ಮಂಗಳೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಪ್ರತಿ ಜಿಲ್ಲಾ ಪಂಚಾಯಿತಿ ಸದಸ್ಯರ ಕ್ಷೇತ್ರದಲ್ಲಿ ತಲಾ ಐದು ಬೋರ್‌ವೆಲ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. ಆದರೆ, ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಅಧಿಕಾರಿಗಳು ಸದಸ್ಯರ ಪ್ರಸ್ತಾವವನ್ನು ನಿರ್ದಾಕ್ಷಿಣ್ಯವಾಗಿ ತಳ್ಳಿಹಾಕಿದರು.
ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆದ 6ನೇ ಸಾಮಾನ್ಯ ಸಭೆಯಲ್ಲಿ `ಕೊಳವೆ ಬಾವಿ~ಗೆ ಬೇಡಿಕೆ ಕುರಿತು ಒಂದು ಗಂಟೆ ಚರ್ಚೆ ನಡೆಯಿತು. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಬೆಳಿಗ್ಗೆ ವೀರಾವೇಶದಿಂದ ಮಾತನಾಡಿದ ಸದಸ್ಯರು ಭೋಜನ ವಿರಾಮ ಬಳಿಕ ಈ ಸಮಸ್ಯೆ ಬಗ್ಗೆ ಸಣ್ಣದಾಗಿ ದನಿಯನ್ನೂ ಎತ್ತಲಿಲ್ಲ. ಮತ್ತೆ ವಿಷಯವನ್ನೇ ಪ್ರಸ್ತಾಪಿಸಲಿಲ್ಲ.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮೊದಲು ವಿಷಯ ಪ್ರಸ್ತಾಪಿಸಿದ ಸದಸ್ಯೆ ಮಮತಾ ಗಟ್ಟಿ, ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಏನಾದರೂ ಆದರೆ ಸಿಇಒ ಅವರೇ ನೇರ ಹೊಣೆ ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಟಾಸ್ಕ್‌ಪೋರ್ಸ್ ರಚಿಸಬೇಕು ಎಂದು ಗಮನ ಸೆಳೆದರು.
ತಮ್ಮ ಜಿ.ಪಂ. ಕ್ಷೇತ್ರದಲ್ಲಿ ಕೊಳವೆಬಾರಿ ಕೊರೆಸಲು ಅನುದಾನ ನೀಡಬೇಕು ಎಂದು ಸದಸ್ಯ ದೇವರಾಜ್ ಒತ್ತಾಯಿಸಿದರು. ಗ್ರಾಮಸಭೆಯಲ್ಲಿ ಜನರು ಈ ಬಗ್ಗೆಯೇ ಪ್ರಸ್ತಾಪಿಸುತ್ತಾರೆ. ಯಾವ ಉತ್ತರ ಕೊಡುವುದು ಎಂದು ಇತರೆ ಸದಸ್ಯರು ಪ್ರಶ್ನಿಸಿದರು.
ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಝೀರ್ ಮಾತನಾಡಿ, `2010-11ನೇ ಸಾಲಿನಲ್ಲಿ ಗ್ರಾಮೀಣ ಕುಡಿಯುವ ನೀರಿಗೆ ಕ್ರಿಯಾ ಯೋಜನೆಗೆ ಅನುಮತಿ ನೀಡಲು ಅವಕಾಶವಿತ್ತು. 2011-12ನೇ ಸಾಲಿನಲ್ಲಿ ಕೇಂದ್ರ ಮಾರ್ಗಸೂಚಿ ಪ್ರಕಾರ ಜಲಮೂಲ ಆನ್‌ಲೈನ್‌ನಲ್ಲಿ ದಾಖಲಾಗುತ್ತದೆ. ಅಲ್ಲಿ ಕಾಮಗಾರಿ ನಡೆಸಲು ರಾಜ್ಯ ಮಟ್ಟದಲ್ಲಿ ಅನುಮೋದನೆ ಸಿಗುತ್ತದೆ. ಜಿ.ಪಂ.ನಲ್ಲಿ ನಿರ್ಣಯ ಮಾಡಿ ಕಾಮಗಾರಿಗೆ ಅನುದಾನ ನೀಡುವುದು ಕಷ್ಟ~ ಎಂದರು.
