ADVERTISEMENT

ಐಟಿ ಎಲ್ಲರಿಗೂ ಸಿಗಲಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 6:10 IST
Last Updated 18 ಏಪ್ರಿಲ್ 2012, 6:10 IST

ಮಂಗಳೂರು: ಮಾಹಿತಿ ತಂತ್ರಜ್ಞಾನ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗುತ್ತಿದೆ. ಇದು ಸಲ್ಲದು. ಬ್ಯಾಂಕ್‌ಗಳು ಗ್ರಾಮೀಣ ಪ್ರದೇಶದಲ್ಲೂ ಹೆಚ್ಚು ಸೇವೆ ನೀಡಿ ಮಾಹಿತಿ ತಂತ್ರಜ್ಞಾನದ ಉಪಯೋಗವನ್ನು ತಳಮಟ್ಟಕ್ಕೂ ತಲುಪಿಸಬೇಕು ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಆರ್.ಅನಂತನ್ ಇಲ್ಲಿ ಕರೆ ನೀಡಿದರು.

ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ಅಧ್ಯಯನ ವಿಭಾಗ ನಗರದ ವಿ.ವಿ. ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಬ್ಯಾಂಕಿಂಗ್ ವಲಯದ ಮೇಲೆ ತಂತ್ರಜ್ಞಾನದ ಪರಿಣಾಮ: ಸವಾಲುಗಳು-ಭವಿಷ್ಯ~ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಭಾರತೀಯ ಬ್ಯಾಂಕ್‌ಗಳು ಸ್ಥಿರ: ಭಾರತೀಯ ಬ್ಯಾಂಕ್‌ಗಳು ಗಮನಾ ರ್ಹವಾಗಿ ಕಾರ್ಯನಿರ್ವಹಿಸು ತ್ತಿದ್ದು, ಅವುಗಳು ಸ್ಥಿರವಾಗಿವೆ. ಅಮೆರಿಕದಲ್ಲಿ ಉಂಟಾದ ಆರ್ಥಿಕ ಹಿಂಜರಿತ ಭಾರತೀಯ ಬ್ಯಾಂಕ್‌ಗಳನ್ನು ತೀವ್ರವಾಗಿ ಬಾಧಿಸಲಿಲ್ಲ. ಭಾರತೀಯ ಬ್ಯಾಂಕ್‌ಗಳು ವಿಶ್ವದ ಇತರ ದೇಶಗಳಂತೆ ಅಮೆರಿಕದ ಬ್ಯಾಂಕಿಂಗ್ ಕ್ಷೇತ್ರಗಳನ್ನು ಅವಲಂಬಿಸದೆ ಇರುವುದರಿಂದ ತೊಂದರೆ ತಪ್ಪಿತು. ಅಮೆರಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿದಿದ್ದರೂ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಫಲವಾಗಿದೆ ಎಂದರು.

ಮಾಹಿತಿ ತಂತ್ರಜ್ಞಾನದಿಂದ ಎಲ್ಲ ಸಮಸ್ಯೆಗಳು ನಿವಾರಣೆ ಆಗಿಲ್ಲ. ಅದರಿಂದಲೂ ಕೆಲವು ಸಮಸ್ಯೆಗಳು ಉಂಟಾಗುತ್ತಿವೆ ಎಂಬುದನ್ನು ಉದಾಹರಿಸಿದರು.

ಹಳ್ಳಿಗೂ ತೆರಳಿ: ಬ್ಯಾಂಕ್‌ನ ಕಚೇರಿಯಲ್ಲಿ ಕುಳಿತು ವಿತ್ತೀಯ ಸೇರ್ಪಡೆ ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳಿಗೆ ತೆರಳಿ, ಅಲ್ಲಿನ ನಾಗರಿಕರಿಗೆ ಬ್ಯಾಂಕಿಂಗ್ ಸೇವೆ ಕುರಿತು ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಸಹಕಾರಿಯಾಗಿದೆ ಎಂದು ವಿಚಾರ ಸಂಕಿರಣ ಉದ್ಘಾಟಿಸಿದ ನಿಟ್ಟೆ ಕೆ.ಎಸ್.ಹೆಗ್ಡೆ ಮ್ಯಾನೇಜ್‌ಮೆಂಟ್ ಸಂಸ್ಥೆ ಶೈಕ್ಷಣಿಕ ಮಂಡಳಿ ಅಧ್ಯಕ್ಷ ಡಾ.ಎನ್.ಕೆ.ತಿಂಗಳಾಯ ಹೇಳಿದರು.

