ಮಂಗಳೂರು: ಬಿಜೆಪಿ ಮುಖಂಡರಿಗೆ ಅತಿ ಆತ್ಮವಿಶ್ವಾಸವೇ ಮುಳುವಾಯಿತು. ಸದಾ ನಗುಮೊಗದ ಮಹಿಳೆ ಕಾಂಗ್ರೆಸ್‌ನ ಗುಲ್ಜಾರ್ ಬಾನು ಬುಧವಾರ ಅದೃಷ್ಟಬಲದಿಂದ ಅನಾಯಾಸವಾಗಿ ಮೇಯರ್ ಗದ್ದುಗೆ ಏರಿದರು.
ವಿಶ್ವ ಮಹಿಳಾ ದಿನಾಚರಣೆಯ ಮುನ್ನಾ ದಿನವಾದ ಬುಧವಾರ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಅನಿರೀಕ್ಷಿತ ವಿದ್ಯಮಾನಗಳಲ್ಲಿ ಒಬ್ಬ ಮಹಿಳೆ ಕಣ್ಣೀರು ಹಾಕಿದರೆ ಮತ್ತೊಬ್ಬ ಮಹಿಳೆಯ ಮೊಗದಲ್ಲಿ ಸಂತಸ ಮೇರೆ ಮೀರಿತ್ತು. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬುಧವಾರ ಮೇಯರ್, ಉಪಮೇಯರ್, ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆಯಲ್ಲಿ ಸ್ವಯಂಕೃತ ತಪ್ಪಿನಿಂದಾಗಿ ಬಿಜೆಪಿ ಮೇಯರ್ ಸ್ಥಾನ ತಪ್ಪಿಸಿಕೊಂಡರೆ, ಕಾಂಗ್ರೆಸ್ ಪಾಲಿಗೆ ಬಂಪರ್ ಬಹುಮಾನವೇ ಲಭಿಸಿತು!
ಸತತ ಸೋಲಿನಿಂದ ಕಳಾಹೀನವಾಗಿದ್ದ ಕಾಂಗ್ರೆಸ್ ಪಾಲಿಗೆ ಬುಧವಾರ ಮಧ್ಯಾಹ್ನ ನವಚೈತನ್ಯ ಮೂಡಿದ್ದರೆ, ಬಿಜೆಪಿ ಮುಖಂಡರಂತೂ ಶಾಕ್ ಅನುಭವಿಸಿದರು.
ಪಾಲಿಕೆ ಮೇಯರ್ ಸ್ಥಾನ ಹಿಂದುಳಿದ ವರ್ಗ(ಎ)ದ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲು ಎಂದು ವಾರದ ಹಿಂದೆಯೇ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಬುಧವಾರ ಬೆಳಿಗ್ಗೆ 9.30ರವರೆಗೂ ನಾಮಪತ್ರ ಸಲ್ಲಿಸಲು (ಚುನಾವಣೆಗೆ ಎರಡು ಗಂಟೆ ಮೊದಲು) ಅವಕಾಶ ನೀಡಲಾಗಿತ್ತು.
ಬಿಜೆಪಿಯಿಂದ ರೂಪಾ ಡಿ.ಬಂಗೇರ ಹಾಗೂ ಕಾಂಗ್ರೆಸ್‌ನಿಂದ ಗುಲ್ಜಾರ್ ಬಾನು ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಮೈಸೂರಿನ ವಿಭಾಗೀಯ ಆಯಕ್ತರಾದ ಎಂ.ವಿ. ಜಯಂತಿ ಚುನಾವಣಾಧಿಕಾರಿ ಆಗಿದ್ದರು. ಬೆಳಿಗ್ಗೆ 11.30ಕ್ಕೆ ಚುನಾವಣೆ ನಿಗದಿಪಡಿಸಲಾಗಿತ್ತು. 10 ನಿಮಿಷ ತಡವಾಗಿ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು.
