ADVERTISEMENT

ಕುಮಾರಧಾರ ಸೇತುವೆ ಮೇಲೆ ನೀರು

ಸುಳ್ಯ ತಾಲ್ಲೂಕಿನಲ್ಲಿ ಭಾರಿ ಮಳೆ- ಶಾಲೆಗಳಿಗೆ ನಾಳೆ ರಜೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 10:52 IST
Last Updated 4 ಜುಲೈ 2013, 10:52 IST

ಸುಬ್ರಹ್ಮಣ್ಯ: ಕರಾವಳಿಯಲ್ಲಿ ಮತ್ತೆ ಮುಂಗಾರು ತೀವ್ರಗೊಂಡಿದೆ. ಬುಧವಾರ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಅಸುಪಾಸಿನಲ್ಲಿ  ಭಾರಿ ಮಳೆಯಾಗಿದೆ.

ಬೆಳಗ್ಗಿನಿಂದ ಧಾರಾಕಾರವಾಗಿ ಮಳೆ ಸುರಿದಿದ್ದು ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ನದಿಯ ನೀರು ರಾತ್ರಿ ಸೇತುವೆ ಮೇಲೆ ಹರಿಯಿತು. ಇದರಿಂದ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ಶಾಲೆಗಳಿಗೆ ರಜೆ : 4 ದಿನಗಳಿಂದ ಸುಳ್ಯ ತಾಲ್ಲೂಕಿನಾದ್ಯಂತ ನಿರಂತರ ಮಳೆ ಸುರಿಯುತ್ತಿದ್ದು ಕುಮಾರಧಾರ, ಪಯಸ್ವಿನಿ ನದಿ ಹಾಗೂ ಇನ್ನಿತರ ಸಣ್ಣಪುಟ್ಟ ನದಿಗಳು ತುಂಬಿ ಹರಿಯುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಸುಳ್ಯ ತಾಲ್ಲೂಕಿ ನಾದ್ಯಂತ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಗುರುವಾರ ರಜೆ ಸಾರಲಾಗಿದೆ ಎಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ರಾತ್ರಿಯಿಂದ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿದಿದೆ. ಬುಧವಾರ ಬೆಳಗ್ಗಿನಿಂದ ಒಂದೇ ಸಮನೆ ದಿನಪೂರ್ತಿ ಮಳೆ ಸುರಿದಿದ್ದು ಕ್ಷೇತ್ರಕ್ಕೆ ಆಗಮಿಸಿದ ಯಾತ್ರಾರ್ಥಿಗಳ ಜನಸಾಮಾನ್ಯರ ಜನ ಜೀವನ ಅಸ್ತವ್ಯಸ್ತವಾಗಿತ್ತು. ಬುಧವಾರ ಏಕಾದಶಿ ಇದ್ದುದರಿಂದ ಹಾಗೂ ಸುರಿದ ವಿಪರೀತ ಮಳೆಯಿಂದಾಗಿ ಯಾತ್ರಿಕರ ಸಂಖ್ಯೆ ವಿರಳವಾಗಿತ್ತು.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಪರಿಸರದ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲಲ್ಲಿ ರಸ್ತೆಗಳ ಅವ್ಯವ್ಯವಸ್ಥೆಯಿಂದಾಗಿ ರಸ್ತೆಯುದ್ದಕ್ಕೂ ಕೆಸರು ತುಂಬಿದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕುಮಾರಧಾರೆಯಿಂದ ಕಾಶಿಕಟ್ಟೆಯವರೆಗಿನ ರಸ್ತೆಗೆ ಚರಂಡಿ ವ್ಯವಸ್ಥೆಯಿಲ್ಲದೆ ಕೆಸರು ತುಂಬಿ ಪಾದಾಚಾರಿಗಳು, ಶಾಲಾ ಮಕ್ಕಳು,  ದ್ವಿಚಕ್ರ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಸುಳ್ಯ: ಜನಜೀವನ ತತ್ತರ (ಸುಳ್ಯ ವರದಿ):ಮಂಗಳವಾರ ಮಧ್ಯಾಹ್ನದಿಂದ ಸುಳ್ಯ ಹಾಗೂ ಆಸುಪಾಸಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಗೆ ತಾಲ್ಲೂಕು ತತ್ತರಿಸಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಕೃಷಿ ತೋಟಗಳು ಮುಳುಗಡೆಯಾಗಿದೆ. ಸುಳ್ಯ ನಗರದಾದ್ಯಂತ ನೀರು ನಿಂತು ಸಂಚಾರ ಕಷ್ಟ ಸಾಧ್ಯವಾಗಿದೆ.

