ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6,420 ಮಂದಿ ಕೃಷಿಕರು ಸಾವಯವ ಕೃಷಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದು, ಮೂರು ವರ್ಷಗಳ ಅವಧಿಯ ತಪಾಸಣೆ ಪ್ರಕ್ರಿಯೆ ಮುಗಿಸಿದ್ದಾರೆ. ಸದ್ಯದಲ್ಲೇ ಅವರಿಗೆ ‘ಸಾವಯವ ಕೃಷಿಕ’ ಎಂಬ ಪ್ರಮಾಣ ಪತ್ರ ದೊರೆಯಲಿದೆ.
ರಾಸಾಯನಿಕ ಗೊಬ್ಬರವನ್ನು ಹಾಕದೇ ಬೆಳೆದ ತರಕಾರಿ, ಆಹಾರ ಪದಾರ್ಥಗಳಿಗೆ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ, ಹೆಚ್ಚಿನ ಮಾರಾಟಗಾರರು ‘ಸಾವಯವ ಉತ್ಪನ್ನ’ ಎಂಬ ಸ್ಟಿಕ್ಕರ್ ಅಂಟಿಸಲು ಉತ್ಸಾಹ ತೋರಿಸುತ್ತಿದ್ದಾರೆ. ಆದರೆ ಆಹಾರ ಉತ್ಪನ್ನಗಳಿಗೆ ನಿಜವಾಗಿಯೂ ರಾಸಾಯನಿಕ ಗೊಬ್ಬರ ಹಾಕಿಲ್ಲವೇ ಎಂಬುದನ್ನು ಪರೀಕ್ಷಿಸಲು ಗ್ರಾಹಕರಿಂದ ಸಾಧ್ಯವಿಲ್ಲ. ಆದರೆ ಸಾವಯವ ಕೃಷಿ ಯನ್ನು ಪ್ರಮಾಣೀಕರಿಸುವ ಪರೀಕ್ಷಾ ಪದ್ಧತಿಯೊಂದನ್ನು ಕೃಷಿ ಇಲಾಖೆ ರೂಪಿಸಿದೆ.
ಈ ಪ್ರಕ್ರಿಯೆಯಲ್ಲಿ ಮೊದಲ ಹಂತ ವಾಗಿ ಕೃಷಿಕರು ಸೆಗಣಿ, ಎರೆಹುಳು ಗೊಬ್ಬರದಂತಹ ಸಾವಯವ ಗೊಬ್ಬರ ವನ್ನೇ ಬಳಸಿ ಮೂರು ವರ್ಷ ಕಾಲ ಕೃಷಿ ನಡೆಸಿದ ದಾಖಲೀಕರಣ ಮಾಡಬೇಕಾ ಗುತ್ತದೆ. ಮೂರನೇ ವರ್ಷದಲ್ಲಿ ಕೃಷಿ ಭೂಮಿಯಲ್ಲಿ ರಾಸಾಯನಿಕ ಅಂಶಗಳು ಕಡಿಮೆಯಾಗಿ, ಮಣ್ಣಿನ ಸ್ವರೂಪ ಸಡಿಲ ವಾಗಿ ಸತ್ವಯುತವಾಗುತ್ತದೆ. ಅಲ್ಲದೆ ಬೆಳೆಯಲ್ಲಿಯೂ ರಾಸಾಯನಿಕ ಅಂಶ ಇರುವುದಿಲ್ಲ. ಕೃಷಿಕ ಗೊಬ್ಬರಕ್ಕಾಗಿ ಅವಲಂಬಿಸಿರುವ ಮೂಲವನ್ನೂ ದಾಖಲಿಸಲಾಗುವುದು. ಈ ಪರೀಕ್ಷಾ ಅವಧಿಯ ಬಳಿಕ ಕರ್ನಾಟಕ ರಾಜ್ಯ ಬೀಜ ಪ್ರಮಾಣ ಏಜೆನ್ಸಿಯಿಂದ ‘ಸಾವ ಯವ ಕೃಷಿಕ’ ಎಂಬ ಶೀರ್ಷಿಕೆ ದೊರೆ ಯಲಿದೆ. ಉತ್ಪನ್ನಗಳ ಮಾರಾಟ ಸಂದ ರ್ಭದಲ್ಲಿ ಈ ಪ್ರಮಾಣ ಪತ್ರ ಪರಿಗಣಿ ಸಲಾಗುತ್ತದೆ. ಪ್ರತಿ ವರ್ಷ ಮಣ್ಣುಪರೀಕ್ಷೆ ನಡೆಸಿ ಈ ಪ್ರಮಾಣ ಪತ್ರ ನವೀಕರಣ ಮಾಡಲಾಗುತ್ತದೆ.
