ADVERTISEMENT

ಘಟ್ಟದ ತಪ್ಪಲಿನಲ್ಲಿ ಕುಡಿಯಲು ಝರಿ ನೀರು

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 5:25 IST
Last Updated 11 ಜುಲೈ 2012, 5:25 IST

ಮಂಗಳೂರು: ಸುಬ್ರಹ್ಮಣ್ಯ ಗ್ರಾಮದ ಕಮ್ಮೆಟ್ಟಿ ಗ್ರಾಮದಲ್ಲಿ ಝರಿಯ ಸಹಜ ಹರಿವಿನ ಗುರುತ್ವಾಕರ್ಷಣ ಬಲವನ್ನೇ ಬಳಸಿ (ವಿದ್ಯುತ್ ಬಳಕೆ ಇಲ್ಲದೆ) ಗ್ರಾಮಕ್ಕೆ ಕುಡಿಯುವ ನೀರು ಪೂರೈಸಿದ ಯಶಸ್ವಿ ಯೋಜನೆಯನ್ನು ಇನ್ನೂ ಐದು ಗ್ರಾಮಗಳಲ್ಲಿ ಜಾರಿಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಇದಕ್ಕಾಗಿ ರೂ.12 ಕೋಟಿ ವೆಚ್ಚದ ಯೋಜನೆಯನ್ನು ಜಿ.ಪಂ. ಸಿದ್ಧಪಡಿಸಿದೆ.

`ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳಲ್ಲಿ ಝರಿ ನೀರನ್ನೇ ಬಳಸಿ ವರ್ಷ ಪೂರ್ತಿ ಕುಡಿಯುವ ನೀರು ಪೂರೈಕೆ ಸಾಧ್ಯ. ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಗ್ರಾ.ಪಂ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಕಲ್ಲಗುಂಡದಲ್ಲಿ ಎರಡು ಕಡೆ ಈ ಯೋಜನೆ ಜಾರಿಗೊಳ್ಳಲಿದೆ. ಒಂದು ಯೋಜನೆಗೆ ರೂ 50 ಲಕ್ಷ ಹಾಗೂ ಇನ್ನೊಂದು ಯೋಜನೆಗೆ ರೂ 3 ಕೋಟಿ ವೆಚ್ಚವಾಗಲಿದೆ. ತಾಲ್ಲೂಕಿನ ನಿಡ್ಲೆ ಗ್ರಾ.ಪಂ ವ್ಯಾಪ್ತಿಯ ಬರೆಂಗಾಯದಲ್ಲಿ ರೂ 3 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಸುಳ್ಯ ತಾಲ್ಲೂಕಿನಲ್ಲಿ ಅಮರ ಮುಡ್ನೂರು ಗ್ರಾ.ಪಂ.ನ ಪೈಲಾರ್, ಅರಂತೋಡು ಗ್ರಾ.ಪಂ. ವ್ಯಾಪ್ತಿಯ ತೋಡಿಕಾನದ ದೇವರಗುಂಡ ಕುಡಿಯುವ ನೀರು ಪೂರೈಸಲು ರೂ 5.5 ಕೋಟಿ ಯೋಜನೆ ಸಿದ್ಧವಾಗಿದೆ~ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ `ಪ್ರಜಾವಾಣಿ~ಗೆ ತಿಳಿಸಿದರು.

ಯಶೋಗಾಥೆ: `ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯ ಕಮ್ಮೆಟ್ಟಿ ಗ್ರಾ.ಪಂ.ನಲ್ಲಿ ಝರಿ ನೀರನ್ನು ಬಳಸಿ ಕುಡಿಯುವ ನೀರಿನ ಅಗತ್ಯ ಪೂರೈಸುವ ಯೋಜನೆಯನ್ನು ಎಂಟು ವರ್ಷಗಳ ಹಿಂದೆಯೇ  ಜಾರಿಗೊಳಿಸಲಾಯಿತು. ಈ ಯೋಜನೆಯಲ್ಲಿ ವಿದ್ಯುತ್ ಶಕ್ತಿ ಬಳಸದೆ ಕೇವಲ ಗುರುತ್ವಾಕರ್ಷಣೆಯಿಂದಲೇ ಮನೆಗಳಿಗೆ ನೀರು ಪೂರೈಸಬಹುದು. ಈ ಯೋಜನೆ ಅನುಷ್ಠಾನಕ್ಕೆ ತಗಲುವ ವೆಚ್ಚವೂ ಕಡಿಮೆ. ಕಮ್ಮೆಟ್ಟಿಯ ಯಶಸ್ಸನ್ನು ಆಧರಿಸಿ ಪಶ್ಚಿಮ ಘಟ್ಟದ ತಪ್ಪಲಿನ ಇತರ ಗ್ರಾಮಗಳಲ್ಲೂ ಅದನ್ನು ಜಾರಿಗೊಳಿಸುತ್ತಿದ್ದೇವೆ~ ಎಂದು ಅವರು ತಿಳಿಸಿದರು.