ಸುಳ್ಯದ ಶ್ರಿರಾಂ ಪೇಟೆಯಲ್ಲಿ ಮರದ ಗೆಲ್ಲು ರಿಕ್ಷಾ ಸ್ಟಾಂಡ್ ಮೇಲೆ ಬಿದ್ದು ಹಾನಿ ಸಂಭವಿಸಿದೆ. ತಾಲ್ಲೂಕು ಕಚೇರಿಯ ಪಡಸಾಲೆಗೆ ಮರದ ಗೆಲ್ಲು ಬಿದ್ದು ಹಾನಿಯಾಗಿದೆ.

ಬೆಳ್ತಂಗಡಿ  ತಾಲ್ಲೂಕಿನಾದ್ಯಂತ ಜಡಿ ಮಳೆ (ಬೆಳ್ತಂಗಡಿ ವರದಿ): ತಾಲ್ಲೂಕಿನಾದ್ಯಂತ ಬುಧವಾರ  ಜಡಿಮಳೆ ಸುರಿದಿದ್ದು ಶಾಲಾ - ಕಾಲೇಜುಗಳಿಗೆ ರಜೆ ಸಾರಲಾಗಿದೆ. ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಸೇರಿದಂತೆ ತಾಲ್ಲೂಕಿನ ಎಲ್ಲಾ ನದಿ - ತೊರೆಗಳು ತುಂಬಿ ಹರಿಯುತ್ತಿವೆ.

ಉಜಿರೆಯಲ್ಲಿ ನಿಡ್ಗಲ್ ಬಳಿ ನದಿ ನೀರು ಗದ್ದೆಗಳಿಗೂ ನುಗ್ಗಿದೆ. ಕುಪ್ಪೆಟ್ಟಿ ಬಳಿ ಕಿರು ಸೇತುವೆಯೊಂದು ನೆರೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

ಅಳದಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆದ್ದು ಎಂಬಲ್ಲಿ ಒಂದು ಮನೆ ಕುಸಿದು ಬಿದ್ದಿದೆ.

ನೇತ್ರಾವತಿ ನೀರಿನಮಟ್ಟ ಏರಿಕೆ(ಬಂಟ್ವಾಳ ವರದಿ): ಬಂಟ್ವಾಳ ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಿಂದ ಗಾಳಿಮಳೆ ಬೀಳುತ್ತಿರುವ ಪರಿಣಾಮ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಒಟ್ಟು ಆರು ಮನೆಗಳಿಗೆ ಹಾನಿಯಾಗಿದೆ.

ಒಟ್ಟು ಸರಾಸರಿ 91.45 ಮಿ.ಮೀ.ಮಳೆಯಾಗಿದ್ದು, ನೇತ್ರಾವತಿ ನದಿ ನೀರಿನ ಮಟ್ಟ ಬುಧವಾರ ರಾತ್ರಿ ವೇಳೆಗೆ ಏಳು ಮೀಟರ್ ತಲುಪಿದೆ. ಗರಿಷ್ಟ ಒಂಭತ್ತು ಮೀಟರ್ ತಲುಪಿದಾಗ ಇಲ್ಲಿನ ಬಸ್ತಿಪಡ್ಪು, ಆಲಡ್ಕ, ಪಾಣೆಮಂಗಳೂರು, ಗೂಡಿನಬಳಿ, ಕಂಚಿಕಾರ ಪೇಟೆ ಮತ್ತಿತರ ಬಹುತೇಕ ತಗ್ಗುಪ್ರದೇಶಗಳು ಮುಳುಗಡೆಯಾಗುವ ಭೀತಿ ಎದುರಿಸುತ್ತವೆ.

