ADVERTISEMENT

ದ.ಕ. 10 ಕಡೆ ನೀರಿನಲ್ಲಿ ಫ್ಲೋರೈಡ್ ಅಂಶ ಪತ್ತೆ

ಪ್ರವೀಣ್ ಪಾಡಿಗಾರ್
Published 16 ಜುಲೈ 2012, 8:00 IST
Last Updated 16 ಜುಲೈ 2012, 8:00 IST
ದ.ಕ. 10 ಕಡೆ ನೀರಿನಲ್ಲಿ ಫ್ಲೋರೈಡ್ ಅಂಶ ಪತ್ತೆ
ದ.ಕ. 10 ಕಡೆ ನೀರಿನಲ್ಲಿ ಫ್ಲೋರೈಡ್ ಅಂಶ ಪತ್ತೆ   

ಮಂಗಳೂರು: ಯಥೇಚ್ಛ ಮಳೆಯಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹತ್ತು ಕಡೆ ಕುಡಿಯುವ ನೀರಿನ ಅಂತರ್ಜಲ ಮೂಲದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಫ್ಲೋರೈಡ್ ಅಂಶ ಇರುವುದು ಪತ್ತೆಯಾಗಿದೆ. ರಾಜ್ಯದ ಬಯಲು ಸೀಮೆ ಜಿಲ್ಲೆಗಳಾದ ಬಾಗಲಕೋಟೆ, ಕೋಲಾರ, ಬೀದರ್, ವಿಜಾಪುರ, ಹಾವೇರಿ ಮೊದಲಾದ ಪ್ರದೇಶಗಳಲ್ಲಿ ಮಾತ್ರ ಕಂಡುಬರುತಿದ್ದ ಫ್ಲೋರೈಡ್ ಸಮಸ್ಯೆ ಜಿಲ್ಲೆಯಲ್ಲೂ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದ ವರ್ಷ ಉಪ್ಪಿನಂಗಡಿ ಗ್ರಾಮದ ನಟ್ಟಿಬೈಲ್ ಎಂಬಲ್ಲಿ ಮಳೆಗಾಲದ ಬಳಿಕ ನೀರು ಪರೀಕ್ಷೆ ನಡೆಸಿದಾಗ ಮೊದಲ ಬಾರಿ ಕುಡಿಯುವ ನೀರಿನ ಮೂಲವೊಂದರಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್ ಇದ್ದುದು ಪತ್ತೆಯಾಗಿತ್ತು. ಈ ಬಾರಿ ಮಳೆಗಾಲಕ್ಕೆ ಮುನ್ನ ಜಿಲ್ಲೆಯಾದ್ಯಂತ ನಡೆಸಲಾದ ಕುಡಿಯುವ ನೀರಿನ ಪರೀಕ್ಷೆಯಲ್ಲಿ ಒಟ್ಟು 10 ಕಡೆ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಿರುವುದು ಬೆಳಕಿಗೆ ಬಂದಿದೆ.

`ಪುತ್ತೂರು ತಾಲ್ಲೂಕಿನ ಕುಟ್ರುಪ್ಪಾಡಿ ಗ್ರಾಮದಲ್ಲಿ ಆರು ಕಡೆ ಹಾಗೂ ಹಿರೆಬಂಡಾಡಿ ಗ್ರಾಮದಲ್ಲಿ ನಾಲ್ಕು ಕಡೆ ಕುಡಿಯುವ ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್ ಅಂಶ ಕಂಡುಬಂದಿದೆ. ಅದಲ್ಲದೆ, ಜಿಲ್ಲೆಯ ಏಳು ಕಡೆ ನೀರಿನಲ್ಲಿ ಫ್ಲೋರೈಡ್ ಸೇರಿಕೊಂಡಿರುವ ಲವಣಾಂಶಗಳು ಪತ್ತೆಯಾಗಿವೆ. ಐದು ಕಡೆ ಫೋರೈಡ್‌ರಹಿತ ಲವಣಾಂಶಗಳು ಪತ್ತೆಯಾಗಿವೆ~ ಎಂದು ಹಿರಿಯ ಭೂವಿಜ್ಞಾನಿ ಶಿವಣ್ಣ ಅವರು `ಪ್ರಜಾವಾಣಿ~ಗೆ ತಿಳಿಸಿದರು.

