ADVERTISEMENT

ಪುರಸಭೆಯಲ್ಲಿ ಜೀತಪದ್ಧತಿ ನಾಚಿಕೆಗೇಡು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 5:35 IST
Last Updated 15 ಡಿಸೆಂಬರ್ 2017, 5:35 IST
ಬಂಟ್ವಾಳ ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷ (ಬಿಜೆಪಿ) ಸದಸ್ಯ ಬಿ.ದೇವದಾಸ ಶೆಟ್ಟಿ ಮಾತನಾಡಿದರು. ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಮತ್ತಿತರರು ಇದ್ದಾರೆ.
ಬಂಟ್ವಾಳ ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷ (ಬಿಜೆಪಿ) ಸದಸ್ಯ ಬಿ.ದೇವದಾಸ ಶೆಟ್ಟಿ ಮಾತನಾಡಿದರು. ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಮತ್ತಿತರರು ಇದ್ದಾರೆ.   

ಬಂಟ್ವಾಳ: ಇಲ್ಲಿನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪ್ರತೀ ತಿಂಗಳು ₹6ಲಕ್ಷ ಖರ್ಚು ಮಾಡಲಾಗುತ್ತಿದ್ದು, ಗುತ್ತಿಗೆದಾರರು ಪುರಸಭೆ ಹೆಸರಿನಲ್ಲಿ ರಶೀದಿ ವಿತರಿಸಿ ಮತ್ತೆ ₹3 ಲಕ್ಷದಷ್ಟು ಮನೆಗಳಿಂದ ವಸೂಲಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರಾದ ಬಿ.ದೇವದಾಸ ಶೆಟ್ಟಿ ಮತ್ತು ಎ.ಗೋವಿಂದ ಪ್ರಭು ಆರೋಪಿಸಿದರು.

ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ್ಯಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಆರೋಪ ಕೇಳಿ ಬಂತು. ಕಸ ಗುಡಿಸುವವರಿಗೆ  ವೇತನ ಪಾವತಿಸಲು ಪ್ರತೀ ತಿಂಗಳು ₹13,260 ಮೊತ್ತ  ಪಡೆಯುವ ಗುತ್ತಿಗೆದಾರರು ಕಾರ್ಮಿಕರಿಗೆ ಕೇವಲ ₹6,500 ನೀಡುತ್ತಿದ್ದಾರೆ. ಪಿಎಫ್, ಇಎಸ್‍ಐ, ಸಮವಸ್ತ್ರ ಸಹಿತ ಸುರಕ್ಷಾ ಸಲಕರಣೆ ಮತ್ತಿತರ ಸೌಲಭ್ಯವೂ ಅವರಿಗೆ ನೀಡದೆ ಅವರ ಎಟಿಎಂ ಮತ್ತು ಪಾಸ್‍ಬುಕ್ ತನ್ನಲ್ಲೇ ಇರಿಸಿಕೊಂಡ ಗುತ್ತಿಗೆದಾರ ಅವರ ಹೆಸರಿನಲ್ಲಿ ಲಕ್ಷಾಂತರ ಮೊತ್ತದ ಹಣ ಗುಳುಂ ಮಾಡುತ್ತಿದ್ದರೂ ಪುರಸಭೆ ಮೌನವಾಗಿದೆ ಎಂದರು.

ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಈ ಜಿಲ್ಲೆಯ ಬಂಟ್ವಾಳ ಪುರಸಭೆಯಲ್ಲಿ ಜೀತಪದ್ದತಿ  ಜಾರಿಯಲ್ಲಿದೆಯೇ? ಪುರಸಭೆಗೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ’ ಟೀಕಿಸಿದರು. ಎಸ್‍ಡಿಪಿಐ ಸದಸ್ಯ ಮುನೀಶ್ ಆಲಿ ಇದಕ್ಕೆ ಧ್ವನಿಗೂಡಿಸಿ, ‘ಬಡ ಕಾರ್ಮಿಕರ ಕಣ್ಣೀರ ಶಾಪ ಪುರಸಭೆಗೆ ಬೇಡ’ ಎಂದರು.

