ADVERTISEMENT

ಬಿಜೆಪಿಗೆ ಪಾಠ ಕಲಿಸಿ, ರಾಜ್ಯದ ಮಾನ ಉಳಿಸಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2012, 5:30 IST
Last Updated 9 ಜೂನ್ 2012, 5:30 IST

ಮಂಗಳೂರು: `ರಾಜ್ಯದ ಶಿಕ್ಷಕರು, ಪದವೀಧರರು ವಿಧಾನಪರಿಷತ್ ಚುನಾವಣೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಮೂಲಕ ರಾಜ್ಯದ ಮಾನವನ್ನು ಕಾಪಾಡಬೇಕು~ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ  ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಆಪರೇಷನ್ ಕಮಲ ನಡೆಸಲು ಹಣ ಹಾಗೂ ಜಾತಿ ಬಲ ಬಳಸಿದ್ದಾಗಿ ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆ. ಮಕ್ಕಳಿಗೆ ಸನ್ನಡತೆ ಪಾಠ ಹೇಳುವ ಶಿಕ್ಷಕರು ಈ ಚುನಾವಣೆಯಲ್ಲಿ ಯೋಚಿಸಿ ಮತ ಹಾಕಬೇಕು~ ಎಂದರು.

`ನಿತ್ಯಾನಂದ ಸ್ವಾಮಿ ನಡೆಸಿರುವ ಕಾರ್ಮಕಾಂಡಗಳನ್ನು ಮಾಧ್ಯಮಗಳು ಬೆಳಕಿಗೆಗೆ ತಂದರೂ ಸರ್ಕಾರ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೈಗೊಂಡಿಲ್ಲ. ಸ್ವಾಮೀಜಿ ಕಡೆಯವರು ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದರೂ ಮುಖ್ಯಮಂತ್ರಿಯಾಗಲೀ ಗೃಹ ಸಚಿವರಾಗಲೀ ಮಾತನಾಡುತ್ತಿಲ್ಲ. ಮಾಧ್ಯಮಗಳನ್ನು ದುರ್ಬಲಗೊಳಿಸಿದರೆ ಪ್ರಜಾಪ್ರಭುತ್ವ ಉಳಿಯುತ್ತದಾ?~ ಎಂದು ಪ್ರಶ್ನಿಸಿದರು.

`ಭ್ರಷ್ಟಾಚಾರ, ಲೋಕಪಾಲ ಮಸೂದೆ ಬಗ್ಗೆ ಮಾತನಾಡುವ ಅಣ್ಣಾ ನೇತೃತ್ವದ ತಂಡ ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಿಸದ ಬಗ್ಗೆ ಕುರುಡಾಗಿದೆ~ ಎಂದು ಟೀಕಿಸಿದರು.

`ಯಾವುದೇ ಸಿದ್ಧತೆ ನಡೆಸದೆ ಚುನಾವಣೆ ಸಮೀಪಿಸಿದಾಗ ಪತ್ರಿಕಾ ಹೇಳಿಕೆ ನೀಡುವ ಕಾಂಗ್ರೆಸ್ ನಾಯಕರು ಪತ್ರಿಕಾ ಹುಲಿಗಳು~ ಎಂಬ ಜೆಡಿಎಸ್ ಟೀಕೆಗೆ ಪ್ರತಿಕ್ರಿಯಿಸಿದ ಪೂಜಾರಿ, `ಟೀಕೆಯಲ್ಲಿ ನಿಜಾಂಶವಿದೆ. ಈ ಬಾರಿಯ ಚುನಾವಣೆಯಲ್ಲಿ ಆರಂಭದಲ್ಲೇ ಸಿದ್ಧತೆ ನಡೆಸಿದ್ದೇವೆ~ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬಂದ ಕುರಿತು ಪ್ರತಿಕ್ರಿಯಿಸಿದ ಪೂಜಾರಿ `ಆ ಸ್ಥಾನ ಖಾಲಿ ಇಲ್ಲ~ ಎಂದರು.  ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಪಕ್ಷದ ಮುಖಂಡರಾದ ಸುರೇಶ್ ಬಲ್ಲಾಳ್, ಹರಿಕೃಷ್ಣ ಬಂಟ್ವಾಳ್ ಅರುಣ್ ಕುವೆಲ್ಲೊ, ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.