ರೂಪಾ ಬಂಗೇರ ಅವರು ಜಾತಿ ಪ್ರಮಾಣಪತ್ರವನ್ನು ಸಮರ್ಪಕವಾಗಿ ಸಲ್ಲಿಸಿಲ್ಲ ಎಂದು ಚುನಾವಣಾಧಿಕಾರಿ ನಾಮಪತ್ರ ತಿರಸ್ಕರಿಸಿದರು. `ರೂಪಾ ಸೌಲಭ್ಯ ಪಡೆಯಲು ಇರುವ ಜಾತಿ ಪ್ರಮಾಣಪತ್ರವನ್ನು ನಾಮಪತ್ರದೊಂದಿಗೆ ಲಗತ್ತಿಸಿದ್ದರು.
ಚುನಾವಣೆಗೆ ಬೇರೆಯದೇ ಆದ ಮಾದರಿಯ ಜಾತಿ ಪ್ರಮಾಣಪತ್ರ ನೀಡಬೇಕು. ಹೀಗಾಗಿ ನಾಮಪತ್ರ ತಿರಸ್ಕರಿಸಲಾಗಿದೆ~ ಎಂದು ನಾಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿ ಘೋಷಿಸಿದರು. ಕಾಂಗ್ರೆಸ್ ಸದಸ್ಯರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. `ನನ್ನ ಪರವಾಗಿ ವಕೀಲರು ಮಾತನಾಡುತ್ತಾರೆ~ ಎಂದು ರೂಪಾ ಬಂಗೇರ ಚುನಾವಣಾಧಿಕಾರಿ ಅವರಲ್ಲಿ ವಿನಂತಿಸಿದರು.
ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾಗಿರುವ ರವೀಂದ್ರ ಕುಮಾರ್ ಚರ್ಚಿಸಲು ಮುಂದಾದಾಗ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. `ಪಾಲಿಕೆ ಸದಸ್ಯರು ವಾದ ಮಾಡಲು ಇಲ್ಲಿ ಅವಕಾಶ ಇಲ್ಲ~ ಎಂದು ಕಾಂಗ್ರೆಸ್ ಸದಸ್ಯರು ಮನವಿ ಮಾಡಿದರು.
ಪರಿಣಾಮ ವಕೀಲರಿಗೆ ವಾದ ಮಂಡಿಸಲು ಅವಕಾಶ ಸಿಗಲಿಲ್ಲ.`ಈಗಾಗಲೇ ಒಮ್ಮೆ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಸಮರ್ಪಕ ಜಾತಿ ಪ್ರಮಾಣಪತ್ರವನ್ನು ನಾಮಪತ್ರ ಪರಿಶೀಲನೆ ವೇಳೆ ನೀಡಿದ್ದಾರೆ~ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಸಮಜಾಯಿಷಿ ನೀಡಿದರು. `ನಾಮಪತ್ರ ತಿರಸ್ಕರಿಸಿದ ಬಳಿಕ ಇಲ್ಲಿ ವಾದಕ್ಕೆ ಅವಕಾಶ ಇಲ್ಲ~ ಎಂದು ಸದಸ್ಯರಾದ ಅಬ್ದುಲ್ ಅಜೀಜ್, ಮರಿಯಮ್ಮ ಥಾಮಸ್ ವಿರೋಧ ವ್ಯಕ್ತಪಡಿಸಿದರು.
ಈ ನಡುವೆ ಚುನಾವಣಾಧಿಕಾರಿ ನಾಮಪತ್ರ ಹಿಂದಕ್ಕೆ ಪಡೆಯಲು 10 ನಿಮಿಷ ಕಾಲಾವಕಾಶ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಬಿಜೆಪಿ ಹಿರಿಯ ಸದಸ್ಯರು ಗುಂಪಾಗಿ ಚರ್ಚಿಸಲು ಆರಂಭಿಸಿದರು. 11.50ರ ವೇಳೆಗೆ ಗುಲ್ಜಾರ್ ಬಾನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.