ಜಿ.ಪಂ. ಸಿಇಒ ಕೆ.ಎನ್.ವಿಜಯ ಪ್ರಕಾಶ್ ಪ್ರತಿಕ್ರಿಯಿಸಿ, `ಕುಡಿಯುವ ನೀರಿನ ಸಮಸ್ಯೆ ಬಗ್ಗೆ ರೂ. 120 ಲಕ್ಷದ ಕ್ರಿಯಾ ಯೋಜನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರೂ. 60 ಲಕ್ಷ ಬಿಡುಗಡೆಯಾಗಿದ್ದು, ಪ್ರತಿ ಶಾಸಕರ ಕ್ಷೇತ್ರಕ್ಕೆ ರೂ. 8.75 ಲಕ್ಷ ಮೀಸಲಿಡಲಾಗಿದೆ.
ಹೆಚ್ಚುವರಿ ಅನುದಾನಕ್ಕೆ ಕಾರ್ಯನಿರ್ವಾಹಕ ಎಂಜಿನಿಯರ್ ಮೂಲಕ ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು~ ಎಂದು ಭರವಸೆ ನೀಡಿದರು.`ಹೆಚ್ಚುವರಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರಲ್ಲಿ ವಿನಂತಿಸಲಾಗುವುದು~ ಎಂದು ಜಿ.ಪಂ. ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್ ತಿಳಿಸಿದರು.
`ಪ್ರತಿ ಕ್ಷೇತ್ರದಲ್ಲಿ ಐದು ಬೋರ್‌ವೆಲ್ ನಿರ್ಮಾಣಕ್ಕೆ ಅನುದಾನ ನೀಡಬೇಕು~ ಎಂದು ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. `ಏಕಾಏಕಿ ಅನುದಾನ ನೀಡಬೇಕು ಎಂದರೆ ಮಾರ್ಗಸೂಚಿ ಪಲ್ಲಟ ಮಾಡಲು ಆಗುವುದಿಲ್ಲ.
ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ವಿಶೇಷ ಅನುದಾನಕ್ಕೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು~ ಎಂದು ವಿಜಯಪ್ರಕಾಶ್ ಭರವಸೆ ನೀಡಿದರೂ ಸದಸ್ಯರು ಒಪ್ಪಲಿಲ್ಲ.
`ಜನ ನಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಾರೆ. ದೃಢನಿರ್ಧಾರ ಕೈಗೊಳ್ಳಲೇಬೇಕು. ಇಲ್ಲದಿದ್ದರೆ ಧರಣಿ ನಡೆಸಲಾಗುವುದು~ ಎಂದು ಸದಸ್ಯ ಎಂ.ಎಸ್.ಮಹಮ್ಮದ್ ಎಚ್ಚರಿಸಿದರು.
`ಶಾಸಕರ ನೇತೃತ್ವದ ಟಾಸ್ಕ್‌ಪೋರ್ಸ್ ಕಾಟಾಚಾರಕ್ಕೆ. ಜಿಲ್ಲಾ ಪಂಚಾಯಿತಿ ನಿಯೋಗ ಜಿಲ್ಲಾಧಿಕಾರಿ ಬಳಿಗೆ ತೆರಳಿ ಮನವರಿಕೆ ಮಾಡಬೇಕು ಎಂದು ಕೇಶವ ಗೌಡ ಬಜತ್ತೂರು ಆಗ್ರಹಿಸಿದರು.
ಸದಸ್ಯರ ಟೀಕೆಯಿಂದ ಆಕ್ರೋಶಗೊಂಡ ಶಾಸಕ ರಮಾನಾಥ ರೈ, `ಟಾಸ್ಕ್‌ಪೋರ್ಸ್‌ಗೆ ಎಷ್ಟು ಹಣ ಕೊಟ್ಟಿದ್ದೀರಿ. 8 ಲಕ್ಷದಲ್ಲಿ ಯಾವ ಕೆಲಸ ಮಾಡಲು ಆಗುತ್ತದೆ~ ಎಂದು ಪ್ರಶ್ನಿಸಿದರು.
