ADVERTISEMENT

ದೇವಸ್ಥಾನಗಳಲ್ಲಿ ಶುಚಿತ್ವ, ಬಂದರು ಅಭಿವೃದ್ಧಿ: ಕೋಟ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 9:05 IST
Last Updated 18 ಜುಲೈ 2012, 9:05 IST

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ದೇವಸ್ಥಾನಗಳು ಪಾವಿತ್ರ್ಯದ ಜತೆಗೆ ಶುಚಿತ್ವ ಕಾಪಾಡಿಕೊಂಡು ಗಮನ ಸೆಳೆದಿವೆ. ಇದೇ ವಾತಾವರಣವನ್ನು ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಗುರಿ ತಮ್ಮದು ಎಂದು ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ನೂತನ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸಚಿವರಾದ ಬಳಿಕ ಇದೇ ಪ್ರಥಮ ಬಾರಿಗೆ ಮಂಗಳವಾರ ಜಿಲ್ಲೆಗೆ ಆಗಮಿಸಿದ ಅವರಿಗೆ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ನೀಡಲಾದ ಭವ್ಯ ಸ್ವಾಗತ ಮತ್ತು ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿದ ಅವರು, ಮಡೆಸ್ನಾನ ವಿಚಾರದಲ್ಲಿ ಸರ್ಕಾರ ಯಾವುದೇ ಆತುರದ ಕ್ರಮ ಕೈಗೊಳ್ಳುವುದಿಲ್ಲ. ಎಲ್ಲರ ಅಭಿಪ್ರಾಯಗಳನ್ನು ಪಡೆದುಕೊಂಡು ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.

ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ರಾಜ್ಯದ 36 ಸಾವಿರ ದೇವಸ್ಥಾನಗಳಲ್ಲಿ ಜೀರ್ಣೋದ್ಧಾರ ಸಹಿತ ಇತರ ಪೂಜೆ ಮತ್ತು ಅಭಿವೃದ್ಧಿ ಕಾರ್ಯಗಳು ಭಕ್ತರಿಂದಲೇ ನಡೆಯಬೇಕು ಎಂಬ ಚಿಂತನೆಯೊಂದಿಗೆ ಡಾ.ವಿ.ಎಸ್.ಆಚಾರ್ಯ ಅವರು ಧಾರ್ಮಿಕ ದತ್ತಿ ಮಸೂದೆ ಜಾರಿಗೆ ಬರುವಂತೆ ಮಾಡಿದ್ದರು. ಅವರ ಆಶಯದಂತೆ ನಡೆದುಕೊಳ್ಳಲಾಗುವುದು. ದೇವಸ್ಥಾನಗಳಲ್ಲಿ ಶುಚಿತ್ವ ಕಾಪಾಡುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದರು.

ರಾಜ್ಯದ ಬಂದರುಗಳ ಸುಧಾರಣೆಗೆ, ಮೀನುಗಾರಿಕಾ ಬಂದರುಗಳಲ್ಲಿನ ಹೂಳೆತ್ತುವಂತಹ ಕಾರ್ಯಗಳಿಗೆ ಗಮನ ಹರಿಸಲಾಗುವುದು. ಇರುವ ಅವಧಿಯೊಳಗೆ ಒಂದಿಷ್ಟು ಒಳ್ಳೆಯ ಕೆಲಸ ಮಾಡುವ ಆಶಯ ತಮ್ಮದು ಎಂದರು.

`ನನಗೆ ಇಂತದ್ದೇ ಖಾತೆ ನೀಡಬೇಕೆಂದು ಕೇಳಿದವ ನಾನಲ್ಲ. ಧಾರ್ಮಿಕ ದತ್ತಿ ಖಾತೆ ನೀಡಿದ ಬಳಿಕ ನನಗೆ ಯಾಕಾಗಿ ಈ ಖಾತೆ ನೀಡಿದ್ದೀರಿ ಎಂದು ಪಕ್ಷದ ನಾಯಕರನ್ನು ಕೇಳಿದೆ. ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಹಲವಾರು ದೇವಸ್ಥಾನಗಳಿವೆ, ಅವುಗಳು ಶುಚಿತ್ವಕ್ಕೆ ವಿಶೇಷ ಗಮನ ಹರಿಸಿವೆ.

ಇದೇ ರೀತಿಯ ವಾತಾವರಣವನ್ನು ರಾಜ್ಯದ ಇತರ ಭಾಗಗಳಲ್ಲಿನ ದೇವಸ್ಥಾನಗಳಲ್ಲೂ ಉಂಟುಮಾಡಬೇಕು ಎಂಬ ಕಾರಣಕ್ಕೆ ನಿಮಗೆ ಈ ಹೊಣೆ ಹೊರಿಸಿದ್ದೇವೆ ಎಂಬ ಉತ್ತರ ಅವರಿಂದ ಬಂದಿದೆ. ಅವರ ಆಶಯಕ್ಕೆ ತಕ್ಕಂತೆ ನಾನು ಕೆಲಸ ಮಾಡುತ್ತೇನೆ~ ಎಂದು ಕೋಟ ಅವರು ತಿಳಿಸಿದರು.