‘ಈ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ 6,420 ಮಂದಿ ರೈತರು ಜಿಲ್ಲೆಯಲ್ಲಿ ದ್ದಾರೆ. ಹೀಗೆ ಪ್ರಮಾಣ ಪತ್ರ ಪಡೆಯು ವುದರಿಂದ ನಕಲಿ ಸಾವಯವ ಕೃಷಿಕರ ಹಾವಳಿ ತಪ್ಪುತ್ತದೆ. ಆದ್ದರಿಂದ ಸಾವ ಯವ ಕೃಷಿ ನಡೆಸುತ್ತಿರುವ ಎಲ್ಲ ರೈತರೂ ಈ ಪ್ರಮಾಣ ಪತ್ರ ಪಡೆಯಲು ಮುಂ ದಾಗಬೇಕು ’ ಎಂದು ಹೇಳುತ್ತಾರೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕೆಂಪೇಗೌಡ.
ಸಾವಯವ ಉತ್ಪನ್ನಗಳ ಮಾರಾಟ ವನ್ನು ಜಿಲ್ಲೆಯ 11 ಗ್ರಾಮಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮಂಗ ಳೂರಿನ ಸುರತ್ಕಲ್, ಬೋಳಿಯಾರು, ಬಂಟ್ವಾಳದ ರಾಯಿ, ವೀರಕಂಭ, ಪುತ್ತೂರಿನ ಉಪ್ಪಿನಂಗಡಿ, ಕಡಬ, ಅಲಂಗಾರು, ಸುಳ್ಯ ತಾಲ್ಲೂಕಿನ ಸುಳ್ಯ ಹಾಗೂ ಪಂಜ, ಬೆಳ್ತಂಗಡಿಯ ನಡ ಮತ್ತು ಕುತ್ಲೂರು ಗ್ರಾಮಗಳಲ್ಲಿ ಸಾವ ಯವ ಉತ್ಪನ್ನಗಳ ಮಳಿಗೆಗಳನ್ನು ತೆರೆ ಯಲು ಸಿದ್ಧತೆಗಳು ನಡೆಯುತ್ತಿವೆ. ಚಿಕ್ಕ ಮಗಳೂರಿನಲ್ಲಿ ಈಗಾಗಲೇ ಸಾವಯವ ಮಳಿಗೆಯೊಂದನ್ನು ತೆರೆಯಲಾಗಿದೆ.
ಹಾಲು ಉತ್ಪಾದಕರ ಮಹಾ ಮಂಡಲದ ಮಾದರಿಯಲ್ಲಿಯೇ ಸಾವ ಯವ ಕೃಷಿಕರ ಮಹಾಮಂಡಲ ರಚಿಸಿ ದ್ದು, ಈ ಮಹಾಮಂಡಲದಡಿ ಒಟ್ಟು 14 ಒಕ್ಕೂಟಗಳನ್ನು ರಚಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗ ಳೂರು ಜಿಲ್ಲೆ ಸೇರಿ ಒಂದು ಒಕ್ಕೂಟ ವಾಗಿದ್ದು, ನಿರ್ದೇಶಕರಾಗಿ ಪ್ರಭಾಕರ ಮಯ್ಯ, ಪ್ರಶಾಂತ್ ಗಟ್ಟಿ, ವಿಕ್ಟರ್ ರೋಡ್ರಿಗಸ್, ದೇವಿದಾಸ್ ರೈ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
**
ವಾಹನಗಳಿಗೆ ಬೇಡಿಕೆ
‘ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಲು ವಾಹನಗಳನ್ನು ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ ಒಕ್ಕೂಟಕ್ಕೆ ಎರಡು ವಾಹನಗಳು ದೊರೆತರೆ, ಸಾವಯವ ಕೃಷಿಕರೇ ತಮ್ಮ ಉತ್ಪನ್ನಗಳನ್ನು ಕೆಲವು ನಿರ್ದಿಷ್ಟ ಜಾಗದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಬಹುದು. ಸರ್ಕಾರದ ಅನುಮೋದನೆಯಷ್ಟೇ ಬಾಕಿ ಇದೆ’ ಎನ್ನುತ್ತಾರೆ ರಾಜ್ಯ ಸಾವಯವ ಕೃಷಿ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ ಸೋಮಶೇಖರ್.
**
ಜಿಲ್ಲೆಯ ಮೊದಲ ಸಾವಯವ ಮಳಿಗೆ ಸುರತ್ಕಲ್‌ನಲ್ಲಿ ಆರಂಭವಾಗಲಿದೆ. ಸುಭಿಕ್ಷಾ ಸಾವಯವ ಕೃಷಿಕರ ಸಂಘದ ಸದಸ್ಯರು ಬೆಳೆದ ಉತ್ಪನ್ನಗಳ ಮಾರಾಟಕ್ಕೆ ಸುರತ್ಕಲ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು.
-ಡಾ. ಕೆಂಪೇಗೌಡ, ಜಿಲ್ಲಾ ಕೃಷಿಕ ಇಲಾಖೆ ಜಂಟಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.