ಮಂಗಳೂರು: ರಾಜ್ಯ ಸರ್ಕಾರ ಗುಟ್ಕಾವನ್ನು ನಿಷೇಧಿಸಿ ಆದೇಶ ಹೊರಡಿಸಿರುವಂತೆಯೇ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಆತಂಕದ ಕಾರ್ಮೋಡವೂ ಕವಿದಿದೆ. ನಿಷೇಧದಿಂದಾಗಿ ದೀರ್ಘಾವಧಿಯಲ್ಲಿ ಅಡಿಕೆ ದರದಲ್ಲಿ ಸ್ವಲ್ಪ ಕಡಿಮೆ ಆದೀತೇ ಹೊರತು ತಕ್ಷಣಕ್ಕೆ ಯಾವ ದುಷ್ಪರಿಣಾಮವೂ ಉಂಟಾಗದು, ಬೆಳೆಗಾರರು ಭಯಪಡುವ ಅಗತ್ಯ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ನಿಷೇಧದ ಲಾಭವನ್ನು ಪಡೆದುಕೊಳ್ಳಲು ಕೆಲವೊಂದು ವ್ಯಾಪಾರಿಗಳು, ಮಧ್ಯವರ್ತಿಗಳು ಸಜ್ಜಾಗುವ ಅಪಾಯ ಇದ್ದು, ಇದರ ಬಗ್ಗೆ ಬೆಳೆಗಾರರು ಎಚ್ಚರಿಕೆ ವಹಿಸಬೇಕು, ಗುಟ್ಕಾದ ಹೆಸರು ಹೇಳಿ ತಕ್ಷಣ ದರ ಕಡಿಮೆ ಮಾಡಲು ವ್ಯಾಪಾರಿಗಳು ಹೊರಟರೆ ಬೆಳೆಗಾರರು ಅದಕ್ಕೆ ಬಲಿ ಬೀಳದೆ ಪರೋಕ್ಷವಾಗಿ ಮಾಹಿತಿ ತಿಳಿದುಕೊಳ್ಳುವುದಕ್ಕೆ ಮುಂದಾಗಬೇಕು ಎಂಬ ಸಲಹೆ ಕೇಳಿಬಂದಿದೆ.
ಸರ್ಕಾರ ಗುಟ್ಕಾ ನಿಷೇಧಿಸಿದ್ದರ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಯ ಹಿರಿಯ ಆರ್ಥಿಕ ಚಿಂತಕ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಪ್ರೊ.ವಿಘ್ನೇಶ್ವರ ವರ್ಮುಡಿ ಅವರನ್ನು `ಪ್ರಜಾವಾಣಿ' ಸಂಪರ್ಕಿಸಿದಾಗ, ಗುಟ್ಕಾ ನಿಷೇಧದಿಂದಾಗಿ ಶಿವಮೊಗ್ಗ, ಉತ್ತರ ಕನ್ನಡ ಭಾಗಗಳಲ್ಲಿ ಬೆಳೆಗಾರರು ಹಸಿ ಅಡಿಕೆಯಿಂದ ತಯಾರಿಸುವ ಕೆಂಪು ಅಡಿಕೆಯ ಪ್ರಮಾಣ ಕಡಿಮೆಯಾಗಿ ಅವರು ಸಹ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯಲ್ಲಿ ಮಾಡುವಂತೆ ಬಿಳಿಗೋಟು (ಚಾಲಿ) ಅಡಿಕೆ ಸಿದ್ಧ ಪಡಿಸಬಹುದು. ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಯ ಪ್ರಮಾಣ ಹೆಚ್ಚಾದಾಗ ಅದರ ಬೆಲೆ ಕಡಿಮೆಯಾಗಬಹುದು ಎಂದರು.
`ಇದೆಲ್ಲ ತಕ್ಷಣಕ್ಕೆ ಆಗುವ ಬೆಳವಣಿಗೆಯಲ್ಲ. ಬೆಟ್ಟೆ ಅಡಿಕೆಯ ಬದಲಿಗೆ ಚಾಲಿ ಅಡಿಕೆಗೆ ಪರಿವರ್ತನೆಯಾಗಲು ಏನಿಲ್ಲವೆಂದರೂ ಒಂದು, ಒಂದೂವರೆ ವರ್ಷ ಬೇಕೇ ಬೇಕು. ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಚಾಲಿ ಅಡಿಕೆ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಬಹುದು. ಆಗ ಅಡಿಕೆಯ ದರದಲ್ಲಿ ಸ್ವಲ್ಪ ಏರುಪೇರಾಗಬಹುದೇ ಹೊರತು ಗುಟ್ಕಾ ನಿಷೇಧದಿಂದ ಸದ್ಯ ಅಂತಹ ಯಾವ ಪರಿಣಾಮವೂ ಎದುರಾಗದು' ಎಂದು ವರ್ಮುಡಿ ಸ್ಪಷ್ಟಪಡಿಸಿದರು.
