸಿದರು.
`ಭಸ್ಮಾಸುವ ಮೋಹಿನಿ ಪ್ರಸಂಗದಲ್ಲಿ ಕೇವಲ ಐದು ಪಾತ್ರಗಳು ಬರುತ್ತವೆ. ಹಾಗಾಗಿ ಮೊದಲ ಪ್ರಯತ್ನಕ್ಕೆ ಈ ಪ್ರಸಂಗವನ್ನು ಆಯ್ದುಕೊಂಡಿದ್ದೇವೆ. ಈ ಚಿತ್ರದಲ್ಲಿ ಕೈಲಾಸಗಿರಿ, ವೈಕುಂಠದ ದೃಶ್ಯಾವಳಿ, ಭಸ್ಮಾಸುರ ತಲೆಯ ಮೇಲೆ ಕೈಇಟ್ಟುಕೊಂಡು ದಹನವಾಗುವ ದೃಶ್ಯಗಳಲ್ಲಿ ವಿಡಿಯೊ ಎಫೆಕ್ಟ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅವಕಾಶವಿದೆ. ಮೊದಲ ಪ್ರಯತ್ನ ಪರವಾಗಿಲ್ಲ.
ವಿಷುವಲ್ ಎಫೆಕ್ಟ್ ಕಾರ್ಯ ಪೂರ್ಣಗೊಂಡಿದ್ದು. ಇದೇ ತಿಂಗಳ ಅಂತ್ಯದೊಳಗೆ ಡಿವಿಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ. ಉತ್ತಮ ನಿರ್ಮಾಪಕರು ದೊರೆತರೆ ಇನ್ನಷ್ಟು ಯಕ್ಷಗಾನ ಪ್ರಸಂಗಗಳನ್ನು ಮತ್ತಷ್ಟು ಮನೋಜ್ಞವಾಗಿ ರೂಪಿಸುವ ಉದ್ದೇಶವಿದೆ~ ಎಂದು ಸಂತೋಷ್ ಹೇಳಿದರು.
`ನಮ್ಮ ಮೊದಲ ಪ್ರಯತ್ನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. `ಯಕ್ಷಚಿತ್ರ~ ಎಂಬ ಹೆಸರು ಇಡುವಂತೆ ಅವರೇ ಸೂಚಿಸಿದ್ದಾರೆ. ಯಕ್ಷಗಾನ ಸಿ.ಡಿ.ಗಳಲ್ಲಿ ಪರದೆ ಚಲನೆ ಇಲ್ಲದಿರುವ ಕೊರತೆ ನೀಗಿಸಲು ನಾವು ಹಿನ್ನೆಲೆಯಲ್ಲಿ ಗ್ರಾಫಿಕ್ಸ್ ಬಳಸಿದ್ದೇವೆ. ಜತೆಗೆ ಸಂಭಾಷಣೆಯ ಧ್ವನಿಯನ್ನೂ ಡಬ್ಬಿಂಗ್ ಮಾಡಿದ್ದೇವೆ. ಯಕ್ಷಗಾನ ಪ್ರೇಮಿಗಳಿಗೂ ನಮ್ಮ ಪ್ರಯತ್ನ ಇಷ್ಟವಾಗಲಿದೆ ಎಂಬ ನಿರೀಕ್ಷೆ ನಮ್ಮದು~ ಎಂದು ಅವರು ತಿಳಿಸಿದರು.
`ಭವಿಷ್ಯದಲ್ಲಿ ಇಂಗ್ಲಿಷ್ ಯಕ್ಷಗಾನಕ್ಕೆ ಗ್ರಾಫಿಕ್ ಎಫೆಕ್ಟ್ ಬಳಸಿ ಯಕ್ಷಗಾನ ಕಲೆಯನ್ನು ಜಾಗತಿಕವಾಗಿ ಪಸರಿಸುವ ಕನಸು ಇದೆ~ ಎಂದು ಸದಾನಂದ ಶೆಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.