`ಈ ಬಾರಿ ಗ್ರಾಮ ಮಟ್ಟದ ಅಧಿಕಾರಿಗಳೇ ನೀರಿನ ಪರೀಕ್ಷೆ ನಡೆಸಿದ್ದಾರೆ. ಹಾಗಾಗಿ ಫ್ಲೋರೈಡ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಬೇಕಾಗಿದೆ. ಆದರೆ ಈಗ ಮಳೆಯಾಗಿರುವುದರಿಂದ ನೀರಿನಲ್ಲಿರುವ ಫ್ಲೋರೈಡ್ ಪ್ರಮಾಣ ಕಡಿಮೆಯಾಗುತ್ತದೆ. ಮಳೆಗಾಲ ಮುಗಿದ ಬಳಿಕ ಫ್ಲೋರೈಡ್ ಅಂಶ ಹೆಚ್ಚಿರುವ ನೀರಿನ ಮಾದರಿಗಳನ್ನು ತರಿಸಿ ಪರೀಕ್ಷಿಸುತ್ತೇವೆ~ ಎಂದು ಅವರು ತಿಳಿಸಿದರು.

`ಕುಡಿಯುವ ನೀರಿನಲ್ಲಿ 1.5 ಪಿಪಿಎಂಗಿಂತ  ಹೆಚ್ಚು ಫ್ಲೋರೈಡ್ ಇರುವುದು ಅಪಾಯಕಾರಿ. ಕುಡಿಯುವ ನೀರಿನಲ್ಲಿ ನೈಸರ್ಗಿಕವಾಗಿ ಕರಗಿರುವ ಇತರ ಅಕಾರ್ಬನಿಕ ಲವಣಾಂಶಗಳು ಫ್ಲೋರೈಡ್‌ನಷ್ಟು ಅಪಾಯಕಾರಿ ಅಲ್ಲ. ಫ್ಲೋರೈಡ್ ಅನ್ನು ದೇಹದ ಅಂಗಾಂಶಗಳು ಬೇಗನೆ ಹೀರಿಕೊಳ್ಳುತ್ತವೆ. ಅದು ಕ್ಷಿಪ್ರಗತಿಯಲ್ಲಿ ದೇಹದಾದ್ಯಂತ ಪಸರಿಸುತ್ತದೆ. ಮೂಳೆಗಳಲ್ಲಿ ಹಾಗೂ ಹಲ್ಲಿನಲ್ಲಿ ಫೋರೈಡ್ ಅಂಶ ಹಾಗೆಯೇ ಉಳಿದುಕೊಂಡು ಮೂಳೆ ಸವಕಳಿ (ಫ್ಲೋರೋಸಿಸ್) ಹಾಗೂ ದಂತ ಕ್ಷಯಕ್ಕೆ ಕಾರಣವಾಗುತ್ತದೆ.
 
ಫ್ಲೋರೈಡ್‌ಭರಿತ ನೀರಿನ ಸೇವನೆಯಿಂದ ಮಕ್ಕಳು ಸುಲಭವಾಗಿ ದಂತ ಕ್ಷಯ ಬಾಧೆಗೆ ತುತ್ತಾಗುತ್ತಾರೆ. ಫ್ಲೋರೈಡ್ ಅಂಶ ತೀರಾ ಹೆಚ್ಚು ಇರುವ ನೀರಿನ ಸೇವನೆಯಿಂದ ಇತರ ಆರೋಗ್ಯ ಸಂಬಂಧಿ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಬೆನ್ನು ಸೆಟೆದುಕೊಳ್ಳುವುದಲ್ಲದೇ ಕೈಕಾಲುಗಳ ಸಹಜ ಚಲನೆಯ ಮೇಲೂ ಪರಿಣಾಮ ಬೀರುತ್ತದೆ. ವಾಂತಿ, ಮಲದಲ್ಲಿ ರಕ್ತದ ಕಣಗಳು ಕಾಣಿಸಿಕೊಳ್ಳುವುದು, ಹೊಟ್ಟೆನುಲಿತ, ನಿಶಕ್ತಿ ಉಂಟಾಗುತ್ತದೆ. ಅತಿಯಾದ ಫ್ಲೋರೈಡ್ ಸೇವನೆಯಿಂದ ಪಿತ್ತಕೋಶ ಹಾಗೂ ಹೃದಯದ ಸ್ನಾಯುಗಳ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ~ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ರಾಜೇಶ್.

