ADVERTISEMENT

ಗೋ ಸಾಗಣೆ- ಶಾಂತಿ ಸಭೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 11:01 IST
Last Updated 5 ಆಗಸ್ಟ್ 2013, 11:01 IST

ಸುರತ್ಕಲ್: ಕಾನೂನು ಉಲ್ಲಂಘಿಸಿ ಗೋ ಸಾಗಾಣೆ ಮತ್ತು ಗೋ ಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕು. ಅಕ್ರಮ ಕಸಾಯಿಖಾನೆಯನ್ನು ಕೂಡಲೇ ಮುಚ್ಚಬೇಕು ಎಂದು ಸುರತ್ಕಲ್ ನಾಗರಿಕ ಸಮಿತಿ ಅಧ್ಯಕ್ಷ ಸುಭಾಶ್‌ಚಂದ್ರ ಶೆಟ್ಟಿ ತಿಳಿಸಿದರು.

ಸುರತ್ಕಲ್ ಪೊಲೀಸರು ಹಾಗೂ ನಾಗರಿಕರ ವತಿಯಿಂದ ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಭಾನುವಾರ ನಡೆದ ಅಕ್ರಮ ದನ ಸಾಗಾಣೆ ತಡೆ ಕುರಿತ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಗೋವುಗಳನ್ನು ಅಮಾನುಷವಾಗಿ ಮತ್ತು ಅಕ್ರಮವಾಗಿ ಸಾಗಿಸುತ್ತಿರುವುದರಿಂದ ಹಿಂದೂಗಳ ಧಾರ್ಮಿಕ ಭಾವನೆಯ ಮೇಲೆ ಹೊಡೆತ ಬೀಳುತ್ತಿದೆ. ಹಿಂದೂ ಧರ್ಮದಲ್ಲಿ ಗೋವಿನ ಬಗ್ಗೆ ಪವಿತ್ರವಾದ ಸ್ಥಾನವಿದೆ ಎಂದು ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ತಿಳಿಸಿದರು.

ನ್ಯಾಯಯುತವಾದ ಗೋ ಸಾಗಣೆಗೆ ಅವಕಾಶವನ್ನು ಪೊಲೀಸರೂ ನೀಡಬೇಕು ಹಿಂದೂಗಳೂ ನಿಡಬೇಕು ಎನ್ನುವುದು ಮುಸ್ಲಿಮರ ಬೇಡಿಕೆಯಾದರೆ, ಗೋ ಹತ್ಯೆ ಮತ್ತು ಗೋ ಸಾಗಣೆಗೆ ಸಂಬಂಧಿಸಿ ಪ್ರತ್ಯೇಕ ಸಭೆ ಕರೆಸಿ ಸಮಾಲೋಚನೆ ನಡೆಸಿ ಸೂಕ್ತ ವೇದಿಕೆ ನಿರ್ಮಿಸಬೇಕು ಎನ್ನುವುದು ಹಿಂದೂಗಳ ವಾದ. ದನ ಸಾಗಣೆ ತಪ್ಪು ಎಂಬ ವಾದ ನಮ್ಮದಲ್ಲ. ಆದರೆ ದನವನ್ನು ಕದ್ದು ಸಾಗಿಸುವುದು, ಜೀವನೋಪಾಯವಾಗಿರುವ ದನಗಳನ್ನು ಕದಿಯುವುದು ಮತ್ತು ಕಡಿಯುವುದು,

ಮೇಯಲು ಬಿಟ್ಟಿರುವ ದನಗಳನ್ನು ಕಸಾಯಿಖಾನೆಗೆ ಸಾಗಿಸುವುದು ಇವೆಲ್ಲ ಕಾನೂನು ಬಾಹಿರ ಮತ್ತು ಹಿಂದೂಗಳ ಭಾವನೆ ಕೆರಳಿಸುವಂತಹುದು ಎಂದು ಹಿಂದೂಗಳ ಅಭಿಪ್ರಾಯವಾಗಿತ್ತು. ಇದೇ ಸಂದರ್ಭದಲ್ಲಿ ಮಾತನಾಡಿದ ಸುರತ್ಕಲ್ ಠಾಣಾಧಿಕಾರಿ ನಟರಾಜ್ ಅವರು, ದನಗಳ್ಳರ ಮೇಲೆ ಹದ್ದಿನ ಕಣ್ಣು ಇರಿಸಿದ್ದೇವೆ. ಸಮಾಜದಲ್ಲಿ ಶಾಂತಿ ನೆಲೆಸಬೇಕು. ಎಲ್ಲ ಧರ್ಮದವರೂ ಸೌಹಾರ್ದದಿಂದ ಬದುಕಬೇಕು ಎನ್ನುವುದು ನಮ್ಮ ಇರಾದೆ. ಇದಕ್ಕಾಗಿ ಪೊಲೀಸ್ ಇಲಾಖೆ ಪ್ರಯತ್ನಿಸುತ್ತದೆ. ದನಗಳ್ಳರ ಬಗ್ಗೆ ಮಾಹಿತಿ ಇದ್ದಾಗ ಯಾವುದೇ ಧರ್ಮದವರಾಗಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಬೇಕು. ಯಾರೂ ತಾವಾಗಿಯೇ ಕ್ರಮ ಕೈಗೊಳ್ಳಬಾರದು ಎಂದರು.

ಸುರತ್ಕಲ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮದ ನೇತಾರರು, ಸಂಘಟನೆ ವಕ್ತಾರರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT