ADVERTISEMENT

ಕಟ್ಟಡ ನಿರ್ಮಾಣ: ಕಟ್ಟುನಿಟ್ಟಿನ ಕಾನೂನು ಜಾರಿ

ಪ್ರಾಧಿಕಾರದ ನೂತನ ಕಟ್ಟಡ ಉದ್ಘಾಟನೆ: ಪ್ರಮೋದ್ ಮಧ್ವರಾಜ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 12:22 IST
Last Updated 22 ಮಾರ್ಚ್ 2018, 12:22 IST

ಉಡುಪಿ: ಭವಿಷ್ಯತ್ತಿನ ದೃಷ್ಟಿಯಿಂದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿ ಗೊಳಿಸುವ ಅಗತ್ಯವಿದೆ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಆದಿ ಉಡುಪಿಯಲ್ಲಿ ನಿರ್ಮಾಣ ಮಾಡಿರುವ ನೂತನ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ರಸ್ತೆ ನಿರ್ಮಾಣಕ್ಕೆ– ಗಾಳಿ ಬೆಳಕಿಗಾಗಿ ಜಾಗ ಬಿಟ್ಟು ಕಟ್ಟಡವನ್ನು ನಿರ್ಮಾಣ ಮಾಡಬೇಕಾಗುತ್ತದೆ. ಆದರೆ ಅದನ್ನೇ ಜನರು ಹೊರೆ ಎಂದು ಭಾವಿಸುತ್ತಾರೆ. ತಮಗಿಷ್ಟ ಬಂದ ಜಾಗೆ ಕಟ್ಟಡ ನಿರ್ಮಾಣ ಮಾಡಲು ಅವಕಾಶ ನೀಡಬೇಕು ಎಂದು ಬಯಸುತ್ತಾರೆ. ಈಗ ಆ ರೀತಿ ಅವಕಾಶ ನೀಡಿದರೆ ಭವಿಷ್ಯದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಆಗ ಜನರು ಸರ್ಕಾರ ಹಾಗೂ ಸಂಬಂಧಿಸಿದ ಪ್ರಾಧಿಕಾರವನ್ನು ಶಪಿಸುತ್ತಾರೆ ಎಂದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ರಾಜ್ಯದಲ್ಲಿಯೇ ಮಾದರಿ ಕೆಲಸ ಮಾಡಿದೆ. ಸುಮಾರು ₹6 ಕೋಟಿ ವೆಚ್ಚದಲ್ಲಿ 22 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ₹50 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಹಲವಾರು ಉದ್ಯಾನಗಳನ್ನು ಸಹ ನಿರ್ಮಾಣ ಮಾಡಲಾಗಿದೆ. ಪ್ರಾಧಿಕಾರ ಕೆರೆ ಅಭಿವೃದ್ಧಿಗೆ ವಿಧಿಸುವ ಶುಲ್ಕವನ್ನು ನೀಡಲು ಸಹ ಜನರು ಆಕ್ಷೇಪ ವ್ಯಕ್ತಪಡಿಸುವುದನ್ನು ನೋಡಬಹುದು. ಲಕ್ಷಾಂತರ ಮೌಲ್ಯದ ನಿವೇಶನಕ್ಕೆ ₹607 ನೀಡಲು ಹಿಂಜರಿಯುತ್ತಾರೆ. ಆದರೆ ಆ ಹಣವನ್ನು ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿಯೇ ಬಳಸಲಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ADVERTISEMENT

ನಿಯಮ ಬಾಹಿರವಾಗಿ ಹಾಗೂ ಕೆಲವೊಂದು ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ಸಕ್ರಮ ಮಾಡಲು 2013ರಲ್ಲಿ ಆಗ ಸಚಿವರಾಗಿದ್ದ ವಿನಯ ಕುಮಾರ್ ಕಾನೂನು ಮಾಡಿದರು. ಶುಲ್ಕ ಕಟ್ಟಿ ಸಕ್ರಮ ಮಾಡಿಕೊಳ್ಳಲು ಅದರಲ್ಲಿ ಅವಕಾಶ ಇತ್ತು. ಆದರೆ ಅದನ್ನು ಪ್ರಶ್ನಿಸಿ ಸಾರ್ವಜನಿಕರೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿದರು.

ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರದ ಪರವಾಗಿ ಆದೇಶ ನೀಡಿತು. ಅಕ್ರಮ ಸಕ್ರಮ ಮಾಡಬಹುದು ಎಂದು ಹೇಳಿತು. ಆದರೆ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಕಾರಣ ತಡೆಯಾಜ್ಞೆ ಇದೆ. ಆದ್ದರಿಂದ ಕಡತ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಉಡುಪಿ ಪ್ರಾಧಿಕಾರದಲ್ಲಿಯೇ ಸುಮರು ಒಂದು ಸಾವಿರ ಕಡತಗಳು ಬಾಕಿ ಇವೆ. ಆದರೆ ಈ ವಿಷಯಗಳು ಜನರಿಗೆ ಅರ್ಥವಾಗುವುದಿಲ್ಲ. ಸರ್ಕಾರ ಸಕ್ರಮ ಮಾಡಿಲ್ಲ ಎಂಬ ಭಾವನೆಯಲ್ಲಿಯೇ ಇರುತ್ತಾರೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಕೆ.ಟಿ. ಪೂಜಾರಿ, ಜನಾರ್ದನ ತೋನ್ಸೆ, ಸದಸ್ಯರಾದ ರಮೇಶ್ ಕಾಂಚನ್, ವಯಲೆಟ್, ಪ್ರವೀಣ್ ಶೆಟ್ಟಿ, ಗಿರೀಶ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್ ಇದ್ದರು. ಭಾಸ್ಕರ್ ರಾವ್ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.
**
ಜನರು ನಗುತ್ತಾ ಹೋಗಬೇಕು
ಸರ್ಕಾರಿ ಕಚೇರಿಗಳು ಇರುವುದು ಜನರಿಗೆ ಉತ್ತಮ ಸೇವೆ ನೀಡಲು ಎಂಬುದನ್ನು ಅಧಿಕಾರಿಗಳು ತಿಳಿದುಕೊಳ್ಳಬೇಕು. ಕೆಲಸಕ್ಕಾಗಿ ಕಚೇರಿಗೆ ಬರುವ ಯಾವುದೇ ವ್ಯಕ್ತಿ ಸಂತೋಷದಿಂದಲೇ ಮರಳಬೇಕು. ಆ ರೀತಿಯ ಸೇವೆಯನ್ನು ನೀಡಲು ಪ್ರಯತ್ನಿಸಿ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

ಕಚೇರಿ ಉತ್ತಮ ರೀತಿಯಲ್ಲಿ ಇದ್ದಾಗ ಮಾತ್ರ ಕೆಲಸ ಮಾಡಲು ಪೂರಕವಾಗುತ್ತದೆ. ಹೊಸ ಕಚೇರಿಗೆ ಹಳೆಯ ಪೀಠೋಪಕರಣ ತಂದಿಡದೆ ಹೊಸದನ್ನು ಅಳವಡಿಸಿ. ₹10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗುತ್ತಿದ್ದು ಈಗಾಗಲೇ ಶೇ70ರಷ್ಟು ಕಾಮಗಾರಿ ಮುಗಿದಿದೆ. ಅದು ಉದ್ಘಾಟನೆಯಾದ ನಂತರ ಉಪ ನೋಂದಣಾಧಿಕಾರಿ ಕಚೇರಿಯನ್ನು ಅಲ್ಲಿಗೆ ವರ್ಗಾಯಿಸುವ ಯೋಚನೆ ಇದೆ ಎಂದರು.
**
ಜನರು ನಗುತ್ತಾ ಹೋಗಬೇಕು

ಸರ್ಕಾರಿ ಕಚೇರಿಗಳು ಇರುವುದು ಜನರಿಗೆ ಉತ್ತಮ ಸೇವೆ ನೀಡಲು ಎಂಬುದನ್ನು ಅಧಿಕಾರಿಗಳು ತಿಳಿದುಕೊಳ್ಳಬೇಕು. ಕೆಲಸಕ್ಕಾಗಿ ಕಚೇರಿಗೆ ಬರುವ ಯಾವುದೇ ವ್ಯಕ್ತಿ ಸಂತೋಷದಿಂದಲೇ ಮರಳಬೇಕು. ಆ ರೀತಿಯ ಸೇವೆಯನ್ನು ನೀಡಲು ಪ್ರಯತ್ನಿಸಿ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

ಕಚೇರಿ ಉತ್ತಮ ರೀತಿಯಲ್ಲಿ ಇದ್ದಾಗ ಮಾತ್ರ ಕೆಲಸ ಮಾಡಲು ಪೂರಕವಾಗುತ್ತದೆ. ಹೊಸ ಕಚೇರಿಗೆ ಹಳೆಯ ಪೀಠೋಪಕರಣ ತಂದಿಡದೆ ಹೊಸದನ್ನು ಅಳವಡಿಸಿ. ₹10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗುತ್ತಿದ್ದು ಈಗಾಗಲೇ ಶೇ70ರಷ್ಟು ಕಾಮಗಾರಿ ಮುಗಿದಿದೆ. ಅದು ಉದ್ಘಾಟನೆಯಾದ ನಂತರ ಉಪ ನೋಂದಣಾಧಿಕಾರಿ ಕಚೇರಿಯನ್ನು ಅಲ್ಲಿಗೆ ವರ್ಗಾಯಿಸುವ ಯೋಚನೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.