ಸಮಸ್ಯೆಯನ್ನೇ ಮರೆತರು: ಶಾಸಕ ಯು.ಟಿ. ಖಾದರ್ ಮಾತನಾಡಿ, `ಜಿ.ಪಂ. ಸದಸ್ಯರ ಸಲಹೆ ಸೂಚನೆ ಪಡೆದೇ ನಾವು ಅಂದಾಜುಪಟ್ಟಿ ಸಲ್ಲಿಸುತ್ತೇವೆ. ತಮ್ಮ ಕ್ಷೇತ್ರದಲ್ಲಿ ಪ್ರತಿ ಸದಸ್ಯರಿಗೆ ತಲಾ 3 ಕೊಳವೆಬಾವಿಗೆ ಅನುದಾನ ನೀಡಲಾಗುವುದು. ಪ್ರತಿ ಶಾಸಕರೂ ಅದೇ ಮಾದರಿ ಅನುಸರಿಸಲಿ~ ಎಂದು ಸಲಹೆ ನೀಡಿದರು.
ಊಟದ ವಿರಾಮದ ಬಳಿಕ ಚರ್ಚೆ ಮುಂದುವರಿಸೋಣ ಎಂದು ಅಧ್ಯಕ್ಷರು ತಿಳಿಸಿದರು. ಒಂದು ಗಂಟೆ ಬಳಿಕ ಸಭೆ ಪುನರಾರಂಭಗೊಂಡಾಗ ಸದಸ್ಯರು ಈ ಸಮಸ್ಯೆಯನ್ನೇ ಮರೆತುಬಿಟ್ಟರು!
ಸಭೆಯಲ್ಲಿ ಉಪಾಧ್ಯಕ್ಷೆ ಧನಲಕ್ಷ್ಮಿ ಜನಾರ್ದನ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜನಾರ್ದನ ಗೌಡ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಕಟೀಲು, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಮೇನಾಲ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವರಾಮೇಗೌಡ ಇದ್ದರು.
ಮಾಹಿತಿ ಸಮರದ `ಪ್ರತಿಷ್ಠೆ~!
ಕಾಂಗ್ರೆಸ್ ಸದಸ್ಯ ಎಂ.ಎಸ್.ಮಹಮ್ಮದ್ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಸಭೆಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಆಡಳಿತ ಹಾಗೂ ವಿರೋಧ ಪಕ್ಷ ಸದಸ್ಯರ ನಡುವೆ ಮಾತಿನ ಜಟಾಪಟಿಗೆ ಕಾರಣವಾಯಿತು.
`ಇಡೀ ಸಭೆಯಲ್ಲಿ ಒಬ್ಬರೇ ಸದಸ್ಯರು ಮಾತನಾಡುತ್ತಾರೆ~ ಎಂಬ ಆರೋಪಕ್ಕೂ ಕಾರಣವಾಯಿತು. ಈ ಹೇಳಿಕೆ ಮತ್ತೆ ಪುನಃ ಸಂಘರ್ಷಕ್ಕೆ ನಾಂದಿಯಾಯಿತು. ಬಂಟ್ವಾಳ ತಾಲ್ಲೂಕಿನಲ್ಲಿ ಈಗ 390 ಮಂದಿಗೆ ಸಾಮಾಜಿಕ ಭದ್ರತಾ ಯೋಜನೆಗಳ ವಿವಿಧ ವೇತನ ನೀಡಲಾಗಿದೆ. 400 ಮಂದಿಗೆ ಕೊಡಲು ವಿವಿಧ ವೇತನ ನೀಡಲು ಆದೇಶ ಬಂದಿದೆ~ ಎಂದು ಎಂ.ಎಸ್.ಮಹಮ್ಮದ್ ಮಾಹಿತಿ ನೀಡಿದರು.
`ಬಂಟ್ವಾಳ ತಾಲ್ಲೂಕಿನಲ್ಲಿ ಈ ಯೋಜನಯಡಿ ರೂ. 1.20 ಕೋಟಿ ವಿನಿಯೋಗಿಸಲಾಗಿದೆ. ಸದಸ್ಯರು ತಪ್ಪು ಮಾಹಿತಿ ನೀಡಿದ್ದಾರೆ~ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು.
ತಹಸೀಲ್ದಾರ್ ಈ ಯೋಜನೆಗಳ ಪ್ರಗತಿ ಬಗ್ಗೆ ಮಾಹಿತಿ ಒದಗಿಸಿದ ಬಳಿಕವೂ ಆರೋಪ- ಪ್ರತ್ಯಾರೋಪ ಮುಂದುವರಿಯಿತು. ಮಹಮ್ಮದ್ ತಪ್ಪು ಮಾಹಿತಿ ನೀಡಿಲ್ಲ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದಾಗ ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟಿ ಸಂತಸ ವ್ಯಕ್ತಪಡಿಸಿದರು.