`ನೀವು ಒಂದು ಪಕ್ಷದ ಪರವಾಗಿ ತೀರ್ಮಾನ ಕೈಗೊಂಡಿದ್ದೀರಿ. ಚುನಾವಣೆ ನಡೆಸಬೇಕು~ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. `ಇಲ್ಲಿ ಪರ-ವಿರೋಧ ಪ್ರಶ್ನೆ ಬರುವುದಿಲ್ಲ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ ಚುನಾವಣೆ ನಡೆಸಬೇಕು. ಇಲ್ಲಿ ಒಬ್ಬರೇ ಕಣದಲ್ಲಿ ಉಳಿದರು.
ಹಾಗಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ~ ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪಾಳೆಯದಲ್ಲಿ ಸಂತಸದ ಅಲೆ ಮುಗಿಲು ಮುಟ್ಟಿದರೆ, ಬಿಜೆಪಿ ಸದಸ್ಯರು ತಲೆ ಕೆಳಗೆ ಹಾಕಿ ಮೌನಕ್ಕೆ ಶರಣಾದರು. ಗುಲ್ಜಾರ್ ಬಾನು ಅವರನ್ನು ಕಾಂಗ್ರೆಸ್ ಸದಸ್ಯರು ಅಭಿನಂದಿಸಿದರು. ಈ ನಡುವೆ ಯೋಗೀಶ್ ಭಟ್ ನಿರ್ಗಮಿಸಿದರು. ರೂಪಾ ಬಂಗೇರ ಒಂದೆರಡು ಬಾರಿ ಕೂತಲ್ಲೇ ಕಣ್ಣೀರು ಸುರಿಸಿದರು.
ಅಮಿತಕಲಾ ಉಪ ಮೇಯರ್: ಬಳಿಕ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಕಾಂಗ್ರೆಸ್‌ನಿಂದ ಅಪ್ಪಿ ಹಾಗೂ ಬಿಜೆಪಿಯಿಂದ ಅಮಿತಕಲಾ ಸ್ಪರ್ಧಿಸಿದ್ದರು. ಅಪ್ಪಿ ಪರ ಕಾಂಗ್ರೆಸ್‌ನ 21 ಸದಸ್ಯರು, ಅಮಿತಕಲಾ ಪರ ಬಿಜೆಪಿಯ 35 ಸದಸ್ಯರು ಮತ ಚಲಾಯಿಸಿದರು.
ಸಿಪಿಎಂನ ಜಯಂತಿ ಶೆಟ್ಟಿ, ಜೆಡಿಎಸ್‌ನ ಅಬ್ದುಲ್ ಅಜೀಜ್, ಪಕ್ಷೇತರ ಸದಸ್ಯರಾದ ಮರಿಯಮ್ಮ ಥಾಮಸ್, ಹರೀಶ್ ತಟಸ್ಥರಾಗಿ ಉಳಿದರು. ಅಮಿತಕಲಾ 35-21 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
`ಬಯಸದೆ ಬಂದ ಭಾಗ್ಯ!~
ನೂತನ ಮೇಯರ್ ಗುಲ್ಜಾರ್ ಬಾನು (46) ಕಾಟಿಪಳ್ಳ ಐದನೇ ವಾರ್ಡ್ ಸದಸ್ಯೆ. ಎರಡನೇ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಎಂಟನೇ ತರಗತಿ ವರೆಗೆ ವ್ಯಾಸಂಗ ಮಾಡಿರುವ ಅವರು ಸಂಶುದ್ದೀನ್ ಶೇಖ್ ಅವರ ಪತ್ನಿ. 10 ಮಕ್ಕಳ ತಾಯಿ. ಮುಸ್ಲಿ ಸಮುದಾಯದ ಮೊದಲ ಮಹಿಳಾ ಮೇಯರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
`ದೇವರ ದಯ, ಪಕ್ಷದ ಬೆಂಬಲ, ಜನರ ನಿರೀಕ್ಷೆಗೆ ಅನುಗುಣವಾಗಿ ಮೇಯರ್ ಆಗಿ ಆಯ್ಕೆಯಾಗಿದ್ದೇನೆ. ಇದು ಬಯಸದೆ ಬಂದ ಭಾಗ್ಯ~ ಎಂದು ಗುಲ್ಜಾರ್ ಬಾನು ಸಂತಸ ಹಂಚಿಕೊಂಡರು.
ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಹಾಗೂ ಪಾಲಿಕೆಯ 60 ವಾರ್ಡ್‌ಗಳಿಗೆ ಸಮಾನ ಆದ್ಯತೆ ನೀಡುವುದು ತಮ್ಮ ಗುರಿ. 24*7 ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡುತ್ತೇನೆ ಎಂದು ಅವರು ಘೋಷಿಸಿದರು.
ಉಪ ಮೇಯರ್ ಆಗಿ ಆಯ್ಕೆಯಾದ ಅಮಿತಕಲಾ (36) ಬಿ.ಎ. ಪದವೀಧರೆ. ದೇರೆಬೈಲ್ ಪಶ್ಚಿಮ ವಾರ್ಡ್ ಸದಸ್ಯೆ. ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ತಾರಾನಾಥ ಎಂಬವರ ಪತ್ನಿಯಾದ ಇವರಿಗೆ ಒಬ್ಬಳು ಪುತ್ರಿ ಇದ್ದಾಳೆ.
`ಮೇಯರ್- ಉಪ ಮೇಯರ್ ಪಕ್ಷಬೇಧ ಮರೆತು ಅಭಿವೃದ್ಧಿ ಕಾರ್ಯದಲ್ಲಿ ತೊಡಗುತ್ತೇವೆ~ ಎಂದು ಅವರು ಭರವಸೆ ನೀಡಿದರು.
`ರೂಪಾ ಬಂಗೇರ ಎಲ್ಲ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿ ಕಾನೂನು ಪ್ರಕಾರ ಕೆಲಸ ಮಾಡಿದ್ದಾರೆ~ ಎಂದು ಉಪ ಮೇಯರ್ ಆಗಿ ಆಯ್ಕೆಯಾದ ಕೂಡಲೇ ಸುದ್ದಿಗಾರರಿಗೆ ತಿಳಿಸಿದರು.
6ನೇ ಮಹಿಳಾ ಮೇಯರ್
ಗುಲ್ಜಾರ್ ಬಾನು ಪಾಲಿಕೆಯ 26ನೇ ಮೇಯರ್. ಮೊದಲ ಮೇಯರ್ ಸದಾಶಿವ ಭಂಡಾರಿ (1984).
ಬಾನು ಅವರು 6ನೇ ಮಹಿಳಾ ಮೇಯರ್ ಆಗಿದ್ದಾರೆ. ಯೂನಿಸ್ ಬ್ರಿಟ್ಟೋ (1993) ಮೊದಲ ಮಹಿಳಾ ಮೇಯರ್. ಹಿಲ್ಡಾ ಆಳ್ವ, ಸುಂದರಿ, ವಿಜಯಾ ಅರುಣ್, ರಜನಿ ದುಗ್ಗಣ್ಣ ಈ ಹಿಂದೆ ಮೇಯರ್ ಆಗಿದ್ದರು.
`ಡಮ್ಮಿ ಅಭ್ಯರ್ಥಿ ಇಲ್ಲ~
ಐದನೇ ಅವಧಿಯಲ್ಲೂ ತಮ್ಮ ಪಕ್ಷದ ಸದಸ್ಯರೇ ಮೇಯರ್ ಆಗುತ್ತಾರೆ ಎಂಬ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಡಮ್ಮಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ. ಪರಿಣಾಮ ಮೇಯರ್ ಸ್ಥಾನವನ್ನು ಚಿನ್ನದ ತಟ್ಟೆಯಲ್ಲಿಟ್ಟು ಕಾಂಗ್ರೆಸ್‌ಗೆ ಅರ್ಪಿಸಿದಂತಾಗಿದೆ.