13 ಅಡಿ ಎತ್ತರದ ತುಂಬೆ ಅಣೆಕಟ್ಟೆಯಲ್ಲಿಯೂ 23 ಅಡಿ ಎತ್ತರಕ್ಕೆ ರಭಸವಾಗಿ ನೆರೆನೀರು ಧುಮ್ಮಿಕ್ಕಿ ಹರಿಯತೊಡಗಿದೆ ಎಂದು ಮೂಲಗಳು ತಿಳಿಸಿವೆ.

ಸರಪಾಡಿ- ಶಂಭೂರು ಎಎಂಆರ್ ಅಣೆಕಟ್ಟೆಯಿಂದಲೂ ಬುಧವಾರ ಬೆಳಿಗ್ಗೆ ಸೈರನ್ ಮೊಳಗಿಸಿದ ಬಳಿಕ ಹೆಚ್ಚುವರಿ ನೀರನ್ನು ನದಿಗೆ ಹರಯಲು ಬಿಟ್ಟಿರುವ ಪರಿಣಾಮ ನೀರಿನ ಮಟ್ಟ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ. ತಾಲ್ಲೂಕಿನ ಕೆಲವೆಡೆ ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಕೆಲವೊಂದು ಶಾಲೆಗಳಲ್ಲಿ ಕ್ಷೇತ್ರ ಶಿಕ್ಷಣಧಿಕಾರಿ ಕಚೇರಿಯೊಂದಿಗಿನ ಸಂಪರ್ಕ ಕೊರತೆಯಿಂದಾಗಿ ಶಾಲೆಗೆ ಬಂದು ವಾಪಾಸಾದ ಪ್ರಸಂಗ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಜಕ್ರಿಬೆಟ್ಟು ನಿವಾಸಿ ವಿನೋದ ನಾಯ್ಕ, ಚೇಳೂರು ನಿವಾಸಿ ಗೌರಿ ಬೆಳ್ಚಡ, ಸಜಿಪಪಡು ನಿವಾಸಿಗಳಾದ ಉಷಾ ನಾಯ್ಕ ಮತ್ತು ವಸಂತಿ ನಾಯ್ಕ, ಬಿ.ಮೂಡ ಗ್ರಾಮದ ಕುಪ್ಪಿಲ ನಿವಾಸಿ ಅಮ್ಮು, ಕಳ್ಳಿಗೆ ನಿವಾಸಿ ಜಲಜ, ತುಂಬೆ ಪೆಲಕಬೈಲು ನಿವಾಸಿ ಕಾವೇರಿ , ವಿಟ್ಲ ನಿವಾಸಿ ಈಶ್ವರ ನಾಯ್ಕ ಮತ್ತು ಪಂಜಿಕಲ್ಲು ನಿವಾಸಿ ದೇವಕಿ ಪೂಜಾರಿ ಎಂಬವರ ಮನೆಗೆ ಮಳೆಯಿಂದಾಗಿ ಹಾನಿ ಸಂಭವಿಸಿದ್ದು, ಒಟ್ಟು 1,12,400 ರೂ ನಷ್ಟ ಸಂಭವಿಸಿದೆ. ತಾಲ್ಲೂಕಿನ ತಗ್ಗು ಪ್ರದೇಶಗಳಲ್ಲಿ ಯಾವುದೇ ಹಾನಿ ಸಂಭವಿಸದಂತೆ ತಡೆಯುವಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಗೃಹರಕ್ಷಕ ದಳ ಮತ್ತು ನಾಡದೋಣಿ ಸನ್ನದ್ಧಗೊಳಿಸಲಾಗಿದೆ ಎಂದು ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ತಿಳಿಸಿದ್ದಾರೆ.

