ADVERTISEMENT

ಕಾಣದ ಬಸ್‌ಬೇ, ಕಂಡಲ್ಲಿ ನಿಲ್ಲುವ ಬಸ್‌

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 9:16 IST
Last Updated 28 ಅಕ್ಟೋಬರ್ 2017, 9:16 IST
ಬಲ್ಮಠ ಕಾಲೇಜು ಎದುರು ಕಿತ್ತು ಹೋಗಿರುವ ಟ್ರಾಫಿಕ್‌ ಕೋನ್‌ಗಳು
ಬಲ್ಮಠ ಕಾಲೇಜು ಎದುರು ಕಿತ್ತು ಹೋಗಿರುವ ಟ್ರಾಫಿಕ್‌ ಕೋನ್‌ಗಳು   

ಮಂಗಳೂರು: ಮಂಗಳೂರು ಮಹಾ ನಗರದಲ್ಲಿ ಬಸ್‌ಗಳ ಯರ್ರಾಬಿರ್ರಿ ಸಂಚಾರ ನಿಲ್ಲಿಸಲು ಬಸ್‌ ಬೇಗಳನ್ನು ನಿರ್ಮಿಸುವುದು ಅಗತ್ಯ ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ನಿರ್ಣಯಿಸಿದರೂ, ಅತ್ತ ಶಾಶ್ವತ ಬಸ್‌ ಬೇಗಳೂ ನಿರ್ಮಾಣ ಆಗಿಲ್ಲ. ಇತ್ತ ತಾತ್ಕಾಲಿಕವಾಗಿ ಅಳವಡಿಸಿದ ಕೋನ್‌ಗಳನ್ನೂ ಕ್ಯಾರೇ ಅನ್ನದೇ ಬಸ್‌ಗಳು ಚಲಿಸುತ್ತಿವೆ.

ಜ್ಯೋತಿ ಬಲ್ಮಠ ಕಾಲೇಜಿನ ಮುಂಭಾ ಗದಲ್ಲಿ, ನಂತೂರು ಬಸ್‌ ನಿಲ್ದಾಣದ ಬಳಿ, ಲಾಲ್‌ಬಾಗ್‌, ಕಂಕನಾಡಿ ಪ್ರದೇಶಗಳಲ್ಲಿ ಈಗಾಗಲೇ ಬಸ್‌ ಬೇಗಳಿವೆ. ಕೆಲವಡೆ ಪ್ರತ್ಯೇಕವಾಗಿ ರಸ್ತೆ ವಿಸ್ತರಿಸಿ ಬಸ್‌ಬೇ ಮಾಡುವುದು ಸಾಧ್ಯವಾಗದೇ ಇದ್ದರೂ, ರಸ್ತೆಯಂಚಿನಲ್ಲಿ ಇರುವ ಜಾಗವನ್ನು ಬಳಸಿಕೊಂಡು ಟ್ರಾಫಿಕ್‌ ಕೋನ್‌ಗಳನ್ನು ಅಳವಡಿಸಿ ಬಸ್‌ ಬೇ ನಿರ್ಮಿಸಲಾಗಿದೆ. ಆದರೆ ಈಗ ಎಲ್ಲ ಬಸ್‌ ಬೇಗಳ ಟ್ರಾಫಿಕ್‌ ಕೋನ್‌ಗಳು ಕಿತ್ತು ಹೋಗಿವೆ. ‘ಟ್ರಾಫಿಕ್‌ ಕೋನ್‌ಗಳನ್ನು ಹಾದುಕೊಂಡು ಹೋಗುವ ಸಂಚಾರ ಶಿಸ್ತು ಬಸ್‌ ಚಾಲಕರಿಗೆ ಇಲ್ಲದೇ ಇರುವುದರಿಂದ ಕೋನ್‌ಗಳೆಲ್ಲ ಕಿತ್ತು ಹೋಗಿವೆ’ ಎನ್ನುತ್ತಾರೆ ಕಂಕನಾಡಿಯ ಶಿವಾನಂದ ಪೂಜಾರಿ.

