ADVERTISEMENT

ಕನ್ನಡ ಶಾಲೆಗೆ ಶೌಚಾಲಯ ಕೊಡುಗೆ

ಬೆಂಗಳೂರು ಸೂಪರ್ ರಾಯಲ್ ಹಾಲಿಡೇಸ್ ಇಂಡಿಯಾ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 9:11 IST
Last Updated 29 ಮೇ 2018, 9:11 IST

ವಿಟ್ಲ: ‘ಶಿಕ್ಷಣದ ವ್ಯಾಪರೀಕರಣದಿಂದ ಇಂದು ಕನ್ನಡ ಶಾಲೆಗಳು ಮುಚ್ಚಲು ಮುಖ್ಯ ಕಾರಣವಾಗಿದೆ. ಊರಿನ ಜನರ ಹಾಗೂ ಖಾಸಗಿ ಕಂಪೆನಿಗಳ ಸಹಕಾರದಿಂದ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಶಾಲೆಗಳನ್ನು ಉಳಿಸಲು ಸಾಧ್ಯವಿದೆ. ’ ಎಂದು ಪೆರುವಾಯಿ ಫಾತಿಮಾ ಮಾತೆ ಚರ್ಚ್‌ನ  ಧರ್ಮಗುರು ವಿಶಾಲ್ ಮೋನಿಸ್ ಹೇಳಿದರು.

ಸೋಮವಾರ ಮಾಣಿಲ ಗ್ರಾಮದ ಪಕಳಕುಂಜ ವೇಣುಗೋಪಾಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರು ಸೂಪರ್ ರಾಯಲ್ ಹಾಲಿಡೇಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ವತಿಯಿಂದ ನಿರ್ಮಿಸಲಾದ ನೂತನ ಶೌಚಾಲಯ ಕಟ್ಟಡದ ಉದ್ಘಾಟನೆ ಹಾಗೂ ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೂಪರ್ ರಾಯಲ್  ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಮಧುಕರ ಮಾತನಾಡಿ, ‘ನಮ್ಮಲ್ಲಿರುವ ಮನಸ್ಥಿತಿ ಹಾಳಾಗಿದ್ದರಿಂದ ಬೇರೆ ಬೇರೆ ಚಿಂತನೆಗಳು ಬಂದಿದ್ದರಿಂದ ಸ್ವಾರ್ಥದ ಜೀವನ ಬಂದಿದೆ. ನಾವೆಲ್ಲರೂ ಒಂದೇ ಎಂಬ ಭಾವನೆ ಬಂದಾಗ ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಅರ್ಪಣೆ ಮಾಡಿದಾಗ ಜೀವನವು ಋಣಮುಕ್ತವಾಗುತ್ತದೆ’ ಎಂದು ಹೇಳಿದರು.

ADVERTISEMENT

ಪುತ್ತೂರು ಶಾಸಕ ಸಂಜೀವ ಮಠಂದೂರು  ನೂತನ ಶೌಚಾಲಯ ಕಟ್ಟಡವನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಉದ್ಘಾಟಿಸಿದರು. ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಬಾಳೆಕಲ್ಲು ಅಧ್ಯಕ್ಷತೆ ವಹಿಸಿದ್ದರು. ಶೌಚಾಲಯ ನಿರ್ಮಿಸುವ ಬಗ್ಗೆ ಪತ್ರ ಬರೆದ ಬಾಲಕ ಅಜೇರಾಮ್ ಅವರನ್ನು  ಸನ್ಮಾನಿಸಲಾಯಿತು.

ವೇಣುಗೋಪಾಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಗೋಪಾಲಕೃಷ್ಣ ಭಟ್, ಶಾಲಾ ಮುಖ್ಯ ಶಿಕ್ಷಕ ಮದನ್ ಮೋಹನ್ ಶೆಟ್ಟಿ, ಮಹಮ್ಮದ್ ಹಾಜಿ ನಾಯರ್ಮೂಲೆ, ಸಂಸ್ಥೆಯ ಪ್ರಮುಖರಾದ ರಾಜೇಶ್ ಕಾಮತ್, ನಿಸಾರ್ ಏರ್ಮಳ್, ರಾಕೇಶ್ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.