`ಗೆಲ್ಲುವ ಎಲ್ಲ ಸಾಧ್ಯತೆ ಇರುವಾಗ ಡಮ್ಮಿ ಅಭ್ಯರ್ಥಿ ಏಕೆ~ ಎಂದು ಬಿಜೆಪಿ ನಾಯಕರು ಕೊನೆವರೆಗೂ ಪ್ರಶ್ನಿಸುತ್ತಲೇ ಇದ್ದರು.
ಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಐದಕ್ಕೂ ಅಧಿಕ ಅರ್ಹ ಅಭ್ಯರ್ಥಿಗಳಿದ್ದರು. ಒಂದು ವಾರ ಮೊದಲೇ ಮೀಸಲಾತಿ ನಿಗದಿಯಾಗಿದ್ದರೂ ಬಿಜೆಪಿ ಪಾಳೆಯ ಅಧಿಕೃತವಾಗಿ ರೂಪಾ ಅವರ ಹೆಸರನ್ನು ಘೋಷಿಸಿದ್ದು ಬುಧವಾರ ಬೆಳಿಗ್ಗೆ 8 ಗಂಟೆ ವೇಳೆಗೆ. ಬಿಜೆಪಿಯಲ್ಲೇ ಆರಂಭದಲ್ಲಿ ಶಾಂತಾ, ಸುರೇಖಾ, ರೂಪಾ ಬಂಗೇರ ಉಮೇದುವಾರರಾಗಿದ್ದರು.
ಕೊನೆಗೆ ಅಭ್ಯರ್ಥಿ ಸ್ಥಾನದ ಅದೃಷ್ಟ ರೂಪಾ ಅವರಿಗೆ ಒಲಿಯಿತು. ಆದರೆ ಬಳಿಕ ಆದುದು ಉಲ್ಟಾ ಪಲ್ಟಾ!
`ಪಕ್ಷದ ಮುಖಂಡರೊಬ್ಬರ ಅತೀ ಆತ್ಮವಿಶ್ವಾಸವೇ ಈ ಘಟನೆಗೆ ಕಾರಣ. ಕೊನೆಗೆ ರೂಪಾ ಬಂಗೇರ ಏಕಾಂಗಿಯಾಗಿದ್ದರು. ಹಿರಿಯ ಸದಸ್ಯರು ಆಕೆಯ ನೆರವಿಗೆ ಬರಲಿಲ್ಲ. ಸೂಕ್ತ ಮಾರ್ಗದರ್ಶನ ನೀಡಲಿಲ್ಲ~ ಎಂದು ಬಿಜೆಪಿ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದರು.
`ಸೌಲಭ್ಯ ಪಡೆಯುವುದಕ್ಕೆ ಬೇರೆಯದೇ ಆದ ಜಾತಿ ಪ್ರಮಾಣಪತ್ರ ಹಾಗೂ ಚುನಾವಣೆಗೆ ಸ್ಪರ್ಧಿಸಲೆಂದೇ ಬೇರೆ ಜಾತಿ ಪ್ರಮಾಣಪತ್ರ ಇದೆ. ಸಮರ್ಪಕವಾದ ಪ್ರಮಾಣಪತ್ರ ಸಲ್ಲಿಸಿ ಎಂದು ಹಿರಿಯ ಅಧಿಕಾರಿಯೊಬ್ಬರು ಮೂರು ದಿನಗಳ ಹಿಂದೆಯೇ ರೂಪಾ ಅವರಿಗೆ ಸೂಚಿಸಿದ್ದರು. ಆದರೆ ಕಿವಿಗೆ ಹಾಕಿಕೊಂಡಿರಲಿಲ್ಲ~ ಎಂದು ಮುಖಂಡರೊಬ್ಬರು ತಿಳಿಸಿದರು.