`ನಾನು ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದವನು. ನಿರ್ದಿಷ್ಟ ಸ್ಥಾನಗಳಿಗಾಗಿ ಆಸೆಪಟ್ಟವನಲ್ಲ. ಆದರೂ ಪಕ್ಷದ ನಾಯಕರು ವಿಶ್ವಾಸ ಇಟ್ಟು ನನ್ನನ್ನು ಸಚಿವರನ್ನಾಗಿ ಮಾಡಿದ್ದಾರೆ, ಮೋನಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದಾರೆ. ಪಕ್ಷದ ಸಾಮಾನ್ಯ ಕಾರ್ಯಕರ್ತನೂ ಉನ್ನತ ಸ್ಥಾನಕ್ಕೆ ಏರಬಲ್ಲ ಎಂಬುದಕ್ಕೆ ನಾವೇ ಸಾಕ್ಷಿಗಳು~ ಎಂದು ಸಚಿವರು ತಿಳಿಸಿದರು.

ಡಾ.ವಿ.ಎಸ್.ಆಚಾರ್ಯ ಅವರ ನಿಧನದಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಇದೀಗ ಅವಿರೋಧವಾಗಿ ಆಯ್ಕೆಯಾಗಿರುವ ಕೆ.ಮೋನಪ್ಪ ಭಂಡಾರಿ ಅವರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ಸಂಘದ, ಜನಸಂಘದ ಕಾರ್ಯಕರ್ತನಾಗಿ ದುಡಿದ ತಮ್ಮ ಸೇವೆಯನ್ನು ಪಕ್ಷ ಇಂದು ಗುರುತಿಸಿದೆ.

ಈ ಮೊದಲು ವಿಧಾನ ಪರಿಷತ್ ಚುನಾವಣೆಯಲ್ಲಿ ಸೋತಾಗ, ಮತ್ತೊಮ್ಮೆ ಸ್ಪರ್ಧಿಸುವ ಅವಕಾಶ ತಪ್ಪಿದಾಗ ಹತಾಶೆಗೊಂಡಿರಲಿಲ್ಲ. ಈಗಲೂ ಅಷ್ಟೇ, ತಾವು ಪಕ್ಷದ ಸಾಮಾನ್ಯ ಕಾರ್ಯಕರ್ತನೇ ಹೊರತು ಬೇರೇನಲ್ಲ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೋಟ ಶ್ರೀನಿವಾಸ ಪೂಜಾರಿ ಅವರ ಬಗ್ಗೆ ಮತ್ತು ವಿಧಾನಸಭೆ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಅವರು ಮೋನಪ್ಪ ಭಂಡಾರಿ ಅವರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಇಬ್ಬರನ್ನೂ ಅಭಿನಂದಿಸಿದರು. ವಿಧಾನ ಪರಿಷತ್ ಗಣೇಶ್ ಕಾರ್ಣಿಕ್, ಶಾಸಕಿ ಮಲ್ಲಿಕಾ ಪ್ರಸಾದ್, ಪಕ್ಷದ ನಾಯಕರಾದ ನಿತಿನ್ ಕುಮಾರ್, ಉಮಾನಾಥ ಎ.ಕೋಟ್ಯಾನ್, ಎಸ್.ರಮೇಶ್, ಅಮಿತಕಲಾ ಇತರರು ಇದ್ದರು.

ಮಂಗಳವಾರ ಬೆಳಿಗ್ಗೆ ಕದ್ರಿ ದೇವಸ್ಥಾನಕ್ಕೆ ಆಗಮಿಸಿದ ಶಾಂತಾ-ಕೋಟ ಶ್ರೀನಿವಾಸ ಪೂಜಾರಿ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬಿಜೆಪಿ ಕಚೇರಿಗೆ ಬಂದ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಪಟಾಕಿ ಸದ್ದು ಕಿವಿಗಡಚಿಕ್ಕುವಂತಿತ್ತು. ಬ್ಯಾಂಡ್ ಸೆಟ್, ಗೊಂಬೆ ಬಳಗದ ವೈಭವ ಗಮನ ಸೆಳೆಯಿತು.
 
ಬಳಿಕ ಕೋಟ, ಮೋನಪ್ಪ ಭಂಡಾರಿ ಅವರು ಸಂಘನಿಕೇತನಕ್ಕೆ ತೆರಳಿ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ಗರೋಡಿ ಬೈದರ್ಕಳ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.