ಕೊರಗರ ಸಮಸ್ಯೆಗೆ ನೋಡಲ್ ಅಧಿಕಾರಿ
ಶಿಕ್ಷಣ, ಆರೋಗ್ಯ, ಮಹಿಳಾ ಯೋಜನೆಗಳ ಲಾಭ ಕೊರಗರಿಗೆ ದೊರಕಬೇಕು. ಮೂರು ತಿಂಗಳ ಮಾಸ್ಟರ್ ಪ್ಲಾನ್ ರೂಪಿಸಲಾಗಿದ್ದು, ಪ್ರತಿ ತಾಲ್ಲೂಕಿನಲ್ಲಿ ಸಹಾಯಕ ನಿರ್ದೇಶಕ ನೋಡೆಲ್ ಅಧಿಕಾರಿಯಾಗಿರುವರು ಎಂದು ಸಿಇಒ ಕೆ.ಎನ್. ವಿಜಯಪ್ರಕಾಶ್ ತಿಳಿಸಿದರು.
ಕೊರಗರ ಅಭಿವೃದ್ಧಿಗೆ ಜಿ.ಪಂ. ಬದ್ಧ. ಕೊರಗ ಆರೋಗ್ಯ ಮೇಳ ಒಂದು ದಿನಕ್ಕೆ ಸೀಮಿತ ಆಗಬಾರದು. ಅವರ ಪ್ರಗತಿಗೆ ನಿರಂತರ ಗಮನ ಹರಿಸಬೇಕು. ಕೊರಗ ಮಕ್ಕಳು ಶಾಲೆ ತ್ಯಜಿಸುತ್ತಿರುವುದು ಹೆಚ್ಚಿದೆ. ಈ ನಿಟ್ಟಿನಲ್ಲಿ ಪೋಷಕರಿಗೆ ಕೌನ್ಸೆಲಿಂಗ್ ನಡೆಸಿ ಅವರನ್ನು ಪ್ರೇರೇಪಿಸಲಾಗುವುದು. ಆರೋಗ್ಯ, ಶಿಕ್ಷಣ ಸೇರಿ 4 ಇಲಾಖೆಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು~ ಎಂದರು.
ಕೊಳವಿ ಬಾವಿ ಲಾಬಿ!
`ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಸದಸ್ಯರು ಹೇಳುವಷ್ಟು ನೀರಿನ ಸಮಸ್ಯೆ ಗಂಭೀರವಾಗಿಲ್ಲ. ಇದೊಂದು ಲಾಬಿ~ ಎಂದು ಜಿ.ಪಂ. ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದರು.
`ನೀರಿನ ಸಮಸ್ಯೆ ನಿವಾರಣೆಗೆ ಕಾಲಕಾಲಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ತುರ್ತು ಪ್ರದೇಶಗಳಿಗೆ ಶಾಸಕರು, ಸದಸ್ಯರ ಸೂಚನೆ ಮೇರೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಬೋರ್‌ವೆಲ್ ಬೇಡಿಕೆ ಹಿಂದೆ ಬೇರೆ ಹಿತಾಸಕ್ತಿಗಳಿವೆ. ಈಗ ನೀರಿನ ಸಮಸ್ಯೆ ಬಗ್ಗೆ ಕೂಗುವ ಬದಲು ಶಾಶ್ವತ ಯೋಜನೆಗಳ ಬಗ್ಗೆ ಗಮನ ಹರಿಸಿದರೆ ಉತ್ತಮ. ಈ ಬಗ್ಗೆ ಯಾರೂ ಮಾತನಾಡುವುದಿಲ್ಲ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.
`ಸದಸ್ಯರ ಒತ್ತಡಕ್ಕೆ ಮಣಿದು ಬೋರ್‌ವೆಲ್‌ಗೆ ಏಕಾಏಕಿ ಮಂಜೂರಾತಿ ನೀಡಿದರೆ ಅಧಿಕಾರಿಗಳು ಜೈಲಿಗೆ ಹೋಗಬೇಕಾದೀತು. ಕಾನೂನಿನ ಬಗ್ಗೆ ಅರಿವಿಲ್ಲದೆ ಬೇಡಿಕೆ ಮುಂದಿಟ್ಟರೆ ಈಡೇರಿಸುವುದು ಹೇಗೆ~ ಎಂದು ಅವರು ಪ್ರಶ್ನಿಸಿದರು.
