ADVERTISEMENT

ಜಿಲ್ಲೆಯ 42 ಅಭ್ಯರ್ಥಿಗಳಿಗೆ ಠೇವಣಿ ನಷ್ಟ

ಎಂಟು ಕ್ಷೇತ್ರಗಳಲ್ಲೂ ಠೇವಣಿ ಉಳಿಸಿಕೊಂಡ ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 17 ಮೇ 2018, 5:46 IST
Last Updated 17 ಮೇ 2018, 5:46 IST

ಮಂಗಳೂರು: ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಣಕ್ಕಿಳಿದಿದ್ದ 58 ಅಭ್ಯರ್ಥಿಗಳ ಪೈಕಿ 42 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಎಂಟು ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಮಾತ್ರ ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತಗಳ ಆರನೇ ಒಂದರಷ್ಟು ಮತಗಳನ್ನು ಪಡೆದರೆ ಠೇವಣಿ ಉಳಿಯುತ್ತದೆ. ಇಲ್ಲವಾದರೆ ಅಭ್ಯರ್ಥಿಗಳು ನಾಮಪತ್ರದ ಜೊತೆ ಪಾವತಿಸಿದ ಠೇವಣಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಸಿಪಿಎಂನ ನಾಲ್ಕು, ಎಂಇಪಿಯ ಏಳು, ಜೆಡಿಎಸ್‌ನ ಐದು, ಜೆಡಿಯುನ ಒಬ್ಬ, ಹಿಂದೂ ಮಹಾಸಭಾದ ಇಬ್ಬರು, ಲೋಕ ಆವಾಝ್ ದಳದ ಇಬ್ಬರು, ಬಹುಜನ ಸಮಾಜ ಪಕ್ಷ, ಪ್ರಜಾ ಪರಿವರ್ತನ ಪಕ್ಷ, ಸಾಮಾನ್ಯ ಜನತಾ ಪಕ್ಷ ಮತ್ತು ಹಿಂದುಸ್ತಾನ್ ಜನತಾ ಪಕ್ಷದ ತಲಾ ಒಬ್ಬರು ಹಾಗೂ 17 ಮಂದಿ ಪಕ್ಷೇತರ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ADVERTISEMENT

ಬೆಳ್ತಂಗಡಿ ಕ್ಷೇತ್ರದಲ್ಲಿ ಒಟ್ಟು 1,78,387 ಮತಗಳು ಚಲಾವಣೆ ಯಾಗಿದ್ದು, ಠೇವಣಿ ಉಳಿಯಬೇಕಾದರೆ 29,731 ಮತಗಳನ್ನು ಪಡೆಯಬೇಕಿತ್ತು. ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ ಹರೀಶ್‌ ಪೂಂಜ ಮತ್ತು ಸಮೀಪದ ಪ್ರತಿಸ್ಪರ್ಧಿಯಾದ ಕಾಂಗ್ರೆಸ್‌ನ ಕೆ.ವಸಂತ ಬಂಗೇರ ಮಾತ್ರ ನಿಗದಿತ ಮಿತಿಗಿಂತ ಹೆಚ್ಚಿನ ಮತ ಪಡೆದಿದ್ದಾರೆ. ಎಂಇಪಿಯ ಜಗನ್ನಾಥ ಎಂ., ಜೆಡಿಎಸ್‌ನ ಸುಮತಿ ಎಸ್.ಹೆಗ್ಡೆ, ಪಕ್ಷೇತರರಾದ ವೆಂಕಟೇಶ ಬೆಂಡೆ ಮತ್ತು ಯು.ಎಂ.ಸೈಯದ್‌ ಹಸನ್‌ ಠೇವಣಿ ಕಳೆದುಕೊಂಡಿದ್ದಾರೆ.