`ಕೇರಳ ಸಹಿತ ದೇಶದ 20 ರಾಜ್ಯಗಳಲ್ಲಿ ಇಂದು ಗುಟ್ಕಾ ನಿಷೇಧ ಇದೆ. ಆದರೆ ಅಡಿಕೆಯ ಧಾರಣೆ ಕುಸಿದಿಲ್ಲ. ಹೀಗಾಗಿ ಗುಟ್ಕಾ ನಿಷೇಧಿಸಿದರೆ ಸಹ ಧಾರಣೆ ಕುಸಿಯುವುದಿಲ್ಲ ಎಂಬುದು ನಿಶ್ಚಿತ. ಗುಟ್ಕಾ ನಿಷೇಧ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತದೆ ಎಂಬುದೂ ಮುಖ್ಯವಾಗುತ್ತದೆ. ಗುಟ್ಕಾ ಬೇರೊಂದು ರೂಪ ಹೊತ್ತು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಹೀಗಾಗಿ ಗುಟ್ಕಾ ನಿಷೇಧಿಸಿದರೂ ಅದರ ಉತ್ಪಾದನೆ ಶೇ 100ರಷ್ಟು ಸ್ಥಗಿತಗೊಳ್ಳುವ ಸಾಧ್ಯತೆಯಂತೂ ಇಲ್ಲ' ಎಂದು ಹೇಳಲು ಅವರು ಮರೆಯಲಿಲ್ಲ.
ಗುಟ್ಕಾವನ್ನು ಮಟ್ಟಹಾಕುವ ಸರ್ಕಾರ, ಸಿಗರೇಟ್ ಕಂಪೆನಿಗಳನ್ನು ಏಕೆ ಹಾಗೆಯೇ ಬಿಟ್ಟಿದೆ ಎಂದು ಕೇಳಿದಾಗ, ಅವುಗಳೆಲ್ಲ ಬಹುರಾಷ್ಟ್ರೀಯ ಕಂಪೆನಿಗಳು, ಸರ್ಕಾರವನ್ನೇ ಕೊಂಡುಕೊಳ್ಳುವ ಶಕ್ತಿ ಅವುಗಳಿಗೆ ಇವೆ. ಹೀಗಾಗಿ ಅಂತಹ ಕ್ರಮಗಳಿಗೆ ಸರ್ಕಾರಗಳು ಮುಂದಾಗುವುದಿಲ್ಲ ಎಂದರು.
ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಕಂಗಾಲಾಗುವ ಅಗತ್ಯ ಇಲ್ಲ. ಇದುವರೆಗೆ ಗುಟ್ಕಾ ಕಂಪೆನಿಗಳು ಒಳ್ಳೆಯ ಗುಣಮಟ್ಟದ ಚಾಲಿ ಅಡಿಕೆಯನ್ನು ಬಳಸಿದ್ದೇ ಇಲ್ಲ ಎಂದು ಬೆಳ್ತಂಗಡಿ ತಾಲ್ಲೂಕು ಬೆಳಾಲಿನ ಪ್ರಗತಿಪರ ಕೃಷಿಕ ರವೀಂದ್ರ ಅಭಿಪ್ರಾಯಪಟ್ಟರು.