ಹೊಸ ತಲೆಮಾರಿನ ಬ್ಯಾಂಕ್‌ಗಳು ಶಾಖೆಗಳಿಗೆ ಕೊಡುವ ಮಹತ್ವಕ್ಕಿಂತ ಎಟಿಎಂಗಳಿಗೆ ಹೆಚ್ಚು ಒತ್ತು ನೀಡುತ್ತವೆ. ದೇಶದಲ್ಲಿ 74 ಸಾವಿರ ಎಟಿಎಂಗಳಿದ್ದು, ಅವುಗಳ ಪೈಕಿ ಕೇವಲ ಶೇ. 10 ಎಟಿಎಂಗಳು ಮಾತ್ರ ಗ್ರಾಮೀಣ ಪ್ರದೇಶದಲ್ಲಿವೆ.

ಬ್ಯಾಂಕಿಂಗ್ ವಲಯದ ಮೇಲೆ ಮಾಹಿತಿ ತಂತ್ರಜ್ಞಾನ ಗಾಢ ಪ್ರಭಾವದಿಂದ ಅನಕ್ಷರಸ್ಥರೂ ಕೂಡ ಇಂದು ಎಟಿಎಂ ಕೇಂದ್ರಗಳಲ್ಲಿ ವ್ಯವಹಾರ ನಡೆಸಬಹುದು. ದೇಶದಲ್ಲಿ ಸುಮಾರು 73 ಸಾವಿರ ಕೋಟಿ ಬ್ಯಾಂಕ್ ಖಾತೆಗಳಿದ್ದು, ಅವುಗಳ ಪೈಕಿ 56 ಕೋಟಿ ಉಳಿತಾಯ ಖಾತೆಗಳು. ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್‌ನ ಕ್ರಾಂತಿ ಯಿಂದಾಗಿ ಕ್ಷಣಮಾತ್ರದಲ್ಲೇ ಬ್ಯಾಂಕ್ ವ್ಯವಹಾರಗಳನ್ನು ತಿಳಿದುಕೊಳ್ಳಬಹುದು ಎಂದರು. ದೇಶದ ಸಾರ್ವಜನಿಕ ರಂಗದ ಬ್ಯಾಂಕ್‌ಗಳ ಪೈಕಿ ಶೇ.98 ಬ್ಯಾಂಕ್‌ಗಳು ಕಂಪ್ಯೂಟರೀಕರಣಗೊಂಡಿವೆ. ಕಂಪ್ಯೂ ಟರೀ ಕರಣದಿಂದ ವ್ಯವಹಾರ ಗಳು ವೇಗ ಪಡೆದುಕೊಂಡಿವೆ. ಮಾಹಿತಿ ತಂತ್ರಜ್ಞಾ ನದ ಪ್ರಭಾವದಿಂದ ಶಾಖೆ ರಹಿತ ಬ್ಯಾಂಕ್ ಪ್ರಚಲಿತದಲ್ಲಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ಮಾತನಾಡಿ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದಿಂದ ಎಲ್ಲ ಚಟುವಟಿಕೆಗಳೂ ವೇಗ ಪಡೆದುಕೊಂಡಿವೆ. ಈ ನಿಟ್ಟಿನಲ್ಲಿ ಅದರ ಉಪಯೋಗದ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ವಿ.ವಿ.ಕಾಲೇಜು ಪ್ರಾಚಾರ್ಯ ಡಾ.ಲಕ್ಷ್ಮೀನಾರಾಯಣ ಭಟ್ಟ ಎಚ್.ಆರ್., ವಿಚಾರಸಂಕಿರಣ ಸಂಯೋಜಕ ಡಾ.ಎ.ರಘುರಾಮ, ಸಂಘಟನಾ ಕಾರ್ಯದರ್ಶಿ ಡಾ.ಸಿ.ಕೆ.ಹೆಬ್ಬಾರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.