ಮೂಡುಬಿದಿರೆ ಕ್ಷೇತ್ರದಲ್ಲಿ 1,51,950 ಮತಗಳು ಚಲಾವಣೆ ಯಾಗಿದ್ದವು. ಠೇವಣಿ ಉಳಿಸಿಕೊಳ್ಳಲು 25,325 ಮತಗಳನ್ನು ಪಡೆಯಬೇಕಿತ್ತು. ಈ ಕ್ಷೇತ್ರದಲ್ಲಿ ಜಯ ಗಳಿಸಿರುವ ಬಿಜೆಪಿಯ ಉಮಾನಾಥ ಎ.ಕೋಟ್ಯಾನ್‌ ಮತ್ತು ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ಕೆ.ಅಭಯಚಂದ್ರ ಜೈನ್‌ ಮಾತ್ರ ಈ ಮಿತಿಯನ್ನು ದಾಟಿದ್ದಾರೆ. ಜೆಡಿಎಸ್‌ನ ಜೀವನ ಕೃಷ್ಣ ಶೆಟ್ಟಿ, ಸಿಪಿಎಂನ ಕೆ.ಯಾದವ ಶೆಟ್ಟಿ, ಎಂಇಪಿಯ ಅಬ್ದುಲ್ ರೆಹಿಮಾನ್‌, ಪಕ್ಷೇತರರಾದ ಅಶ್ವಿನ್‌ ಜೋಸಿ ‍ಪಿರೇರ ಮತ್ತು ರೀನಾ ಪಿಂಟೊ ಠೇವಣಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಮಂಗಳೂರು ಉತ್ತರದಲ್ಲಿ 1,75,457 ಮತಗಳು ಚಲಾವಣೆಯಾ ಗಿದ್ದು, ಠೇವಣಿ ಉಳಿಯಬೇಕಾದರೆ 29,242 ಮತಗಳನ್ನು ಪಡೆಯುವುದು ಅಗತ್ಯವಾಗಿತ್ತು. ಇಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಡಾ.ವೈ.ಭರತ್‌ ಶೆಟ್ಟಿ ಮತ್ತು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬಿ.ಎ.ಮೊಹಿಯುದ್ದೀನ್ ಬಾವಾ ಮಾತ್ರ ಠೇವಣಿ ಉಳಿಸಿಕೊಂಡಿದ್ದಾರೆ. ಉಳಿದಂತೆ ಸಿಪಿಎಂನ ಮುನೀರ್‌ ಕಾಟಿಪಳ್ಳ, ಎಂಇಪಿಯ ಪಿ.ಎಂ.ಅಹ್ಮದ್, ಅಖಿಲ ಭಾರತ ಹಿಂದೂ ಮಹಾಸಭಾದ ಸುರೇಶ್ ಬಿ.ಸಾಲಿಯಾನ್‌, ಲೋಕ್‌ ಆವಾಝ್ ದಳದ ಸುಪ್ರೀತ್‌ ಕುಮಾರ್‌ ಪೂಜಾರಿ ಹಾಗೂ ಪಕ್ಷೇತರ ಅಭ್ಯರ್ಥಿ ರೀನಾ ಪಿಂಟೊ ಠೇವಣಿ ಕಳೆದುಕೊಂಡಿದ್ದಾರೆ.

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 1,61,971 ಮತ ಚಲಾವಣೆಯಾಗಿದ್ದು, ಠೇವಣಿ ಉಳಿಯಲು 26,995 ಮತ ಪಡೆಯಬೇಕಿತ್ತು. ಇಲ್ಲಿ ಜಯ ಗಳಿಸಿದ ಬಿಜೆಪಿಯ ಡಿ.ವೇದವ್ಯಾಸ ಕಾಮತ್‌ ಮತ್ತು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಜೆ.ಆರ್.ಲೋಬೊ ಠೇವಣಿ ಮಾತ್ರ ಉಳಿದಿದೆ. ಸಿಪಿಎಂನ ಸುನೀಲ್‌ ಕುಮಾರ್ ಬಜಾಲ್, ಜೆಡಿಎಸ್‌ನ ರತ್ನಾಕರ ಸುವರ್ಣ, ಎಂಇಪಿಯ ಮೊಹಮ್ಮದ್ ಇಕ್ಬಾಲ್, ಅಖಿಲ ಭಾರತ ಹಿಂದೂ ಮಹಾಸಭಾದ ಧರ್ಮೇಂದ್ರ, ಹಿಂದುಸ್ತಾನ್ ಜನತಾ ಪಕ್ಷದ ಸುಪ್ರೀತ್‌ ಕುಮಾರ್ ಪೂಜಾರಿ, ಪಕ್ಷೇತರರಾದ ಶ್ರೀಕರ ಪ್ರಭು, ಎಂ.ಸಿ.ಮದನ್‌, ರೀನಾ ಪಿಂಟೊ, ಮೊಹಮ್ಮದ್ ಖಾಲಿದ್‌ ಠೇವಣಿ ಉಳಿಯಲು ಅಗತ್ಯವಾದ ಮತ ಪಡೆಯಲು ಯಶ ಕಂಡಿಲ್ಲ.

ಮಂಗಳೂರು ಕ್ಷೇತ್ರದಲ್ಲಿ 1,48,480 ಮತ ಚಲಾವಣೆಯಾಗಿದ್ದು, ಠೇವಣಿ ಉಳಿಸಿಕೊಳ್ಳಲು 24,746 ಮತ ಗಳಿಸಬೇಕಿತ್ತು. ಗೆಲುವು ಸಾಧಿಸಿದ ಕಾಂಗ್ರೆಸ್‌ನ ಯು.ಟಿ.ಖಾದರ್‌ ಮತ್ತು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸಂತೋಷ್‌ ಕುಮಾರ್ ರೈ ಮಾತ್ರ ಈ ಮಿತಿಗಿಂತ ಹೆಚ್ಚು ಮತ ಪಡೆದಿದ್ದಾರೆ. ಜೆಡಿಎಸ್‌ನ ಕೆ.ಅಶ್ರಫ್, ಸಿಪಿಎಂನ ನಿತಿನ್ ಕುತ್ತಾರ್ ಮತ್ತು ಎಂಇಪಿಯ ಉಸ್ಮಾನ್‌ ಠೇವಣಿ ಉಳಿಯಲು ಬೇಕಾದ ಮತಗಳನ್ನೂ ಪಡೆದಿಲ್ಲ.

ಬಂಟ್ವಾಳ ಕ್ಷೇತ್ರದಲ್ಲಿ 1,81,590 ಮತಗಳು ಚಲಾವಣೆಗೊಂಡಿದ್ದವು. ಇಲ್ಲಿ ಠೇವಣಿ ಉಳಿಸಿಕೊಳ್ಳಲು 30,265 ಮತಗಳು ಬೇಕಿತ್ತು. ಗೆಲುವು ಸಾಧಿಸಿದ ಬಿಜೆಪಿಯ ರಾಜೇಶ್ ನಾಯ್ಕ್‌ ಯು. ಮತ್ತು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬಿ.ರಮಾನಾಥ ರೈ ಮಾತ್ರ ಈ ಮಿತಿಗಿಂತ ಹೆಚ್ಚು ಮತ ಗಳಿಸಿದ್ದಾರೆ. ಎಂಇಪಿಯ ಶಮೀರ್, ಲೋಕ್‌ ಆವಾಝ್ ದಳದ ಬಾಲಕೃಷ್ಣ ಪೂಜಾರಿ ಪಣೋಲಿಬೈಲ್‌ ಮತ್ತು ಪಕ್ಷೇತರ ಅಭ್ಯರ್ಥಿ ಇಬ್ರಾಹಿಂ ಕೈಲಾರ್‌ಗೆ ಠೇವಣಿ ಉಳಿದಿಲ್ಲ.

ಪುತ್ತೂರು ಕ್ಷೇತ್ರದಲ್ಲಿ 1,64,913 ಮತಗಳು ಚಲಾವಣೆಯಾಗಿದ್ದು, ಠೇವಣಿ ಉಳಿಯಲು 27,485 ಮತ ಬೇಕಿತ್ತು. ಗೆಲುವು ಸಾಧಿಸಿದ ಬಿಜೆಪಿಯ ಸಂಜೀವ ಮಠಂದೂರು ಮತ್ತು ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ಶಕುಂತಳಾ ಟಿ.ಶೆಟ್ಟಿ ಮಾತ್ರ ಈ ಮಿತಿಗಿಂತ ಹೆಚ್ಚು ಮತ ಗಳಿಸಿದ್ದಾರೆ. ಜೆಡಿಎಸ್‌ನ ಐ.ಸಿ.ಕೈಲಾಸ್‌ ಗೌಡ, ಜೆಡಿಯುನ ಅಬ್ದುಲ್‌ ಮಜೀದ್ ಕೊಲ್ಪೆ, ಎಂಇಪಿಯ ಶಬನಾ ಶೇಖ್‌, ಪ್ರಜಾ ಪರಿವರ್ತನಾ ಪಕ್ಷದ ಬಿ.ಶೇಖರ್‌ ಮಾಡಾವು, ಸಾಮಾನ್ಯ ಜನತಾ ಪಕ್ಷದ ಎಂ.ಶೇಷಪ್ಪ ರಾವ್‌, ಪಕ್ಷೇತರರಾದ ವಿದ್ಯಾಶ್ರೀ ಎಸ್‌., ಅಮರನಾಥ ಬಿ.ಕೆ. ಮತ್ತು ಅಬ್ದುಲ್ ಬಶೀರ್ ಬೂಡಿಯಾರ್‌ ಠೇವಣಿ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ.

ಸುಳ್ಯ ಕ್ಷೇತ್ರದಲ್ಲಿ 1,66,854 ಮತಗಳು ಚಲಾವಣೆಗೊಂಡಿದ್ದು, ಠೇವಣಿಗೆ 27,809 ಮತ ಗಳಿಸಬೇಕಿತ್ತು. ಗೆಲುವು ಸಾಧಿಸಿದ ಬಿಜೆಪಿಯ ಎಸ್‌.ಅಂಗಾರ ಮತ್ತು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಾ.ಬಿ.ರಘು ಮಾತ್ರ ಠೇವಣಿ ಉಳಿಸಿಕೊಂಡಿದ್ದಾರೆ. ಬಹುಜನ ಸಮಾಜ ಪಕ್ಷದ ರಘು, ಪಕ್ಷೇತರರಾದ ಸುಂದರ ಕೆ., ಸಂಜೀವ್‌ ಬಾಬುರಾವ್ ಕುರಂಡ್ವಾಡ ಮತ್ತು ಚಂದ್ರಶೇಖರ ಕೆ.ಪಲ್ಲತ್ತಡ್ಕ ಠೇವಣಿ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.