ಗುಟ್ಕಾ ನಿಷೇಧ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಒಂದು ರೀತಿಯ ಗೊಂದಲ ಸೃಷ್ಟಿಸಿದ್ದು, ಅಡಿಕೆ ಬೆಳೆಗಾರರ ಹಿತ ಕಾಪಾಡಲು ಇರುವ ಪ್ರಾತಿನಿಧಿಕ ಸಂಸ್ಥೆ ಕ್ಯಾಂಪ್ಕೊದತ್ತ ಎಲ್ಲರ ಗಮನ ಕೇಂದ್ರೀಕರಿಸಿದೆ. ಮುಂದಿನ ದಿನಗಳಲ್ಲಿ ಇದು ರಾಜಕೀಯ ದಾಳವಾಗಿಯೂ ಚಲಾವಣೆಯಲ್ಲಿ ಇರುವ ಸಾಧ್ಯತೆ ಕಂಡುಬಂದಿದ್ದು, ನಮ್ಮ ಹಿತ ಕಾಯುವವರು ಯಾರು ಎಂದು ಬೆಳೆಗಾರರು ಪ್ರಶ್ನಿಸತೊಡಗಿದ್ದಾರೆ.
ಗುಟ್ಕಾ ಸಿಷೇಧ- ಕ್ಯಾಂಪ್ಕೊ ಆತಂಕ
ರಾಜ್ಯ ಸರ್ಕಾರ ಗುಟ್ಕಾ ನಿಷೇಧಿಸಿರುವುದು ದುರದೃಷ್ಟಕರ. ಅಡಿಕೆ ಬೆಳೆಗಾರರಿಗೆ ಹಿತವನ್ನೂ ಕಾಯುವ ಹೊಣೆಗಾರಿಕೆ ಸರ್ಕಾರಕ್ಕೆ ಇದೆ. ಏಕಾಏಕಿ ಗುಟ್ಕಾವನ್ನು ನಿಷೇಧಿಸುವ ಬದಲಿಗೆ ಗುಟ್ಕಾದಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಸರ್ಕಾರ ಮಾಡಬೇಕಿತ್ತು. ಗುಟ್ಕಾಕ್ಕಿಂತಲೂ ಹೆಚ್ಚಿನ ಅಪಾಯ ಉಂಟು ಮಾಡುವ ಬೀಡಿ, ಸಿಗರೇಟ್‌ಗಳನ್ನು ಸಹ ಸಂಪೂರ್ಣ ನಿಷೇಧಿಸುವಂತಹ ದಿಟ್ಟ ಕ್ರಮವನ್ನು ಸರ್ಕಾರ ಕೈಗೊಂಡಿದ್ದರೆ ಅದನ್ನು ಸಾರ್ವತ್ರಿಕವಾಗಿ ಸ್ವಾಗತಿಸಬಹುದಿತ್ತು.
ಅಡಿಕೆ ಬೆಳೆಗಾರರ ಹಿತ ಕಾಪಾಡಲು ಕ್ಯಾಂಪ್ಕೊ ಸದಾ ಬದ್ಧ. ನಿಷೇಧದಂತಹ ಕ್ರಮಗಳಿಂದ ಅಡಿಕೆಯ ಬೆಲೆ ಕುಸಿಯದಂತೆ ಮಾಡಲು ಕ್ಯಾಂಪ್ಕೊ ತೀವ್ರ ಪ್ರಯತ್ನ ನಡೆಸಲಿದೆ'.
ಕೊಂಕೋಡಿ ಪದ್ಮನಾಭ, ಕ್ಯಾಂಪ್ಕೊ ಅಧ್ಯಕ್ಷ
`ತಿಳಿವಳಿಕೆ ನೀಡುವ ಕೆಲಸವಾಗಲಿ'
ಗುಟ್ಕಾ ನಿಷೇಧದಿಂದ ಅಡಿಕೆಯ ದರ ಸ್ವಲ್ಪಮಟ್ಟಿಗೆ ಕುಸಿಯುವುದು ನಿಶ್ಚಿತ. ಇದರಿಂದ ಅಡಿಕೆ ಬೆಳೆಗಾರರಿಗೆ ಭಾರಿ ಹೊಡೆತ ನೀಡಬಹುದು. ಆದರೆ ಗುಟ್ಕಾವು ಮನುಷ್ಯನ ದೇಹದ ಮೇಲೆ ಮಾಡುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಕೆಲಸ ಮಾಡಿದ್ದೇ ಆದರೆ ಈ ನಿಷೇಧವನ್ನು ಅಡಿಕೆ ಬೆಳೆಗಾರರು ಸ್ವೀಕರಿಸಿ ಅದಕ್ಕೆ ಸಹಕಾರ ನೀಡಬಹುದು'.
ಸವಣೂರು ಸೀತಾರಾಮ ರೈ, ಅಡಿಕೆ ಕೃಷಿಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.