`ನೀರಿನಲ್ಲಿ ಫ್ಲೋರೈಡ್ ಪ್ರಮಾಣ ತಗ್ಗಿಸಲು ಅನೇಕ ಮಾರ್ಗೋಪಾಯಗಳಿವೆ. ಕುಡಿಯುವ ನೀರಿನಲ್ಲಿರುವ ಫ್ಲೋರೈಡ್ ಸೋಸುವ ಯಂತ್ರಗಳೂ ಲಭ್ಯ. ಅಂತರ್ಜಲ ಮರುಪೂರಣ, ಫೋರೈಡ್ ನಿರ್ಮೂಲನಾ ಘಟಕಗಳ ಮೂಲಕವೂ ನೀರಿನಲ್ಲಿ ಫ್ಲೋರೈಡ್ ಪ್ರಮಾಣವನ್ನು ತಗ್ಗಿಸಬಹುದು. ಕ್ಯಾಲ್ಷಿಯಂ ಪ್ರಮಾಣ ಹೆಚ್ಚು ಇರುವ ಆಹಾರ ಪದಾರ್ಥಗಳ ಸೇವನೆಯಿಂದ ಫ್ಲೋರೈಡ್‌ನಿಂದ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು~ ಎನ್ನುತ್ತಾರೆ ಅವರು.

464 ಜಲ ಮೂಲ ಕಲುಷಿತ

`ಕಳೆದ ಮೇ ತಿಂಗಳಲ್ಲಿ ಜಿಲ್ಲೆಯಾದ್ಯಂತ ಒಟ್ಟು 4395 ನೀರಿನ ಮೂಲಗಳನ್ನು ಪರಿಶೀಲಿಸಲಾಗಿದ್ದು, ಒಟ್ಟು 464 ನೀರಿನ ಮೂಲಗಳು ಕಲುಷಿತಗೊಂಡಿರುವುದು ಪತ್ತೆಯಾಗಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ 19, ಸುಳ್ಯ ತಾಲ್ಲೂಕಿನಲ್ಲಿ 1, ಪುತ್ತೂರು ತಾಲ್ಲೂಕಿನಲ್ಲಿ 117, ಮಂಗಳೂರು ತಾಲ್ಲೂಕಿನಲ್ಲಿ 283 ಹಾಗೂ ಬಂಟ್ವಾಳ ತಾಲ್ಲೂಕಿನ 49 ಕುಡಿಯುವ ನೀರಿನ ಮೂಲಗಳು ಕಲುಷಿತಗೊಂಡಿವೆ.
 
ಈ ನೀರಿನ ಮೂಲಗಳಲ್ಲಿ ಕ್ಲೋರೈಡ್, ಫ್ಲೋರೈಡ್, ಕಬ್ಬಿಣ, ನೈಟ್ರೇಟ್, ಸಲ್ಪೇಟ್, ಸೀಸ, ಮೊದಲಾದ ಲವಣಾಂಶಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಪತ್ತೆಯಾಗಿದೆ. ಕೆಲವೆಡೆ ನೀರಿನ ಪಿ.ಎಚ್. ಮೌಲ್ಯದಲ್ಲಿ ವ್ಯತ್ಯಯವಿದೆ~ ಎಂದು ಶಿವಣ್ಣ ತಿಳಿಸಿದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.