ಪುತ್ತೂರು: ‘ದೇಶದಲ್ಲಿ ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಾಚಾರವನ್ನು ನಿಗ್ರಹಿಸಲು ಜನ ಲೋಕ್‌ಪಾಲ ಮಸೂದೆ ಸಮರ್ಪಕವಾಗಿ ಜಾರಿಯಾಗಬೇಕಿದೆ. ಅದರ ಜೊತೆಗೆ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನಿಡುವ ಅಗತ್ಯವಿದೆ’ ಎಂದು ಯೋಗ ಗುರು ಬಾಬಾ ರಾಮದೇವ್ ಅಭಿಪ್ರಾಯಪಟ್ಟರು.
ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಸಂಜೆ ಭಾರತ್ ಸ್ವಾಭಿಮಾನ್ ಹಾಗೂ ಪತಂಜಲಿ ಯೋಗ ಸಮಿತಿ ವತಿಯಿಂದ ನಡೆದ ಜನಸಭಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿಯನ್ನು ಕೂಡ ಪ್ರಶ್ನಿಸಲು ಸಾಧ್ಯವಾಗುವ ಲೋಕಪಾಲ್ ಮಸೂದೆ ಜಾರಿಯಾದಾಗ ಮತ್ತು ಮುಖ್ಯಮಂತ್ರಿ ಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುವಂತೆ ಲೋಕಾಯುಕ್ತ ಸಂಸ್ಥೆಗೆ ಅಧಿಕಾರ ನೀಡಿದಾಗ ಮಾತ್ರ ಭ್ರಷ್ಟಾಚಾರ ನಿರ್ಮೂಲನೆಗೊಂಡು ಸಾರ್ವಜನಿಕರ ಜೀವನ ಪರಿಶುದ್ಧವಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಪ್ಪು ಹಣ, ಭ್ರಷ್ಟಾಚಾರ, ವಿದೇಶಿ ಕಂಪನಿಗಳ ಹಾವಳಿ, ಹದಗೆಟ್ಟ ರಾಜಕಾರಣದಿಂದಾಗಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಡುತ್ತಿದೆ. ತೆರಿಗೆ ಕಳ್ಳತನ, ಖನಿಜ ಲೂಟಿ, ಅಕ್ರಮ ಸಂಪಾದನೆ ಮಿತಿಮೀರುತ್ತಿದೆ. ಭ್ರಷ್ಟಾಚಾರ ದೇಶಕ್ಕೆ ಮಾರಕ ಪಿಡುಗಾಗಿ ಪರಿಣಮಿಸಿದೆ ಎಂದ ಅವರು ಇದನ್ನು ತಡೆಯಲು ನ್ಯಾಯಸಮ್ಮತ ದಿಟ್ಟ ಕಠಿಣ ಕಾನೂನು ಜಾರಿಗೊಳ್ಳಬೇಕಿದೆ. ಮಾತ್ರವಲ್ಲ, ದಿಟ್ಟ ನಿಲುವು ತೆಗೆದುಕೊಳ್ಳುವ ಮೂಲಕ ಜನರೇ ದೇಶವನ್ನು ರಕ್ಷಿಸಲು ಪಣತೊಡಬೇಕಿದೆ ಎಂದರು. ಭ್ರಷ್ಟಾಚಾರದ ವಿರುದ್ಧ ತನ್ನ ಹೋರಾಟ, ಅಭಿಯಾನ ಮುಂದುವರಿಯಲಿದೆ ಎಂದು ಅವರು ಘೋಷಿಸಿದರು.
ಇಂದು ದೇಶದಲ್ಲಿ ಮಾದಕ ದ್ರವ್ಯಗಳ ಜಾಲ ಜನತೆಯನ್ನು ದುರ್ಬಲಗೊಳಿಸಲು ಕಾರಣವಾಗುತ್ತಿದೆ. ನಕ್ಸಲ್‌ವಾದ ಮತ್ತು ಮಾವೋವಾದದಂತಹ ಭಯೋತ್ಪಾದನಾ ಕೃತ್ಯಗಳ ಮೂಲಕ ಅಮಾಯಕ ಮಂದಿಯನ್ನು ದಾರಿ ತಪ್ಪಿಸುವ ಕೆಲಸವಾಗುತ್ತಿದೆ ಎಂದು ಅವರು ವಿಷಾದಿಸಿದರು.
ಗ್ರಾಮ ಗ್ರಾಮಗಳಲ್ಲಿ ಜನತೆ ಯೋಗಾಭ್ಯಾಸ ಮಾಡುವ ಮೂಲಕ ರೋಗ ಮುಕ್ತ ಮತ್ತು ದೋಷ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಬಾಬಾ ರಾಮದೇವ್ ಕರೆಯಿತ್ತರು.
ಭಾರತ್ ಸ್ವಾಭಿಮಾನಿ ಯಾತ್ರೆ ಸಮಿತಿಯ ಗೌರವಾಧ್ಯಕ್ಷ ಬಲರಾಮ್ ಆಚಾರ್ಯ, ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಭಂಡಾರಿ, ಪುತ್ತೂರಿನ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಡಾ.ರಾಜೇಶ್, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮಹೇಶ್ ಕಜೆ, ಸ್ವಾಭಿಮಾನಿ ಯಾತ್ರೆ ಸಮಿತಿಯ ಪದಾಧಿಕಾರಿಗಳಾದ ಪ್ರದೀಪ್, ನರೇಂದ್ರ, ವಕೀಲ ಪಿ.ಪಿ ಹೆಗ್ಡೆ, ಡಾ.ಜ್ಞಾನೇಶ್ವರ್ ನಾಯಕ್, ಸುಜಾತ, ಡಾ. ಸುಮನ್, ರವಿಪ್ರಸಾದ್ ಶೆಟ್ಟಿ ಬನ್ನೂರು, ಗಿರೀಶ್, ವಿದ್ಯಾ, ಹೇಮಲತಾ, ಧನುಷ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.