ನೀರು ಪೂರೈಕೆ ಹೇಗೆ?: `ಸುಬ್ರಹ್ಮಣ್ಯ ಪಟ್ಟಣದಿಂದ 7 ಕಿ.ಮೀ ದೂರದಲ್ಲಿ ಕಮ್ಮೆಟ್ಟಿ ಝರಿ ಇದೆ. ಅಲ್ಲಿ ಗುಡ್ಡದ ಇಳಿಜಾರಿನಲ್ಲೇ ಪುಟ್ಟ ತೊಟ್ಟಿ ನಿರ್ಮಿಸಿ ಅದನ್ನು ಗ್ರಿಲ್‌ನಿಂದ ಮುಚ್ಚಿದ್ದೇವೆ. ಈ ಗ್ರಿಲ್ ನೀರಿನಲ್ಲಿ ಹರಿದು ಬರುವ ಕಸ ಕಡ್ಡಿ, ಎಲೆ ಮೊದಲಾದ ಘನ ಕಶ್ಮಲಗಳನ್ನು ಬೇರ್ಪಡಿಸುತ್ತದೆ.
 
ಆ ತೊಟ್ಟಿಯಿಂದ 6 ಇಂಚಿನ ಜಿ.ಐ ಪೈಪ್ ಮೂಲಕ ಶುದ್ಧೀಕರಣ ತೊಟ್ಟಿಗೆ ನೀರು ಹರಿಸುತ್ತೇವೆ. ಅಲ್ಲಿ ಇದ್ದಿಲು, ದೊಡ್ಡಗಾತ್ರದ ಮರಳು ಹಾಗೂ ಸಣ್ಣ ಮರಳಿನ ಮೂಲಕ ಹಾದುಹೋಗುವ ನೀರು ಶೇ 100ರಷ್ಟು ಶುದ್ಧೀಕರಣಗೊಳ್ಳುತ್ತದೆ. ಅಲ್ಲಿಂದ ಶೇಖರಣಾ ತೊಟ್ಟಿಗೆ ನೀರು ಹಾಯಿಸಲಾಗುತ್ತದೆ. ಈ ತೊಟ್ಟಿ ಎತ್ತರದ ಜಾಗದಲ್ಲಿರುವುದರಿಂದ ಗುರುತ್ವಾಕರ್ಷಣ ಬಲದಿಂದಲೇ ಗ್ರಾಮದ ಮನೆಗಳಿಗೆ ನೀರು ಪೂರೈಕೆಯಾಗುತ್ತದೆ~ ಎಂದು ಸುಬ್ರಹ್ಮಣ್ಯ ಗ್ರಾ.ಪಂ ಪಿಡಿಒ ಯಶವಂತ್ `ಪ್ರಜಾವಾಣಿ~ಗೆ ತಿಳಿಸಿದರು.

`ಈ ಬಾರಿ ಮಳೆ ಕಡಿಮೆ ಇದ್ದರೂ ಜೂನ್‌ನಲ್ಲಿ ಮಳೆ ಆರಂಭವಾಗುವವರೆಗೂ ನಾವೂ ನೀರು ಪೂರೈಸಿದ್ದೇವೆ. ಮಳೆಗಾಲದಲ್ಲಿ ಪೈಪ್‌ನಲ್ಲಿ ಕೆಲವೊಮ್ಮೆ ಕಸ ತುಂಬಿಕೊಳ್ಳುತ್ತದೆ. ಆಗ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಇದೆ. ಅದು ಬಿಟ್ಟರೆ ಕಳೆ ಏಳೆಂಟು ವರ್ಷಗಳಿಂದ ಪಂಚಾಯಿತಿ ವತಿಯಿಂದ ಕುಡಿಯುವ ನೀರು ಪೂರೈಕೆಗೆ ವಿದ್ಯುತ್ ಶುಲ್ಕ ಪಾವತಿಸಿದ್ದಿಲ್ಲ~ ಎನ್ನುತ್ತಾರೆ ಯಶವಂತ್.

`ಕುಡಿಯುವ ನೀರು ಪೂರೈಕೆಯ ವಿದ್ಯುತ್ ಬಿಲ್ ಪಾವತಿಗೆ ಗ್ರಾಮ ಪಂಚಾಯಿತಿಗಳಲ್ಲಿ ಸೂಕ್ತ ಸಂಪನ್ಮೂಲಗಳಿಲ್ಲ. ಘಟ್ಟದ ತಪ್ಪಲಿನ ಅನೇಕ ಗ್ರಾಮಗಳಲ್ಲಿ ಝರಿ ನೀರು ಯಥೇಚ್ಛವಾಗಿ ಲಭ್ಯ ಇದೆ. ಗುರುತ್ವಾಕರ್ಷಣೆ ಬಲದಿಂದಲೇ ನೀರು ಪೂರೈಸುವ ಈ ಐದು ಯೋಜನೆಗಳು ಯಶಸ್ವಿಯಾದರೆ ಇನ್ನಷ್ಟು ಗ್ರಾಮಗಳಲ್ಲಿ ಅದನ್ನು ಜಾರಿಗೊಳಿಸುವ ಉದ್ದೇಶವಿದೆ~ ಎಂದು ಸಿಇಒ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.