ಕಂದಾಯ ವಿಶೇಷ ಸಭೆಗೆ ಆಗ್ರಹ
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಂದಾಯ ಇಲಾಖೆ ಸಮಸ್ಯೆಗಳ ಬಗ್ಗೆ ವಿಶೇಷ ಸಭೆ ಕರೆಯದಿರುವ ಬಗ್ಗೆ ಸದಸ್ಯರು ಅತೃಪ್ತಿ ವ್ಯಕ್ತಪಡಿಸಿದರು.
`ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆಯಬೇಕು ಎಂದು ನಿರ್ಧರಿಸಿ ಎರಡು ತಿಂಗಳೇ ಕಳೆದವು. ಸಭೆ ಈವರೆಗೂ ಆಗಿಲ್ಲ. ಜಿ.ಪಂ. ಸದಸ್ಯರ ಬೇಡಿಕೆಗೆ ಅರ್ಧ ದಿನ ಮೀಸಲಿಡುವಷ್ಟು ಸೌಜನ್ಯ ಜಿಲ್ಲಾಧಿಕಾರಿಗೆ ಇಲ್ಲ~ ಎಂದು ಸದಸ್ಯ ಎಂ.ಎಸ್.ಮಹಮ್ಮದ್ ಕಿಡಿಕಾರಿದರು.
`ಜಿಲ್ಲಾಧಿಕಾರಿ 10 ದಿನ ರಜೆಯಲ್ಲಿದ್ದಾರೆ. ಅವರು ಬಂದ ಬಳಿಕ ಸಮಾಲೋಚಿಸಿ ಸಭೆ ನಿಗದಿಪಡಿಸಲಾಗುವುದು~ ಎಂದು ಸಿಒಇ ವಿಜಯಪ್ರಕಾಶ್ ಭರವಸೆ ನೀಡಿದರು.
`10ದಿನಗಳಿಂದ ರಜೆಯಲ್ಲಿರಬಹುದು. ಅದಕ್ಕೂ ಹಿಂದೆ ಏಕೆ ಸಭೆ ಮಾಡಲಿಲ್ಲ. ಪಡಿತರ ಚೀಟಿ, ಆರ್‌ಟಿಸಿ, ರುದ್ರಭೂಮಿ ಸೇರಿದಂತೆ ಕಂದಾಯ ಇಲಾಖೆಯ ನೂರಾರು ಸಮಸ್ಯೆಗಳು ಇವೆ~ ಎಂದು ಮಮತಾ ಗಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
`ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳು ಸಭೆಗೆ ಆಗಮಿಸಿ ಮಾಹಿತಿ ನೀಡಬೇಕು~ ಎಂದು ಸದಸ್ಯ ಚೆನ್ನಪ್ಪ ಕೋಟ್ಯಾನ್ ಆಗ್ರಹಿಸಿದರು.
`ಕೊರಗರ ಮತಾಂತರ~
ಸುಳ್ಯ ತಾಲ್ಲೂಕಿನ ಕಲ್ಲೋಡಿಯಲ್ಲಿ 10 ಕೊರಗ ಕುಟುಂಬಗಳು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿವೆ. ಈ ಕುಟುಂಬಗಳು ಮೂಲ ಸೌಕರ್ಯ ದೊರಕದೆ ಸಮಸ್ಯೆ ಎದುರಿಸುತ್ತಿದ್ದವು ಎಂದು ಆಶಾ ತಿಮ್ಮಪ್ಪ ಗೌಡ ಗಮನ ಸೆಳೆದರು.
`ಕೊರಗರನ್ನು ಬಲವಂತದಿಂದ ಮತಾಂತರ ಮಾಡಲಾಗುತ್ತಿದೆ. ಅವರಿಗೆ ಸರ್ಕಾರಿ ಸವಲತ್ತು ಸಿಗುತ್ತಿಲ್ಲ. ಮತಾಂತರದ ಹಿಂದಿರುವ ಶಕ್ತಿಗಳ ವಿರುದ್ಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು~ ಎಂದು ಸದಸ್ಯ ಫಕೀರ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.