ಸಂಚಾರ ದಟ್ಟಣೆ ಸುಧಾರಿಸುವ ನಿಟ್ಟಿನಲ್ಲಿ ನಗರದ ಕೆಲವು ಪ್ರಮುಖ ಪ್ರದೇಶಗಳಲ್ಲಿ ಬಸ್ ಬೇಗಳನ್ನು ನಿರ್ಮಿಸಿ ಅಲ್ಲೇ ಸುಸಜ್ಜಿತ ಬಸ್ ತಂಗುದಾಣವನ್ನು ನಿರ್ಮಿಸಿ ಪ್ರಯಾಣಿಕರಿಗೆ ಬಸ್ ಹತ್ತಲು, ಇಳಿಯಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕೆಂಬ ಬೇಡಿಕೆಯನ್ನು ರಸ್ತೆ ಸುರಕ್ಷತಾ ಸಭೆ ಹಲವು ಬಾರಿ ಮಹಾನಗರ ಪಾಲಿಕೆಯ ಮುಂದೆ ಮಂಡಿಸಿತ್ತು. ಅಷ್ಟೇ ಅಲ್ಲ, ಬಸ್ ಬೇಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯಗಳನ್ನೂ ನಿರ್ಮಿಸುವ ಪ್ರಸ್ತಾಪ ಇತ್ತು. ಆದರೆ ಯಾವ ಪ್ರಸ್ತಾಪಗಳು ಕಾರ್ಯರೂಪಕ್ಕೆ ಬಂದಿಲ್ಲ.

ADVERTISEMENT

40 ಬಸ್ ಬೇ ನಿರ್ಮಾಣ ಬೇಡಿಕೆ: ಮಂಗಳೂರು ನಗರದಲ್ಲಿ ಸುಮಾರು 40 ಪ್ರದೇಶಗಳನ್ನು ಗುರುತಿಸಿ ಬಸ್ ಬೇಗಳನ್ನು ನಿರ್ಮಿಸುವ ಪ್ರಸ್ತಾವನೆ ಇದೆ. ಇವುಗಳಿಗೆ ಸೂಕ್ತ ಜಾಗವನ್ನು ಕೂಡಾ ಸಂಚಾರಿ ಪೊಲೀಸರು, ಸಾರಿಗೆ ಅಧಿಕಾರಿಗಳು ಗೊತ್ತುಪಡಿಸಿದ್ದರು. ಆದರೆ ಇದನ್ನು ಅಭಿವೃದ್ಧಿಪಡಿಸುವ ಕೆಲಸ ಮಾತ್ರ ಪಾಲಿಕೆ ವತಿಯಿಂದ ಆಗಬೇಕಾಗಿದೆ.

ಅಪಘಾತಗಳು ಕಡಿಮೆ ಆಗಬೇಕಾದರೆ ಸಂಚಾರ ವ್ಯವಸ್ಥೆಯಲ್ಲಿ ಬಸ್‌ಬೇಗಳು ಅಗತ್ಯ. ಈ ಬಗ್ಗೆ ರಸ್ತೆ ಸುರಕ್ಷತಾ ಸಮಿತಿ ಮೂಲಕ ಮಹಾನಗರ ಪಾಲಿಕೆ ಮತ್ತು ಸಂಚಾರಿ ಪೊಲೀಸ್‌ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಆದರೆ ವೃತ್ತಗಳು, ಸಿಗ್ನಲ್‌ಗಳ ಬಳಿಯೇ ಬಸ್‌ ಬೇಗಳನ್ನು ನಿರ್ಮಿಸುವುದು ಸರಿಯಲ್ಲ. ಇದರಿಂದ ರಸ್ತೆ ಸಂಚಾರ ಮತ್ತಷ್ಟು ಹದಗೆಡುತ್ತದೆ ಎಂದು ಹೇಳುತ್ತಾರೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸದಸ್ಯ ಕಾರ್ಯದರ್ಶಿ ಎಸ್.ಜಿ. ಹೆಗ್ಡೆ.

ಇರುವ ಬಸ್‌ ಬೇಗಳ ಒಳಗೆ ಬಸ್‌ಗಳು ಸಂಚರಿಸುವುದು ಕಡ್ಡಾಯ. ಈ ಕುರಿತು ಬಸ್‌ ಮಾಲೀಕರ ಸಂಘಕ್ಕೂ ಕಟ್ಟು ನಿಟ್ಟಿನ ಸೂಚನೆ ಕೊಡಲಾಗಿದೆ. ಅಲ್ಲದೆ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಕೊಡುವ ಸೂಚನೆ ನಿರ್ದೇಶನಗಳು ಇಡೀ ನಗರದ ಒಳಿತಿಗೆ ಎಂಬುದನ್ನು ಜನರೂ ಅರ್ಥ ಮಾಡಿಕೊಳ್ಳಬೇಕು. ಜನರೂ ಬಸ್‌ ಬೇಯಲ್ಲಿಯೇ ಬಸ್‌ಗಾಗಿ ಕಾಯಬೇಕು ಎಂಬುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.