ಗುಡ್ಡ ಕುಸಿದು ಮನೆಗೆ ಹಾನಿ
ವಿಟ್ಲ: ವಿಟ್ಲ ಸಮೀಪ ಕುಳ ಗ್ರಾಮದ ಎಳಸ್ತ್ರಮೂಲೆ ಎಂಬಲ್ಲಿ ದೊಡ್ಡದಾದ ಗುಡ್ಡವೊಂದು ಮಂಗಳವಾರ ಮನೆಯೊಂದರ ಹಿಂಬದಿಗೆ ಕುಸಿದು ಬಿದ್ದಿದೆ. ಗಿರಿಯಪ್ಪ ಗೌಡ ಅವರ ನಿರ್ಮಾಣ ಹಂತದ ಮನೆ ಹಿಂಭಾಗದ ಗುಡ್ಡ ಮಂಗಳವಾರ ಕುಸಿದು ಹಾನಿಯುಂಟಾಗಿದೆ. ಮನೆಯೊಳಗೆ ಕಲ್ಲು ಮಣ್ಣು ಪ್ರವೇಶಿಸಿದ್ದು ಗೋಡೆಗೆ ತಾಗಿ ನಿಂತಿದೆ. ಕೆಂಪು ಕಲ್ಲಿನ ಗೋಡೆ ಭದ್ರವಾಗಿರುವುದರಿಂದ ಮತ್ತು ಮನೆಯೊಳಗೆ ಯಾರೂ ಇಲ್ಲದೇ ಇದ್ದುದರಿಂದ ಹೆಚ್ಚಿನ ತೊಂದರೆಯುಂಟಾಗಿಲ್ಲ.

ಠಾಣಾಧಿಕಾರಿಗೆ ಮನೆಗೆ ಹಾನಿ: ಮಂಗಳವಾರ ರಾತ್ರಿ ಸುರಿದ ಬಾರೀ ಮಳೆಗಾಳಿಗೆ ವಿಟ್ಲ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರ ಮನೆಯ ಛಾವಣಿ ಹಾರಿ ಹೋದ ಪರಿಣಾಮ ನಷ್ಟ ಸಂಭವಿಸಿದೆ.

ವಿಟ್ಲದ ಪುರಭವನ ಬಳಿಯಿರುವ ಸರ್ಕಾರಿ ವಸತಿ ನಿಲಯದಲ್ಲಿರುವ ಠಾಣಾಧಿಕಾರಿ ಮಾಧವ ಕೂಡ್ಲು ಅವರ ಮನೆಯ ಹೆಂಚು ಹಾಗೂ ಸಿಮೆಂಟ್ ಸೀಟುಗಳು ಹಾರಿ ಹೋಗಿವೆ. ಮನೆಯ ಹಿಂಬದಿಯಲ್ಲಿರುವ ಸೀಟುಗಳು ಸಂಪೂರ್ಣವಾಗಿ ಹಾರಿ ಹೋದುದರಿಂದ ಅಡುಗೆ ಕೋಣೆಯಲ್ಲಿ ಮಳೆ ನೀರು ತುಂಬಿದೆ.

ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ದುರಸ್ತಿ ಕಾರ್ಯ ಮಾಡಿದ್ದಾರೆ. ಠಾಣಾಧಿಕಾರಿ ಅವರು ವಾಸವಿರುವ ಮನೆ ಹಳೆಯದಾಗಿದ್ದು, ಸಂಪೂರ್ಣವಾಗಿ ಶಿಥಿಲಗೊಂಡಿದೆ. ಕೆಲ ತಿಂಗಳ ಹಿಂದೆ ಸ್ವತಃ ಠಾಣಾಧಿಕಾರಿಯವರೇ ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿ ಕಾರ್ಯ ನಡೆಸಿದ್ದಾಗಿ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.