ADVERTISEMENT

ಕಳೆದ ಸಾಲಿನಲ್ಲಿ ಅಂಗಡಿ, ಮನೆ ತೆರಿಗೆ, ಕಟ್ಟಡ, ಅಂಗಡಿ, ಕುಡಿಯುವ ನೀರು, ಜಾಹೀರಾತು ಶುಲ್ಕ, ತೆರಿಗೆ ಸಂಗ್ರಹದಲ್ಲಿ ಲಕ್ಷಾಂತರ ಮೊತ್ತದ ಬಾಕಿ ವಸೂಲಿ ಬಗ್ಗೆ ಲೆಕ್ಕಪರಿಶೋಧಕರು ಸಲ್ಲಿಸದ ವರದಿ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಾವತಿಸಲು ಬಾಕಿ ಉಳಿಸಿಕೊಂಡ ₹6ಲಕ್ಷ ದಂಡ ಪಾವತಿ ಬಗ್ಗೆ ಸದಸ್ಯ ಬಿ.ದೇವದಾಸ ಶೆಟ್ಟಿ ಗಮನ ಸೆಳೆದರು.

ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಮತ್ತು ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಪ್ರತಿಕ್ರಿಯಿಸಿ, ‘ಗುತ್ತಿಗೆದಾರರನ್ನು ಕರೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ’ ಭರವಸೆ ನೀಡಿದರು. ಈ ಬಗ್ಗೆ ಕೂಡಲೇ ಸೂಕ್ತ ನಿರ್ಧಾರ  ಕೈಗೊಳ್ಳಬೇಕು’ ಎಂದು ಆಡಳಿತ ಪಕ್ಷ ಸದಸ್ಯರಾದ ಗಂಗಾಧರ ಪೂಜಾರಿ ಮತ್ತು ಪ್ರವೀಣ ಬಿ. ಧ್ವನಿಗೂಡಿಸಿದರು.

ಪುರಸಭಾ ವ್ಯಾಪ್ತಿಯಲ್ಲಿ ₹50 ಲಕ್ಷ ವೆಚ್ಚದಲ್ಲಿ ಕೈಗೊಂಡ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮತ್ತು ಪೈಪ್‍ಲೈನ್ ಅಳವಡಿಕೆ ಸಹಿತ ಇದರ ನಿರ್ವಹಣೆ ಮತ್ತು ಗುತ್ತಿಗೆ ಆಧಾರಿತ ಸಿಬ್ಬಂದಿ ನೇಮಕ ಬಗ್ಗೆ ನಗರ ನೀರು ಸರಬರಾಜು ಮತ್ತು ಜಲಮಂಡಳಿ ಎಂಜಿನಿಯರ್ ಶೋಭಾಲಕ್ಷ್ಮಿ ಸಭೆಗೆ ಮಾಹಿತಿ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ಸದಾಶಿವ ಬಂಗೇರ, ಮಹಮ್ಮದ್ ಶರೀಫ್, ಜಗ ದೀಶ ಕುಂದರ್, ವಸಂತಿ ಚಂದಪ್ಪ, ಚಂಚಲಾಕ್ಷಿ, ಮಹಮ್ಮದ್ ಇಕ್ಬಾಲ್, ಬಿ.ಮೋಹನ್, ಸುಗುಣ ಕಿಣಿ ಚರ್ಚೆಯಲ್ಲಿ ಪಾಲ್ಗೊಂಡರು.   ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಮೆನೇಜರ್ ಲೀಲಾವತಿ, ಆರೋಗ್ಯಾ ಧಿಕಾರಿ ರತ್ನಪ್ರಸಾದ್, ಅಧಿಕಾರಿಗಳಾದ ಮತ್ತಡಿ, ಉಮಾವತಿ, ಸುಶ್ಮಾ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.