ADVERTISEMENT

ದುರ್ಗಂಧಮಯವಾದ ಬದಿಯಡ್ಕ ಪೇಟೆ

ಇನ್ನೂ ನಡೆಯದ ತ್ಯಾಜ್ಯ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 12:36 IST
Last Updated 2 ಆಗಸ್ಟ್ 2013, 12:36 IST

ಬದಿಯಡ್ಕ: ಇಲ್ಲಿನ ಬಸ್ ನಿಲ್ದಾಣ, ದೂರವಾಣಿ ಕೇಂದ್ರ ಹಾಗೂ ಸಂತೆಕಟ್ಟೆಯ ಪರಿಸರದಲ್ಲಿ ತ್ಯಾಜ್ಯಗಳ ರಾಶಿಯಿಂದಾಗಿ ಬದಿಯಡ್ಕ ಪೇಟೆಯೇ ದುರ್ಗಂಧಮಯವಾಗಿದೆ. ಮಳೆಯ ಸಂದರ್ಭದಲ್ಲಿ ತ್ಯಾಜ್ಯ ಮಳೆ ನೀರಿನೊಂದಿಗೆ ಹರಿದು ಬರುವುದರಿಂದ ಸಾರ್ವಜನಿಕರಿಗೆ ಕಾಲ್ನಡಿಗೆಗೂ ಹೇಸಿಗೆಯಾಗುತ್ತಿದೆ.

ದಿನವಿಡೀ ಗಬ್ಬು ವಾಸನೆಯಿಂದ ತುಂಬಿರುವ ಬದಿಯಡ್ಕ ಬಸ್‌ನಿಲ್ದಾಣ ಪರಿಸರದಲ್ಲಿ ಶುಚಿತ್ವದ ಕೊರತೆ ಇದೆ. ಪ್ರತಿದಿನ ವಿವಿಧ ಪ್ರದೇಶಗಳಿಂದ ಸಾವಿರಾರು ಪ್ರಯಾಣಿಕರು ಸೇರುವ ಬದಿಯಡ್ಕ ಸಾರ್ವಜನಿಕ ಬಸ್ ನಿಲ್ದಾಣದ ಹಿಂಭಾಗದಲ್ಲಿ ಭಾರೀ ತ್ಯಾಜ್ಯ ಸಂಗ್ರಹವಾಗಿದೆ. ಇದು ಸಾಂಕಾಮಿಕ ರೋಗಕ್ಕೂ ಕಾರಣವಾಗಬಹುದೆಂದು ನಾಗರಿಕರು ಆತಂಕ ವ್ಯಕ್ತಪಡಿಸುತ್ತಾರೆ.

ಬದಿಯಡ್ಕ ಬಸ್ ನಿಲ್ದಾಣದಲ್ಲಿರುವ ಶೌಚಾಲಯವೂ ಶುಚಿಯಾಗಿಲ್ಲ. ಪ್ಲಾಸ್ಟಿಕ್ ಚೀಲಗಳಲ್ಲಿ ಕೊಳೆತ ವಸ್ತುಗಳು, ಹಳಸಿದ ಆಹಾರ ಪದಾರ್ಥಗಳನ್ನು ಈ ತ್ಯಾಜ್ಯದ ರಾಶಿಯಲ್ಲಿ ಬೇಕಾಬಿಟ್ಟಿಯಾಗಿ ಚೆಲ್ಲಲಾಗಿದೆ. ಈ ಆಹಾರ ವಸ್ತುಗಳಿಗಾಗಿ ಜಾನುವಾರುಗಳು ಹಾಗೂ ನಾಯಿಗಳು ಕಚ್ಚಾಡುತ್ತಾ, ಕೆದಕುತ್ತಾ ತ್ಯಾಜ್ಯ ರಾಶಿಯ ಅಪಾಯದ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಅತಿಯಾದ ಮಳೆಯಿಂದಾಗಿ ಸಾರ್ವತ್ರಿಕವಾಗಿ ಮಲೇರಿಯ, ಡೆಂಗೆ ಮೊದಲಾದ ರೋಗಗಳು ವ್ಯಾಪಿಸುತ್ತಿರುವಾಗ ಬದಿಯಡ್ಕ ಗ್ರಾಪಂ ಆಡಳಿತ ಸಮಿತಿ ತ್ಯಾಜ್ಯ ತೆರವಿಗೆ ಸೂಕ್ತ ವ್ಯವಸ್ಥೆ ಮಾಡದಿರುವ ಬಗ್ಗೆ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಬದಿಯಡ್ಕ ಬಸ್ ನಿಲ್ದಾಣದ ಒಳಭಾಗದಲ್ಲೂ ಕೂಡಾ ಭಾರೀ ಪ್ರಮಾಣದ ಕಸಕಡ್ಡಿ ಶೇಖರಣೆಯಾಗಿದ್ದು, ಬಸ್ ನಿಲ್ದಾಣದ ಒಳಗಿನ ಕಲ್ಲುಬೆಂಚುಗಳೂ ಶುಚಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.