ADVERTISEMENT

ಎರಡನೇ ಮಗು ಪತ್ತೆ; ಶಿಶುಮಂದಿರಕ್ಕೆ ಸೇರ್ಪಡೆ

ಇಬ್ಬರು ಮಕ್ಕಳ ಮಾರಾಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 11:21 IST
Last Updated 19 ಜುಲೈ 2013, 11:21 IST

ಕಾಸರಗೋಡು: ರತೀಶ್-ಪ್ರೇಮ ದಂಪತಿ ಮಕ್ಕಳನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 60 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಮಗುವನ್ನು ತಳಿಪರಂಬದ ಶಿಶುಮಂದಿರದಲ್ಲಿ ಸೇರಿಸಲಾಗಿದೆ.

ಇಲ್ಲಿನ ನೆಲ್ಲಿಕುಂಜೆ ಕಡಪ್ಪುರದ ಈ ದಂಪತಿ ತಮ್ಮ ಮಗುವನ್ನು ರೂ 60 ಸಾವಿರಕ್ಕೆ ಮಾರಾಟ ಮಾಡಿದ್ದರು. ಕುಂದಾಪುರದ ಕೃಷ್ಣ ಆಚಾರ್ಯ- ಶಾಂತಾ ದಂಪತಿಗಳಿಗೆ ಮಗುವನ್ನು ಮಾರಾಟ ಮಾಡಲಾಗಿತ್ತು. ಪೊಲೀಸರು ಬುಧವಾರ ಕುಂದಾಪುರದಲ್ಲಿ ಮಗುವನ್ನು ಪತ್ತೆ ಮಾಡಿದ ಬಳಿಕ ಶಿಶುಮಂದಿರದಲ್ಲಿ ಸೇರಿಸಿದ್ದಾರೆ.

ಈಗ 2 ವರ್ಷದ ಮಗುವಾಗಿರುವ ಈ ಮಗುವನ್ನು 6 ತಿಂಗಳಾಗಿದ್ದಾಗ ರೂ 60 ಸಾವಿರಕ್ಕೆ ಮಾರಾಟ ಮಾಡಲಾಗಿತ್ತು.  ಕಾಸರಗೋಡು ಮಹಿಳಾ ಎಸ್‌ಐ ಟಿ.ಪಿ.ಸುಧಾ, ಹೆಚ್ಚುವರಿ ಎಸ್‌ಐ ವಿಜಯ ಕರಿಯಪ್ಪ ಅವರು ಪಡೆದ ಕುಟುಂಬದ ಜತೆ ಕಾಸರಗೋಡಿಗೆ ಮರಳಿದ್ದರು. ಚೈಲ್ಡ್ ವೆಲ್ಫೇರ್ ಸಮಿತಿ ಅಧ್ಯಕ್ಷರ ಮುಂದೆ ಮಗುವನ್ನು ಹಾಜರುಪಡಿಸಿದ ಬಳಿಕ ತಳಿಪ್ಪರಂಬದ ಶಿಶುಮಂದಿರಕ್ಕೆ ಸೇರಿಸಲಾಯಿತು. ಮಗುವನ್ನು ಕಾನೂನು ಪ್ರಕಾರ ತಾವು ದತ್ತು ಪಡೆದಿದ್ದೇವೆ ಎಂದು ಕುಂದಾಪುರದ ಕೃಷ್ಣ ಆಚಾರ್ಯ-ಶಾಂತಾ ದಂಪತಿಗಳ ವಾದವನ್ನು ಚೈಲ್ಡ್ ವೆಲ್ಫೇರ್ ಸಮಿತಿ ತಿರಸ್ಕರಿಸಿತು.

ದಂಪತಿಯ ಎರಡನೇ ಮಗು 1.5 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು. ಬಬ್ಲು ಹೆಸರಿನ ಈ ಮಗುವನ್ನು ಪೊಲೀಸರು ಮಂಗಳೂರಿನಲ್ಲಿ ಪತ್ತೆ ಹಚ್ಚಿದ್ದರು. ಆರೋಪಿ ದಂಪತಿಯ ಜತೆಗೆ ಈ ಮಗು ಕೂಡಾ ಕಣ್ಣೂರು ಕೇಂದ್ರ ಕಾರಾಗ್ರಹದಲ್ಲಿದೆ. 8 ತಿಂಗಳಾಗಿರುವ ಬಬ್ಲುವನ್ನು ಶಿಶುಮಂದಿರಕ್ಕೆ ಸೇರಿಸಲು ಚೈಲ್ಡ್ ವೆಲ್ಫೇರ್ ಸಮಿತಿ ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.