`ಈ ಹಿಂದೆಯೂ ಒಂದು ಬಾರಿ ಬಿಜೆಪಿ ಸದಸ್ಯರೊಬ್ಬರ ನಾಮಪತ್ರ ಸಮರ್ಪಕವಾಗಿರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಎಚ್ಚರಿಸಿ ಸರಿಪಡಿಸಿದ್ದರು. ಈ ಬಾರಿಯೂ ಕಾಂಗ್ರೆಸ್ ಸದಸ್ಯರಿಗೆ ಈ ಬಗ್ಗೆ ಮಾಹಿತಿ ದೊರಕಿತ್ತು. ಮೌನಕ್ಕೆ ಶರಣಾದೆವು~ ಎಂದು ಕಾಂಗ್ರೆಸ್ ಸದಸ್ಯರೊಬ್ಬರು ನಕ್ಕು ಪ್ರತಿಕ್ರಿಯಿಸಿದರು.
`ಅವಿಶ್ವಾಸ ಅಸಾಧ್ಯ~
`ಪಾಲಿಕೆ ಕಾನೂನಿನ ಪ್ರಕಾರ ನೂತನ ಮೇಯರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಾಧ್ಯವಿಲ್ಲ. ಬಿಜೆಪಿಗೆ ಕಷ್ಟವಾದರೂ ಒಂದು ವರ್ಷ ಕಾಲ ಗುಲ್ಜಾರ್ ಅವರನ್ನು ಮೇಯರ್ ಆಗಿ ಒಪ್ಪಿಕೊಳ್ಳಲೇಬೇಕು. ನ್ಯಾಯಾಲಯಕ್ಕೆ ಹೋಗಲು ಅವಕಾಶ ಇದೆ~ ಎಂದು ವಕೀಲರೂ ಆಗಿರುವ ಮರಿಯಮ್ಮ ಥಾಮಸ್ ತಿಳಿಸಿದರು.
ಅಧಿಕಾರ ಹಸ್ತಾಂತರ ಇಲ್ಲ
ಸಂಜೆ 4.15ಕ್ಕೆ ಮತ್ತೆ ಚುನಾವಣಾ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಮಧ್ಯಾಹ್ನ ಎರಡು ಗಂಟೆಗೆ ಚುನಾವಣಾಧಿಕಾರಿ ತಿಳಿಸಿದರು. ಎಲ್ಲ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವಾಗ ಸಂಜೆ 5 ದಾಟಿತ್ತು. ಚುನಾವಣಾ ಪ್ರಕ್ರಿಯೆ ಮುಗಿದ ಕೂಡಲೇ ಬಿಜೆಪಿ ಸದಸ್ಯರು ಎದ್ದು ಹೋದರು. ನೂತನ ಉಪ ಮೇಯರ್ ಸಹ ಪಕ್ಷದ ಸದಸ್ಯರೊಂದಿಗೆ ನಿರ್ಗಮಿಸಿದರು.
ನಿರ್ಗಮಿತ ಮೇಯರ್- ಉಪ ಮೇಯರ್ ನೂತನ ಮೇಯರ್- ಉಪ ಮೇಯರ್‌ಗೆ ಅಧಿಕಾರ ಹಸ್ತಾಂತರಿಸುವುದು ಸಂಪ್ರದಾಯ. ಬುಧವಾರ ಇದಕ್ಕೆಲ್ಲ ಚ್ಯುತಿ ಬಂದಿತು. ಮೇಯರ್ ಒಬ್ಬರೇ ಅಧಿಕಾರ ಸ್ವೀಕರಿಸಿದರು. ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಪಕ್ಷೇತರ ಸದಸ್ಯರು ಸಾಕ್ಷಿಯಾದರು. ನೂತನ ಮೇಯರ್ ಅವರನ್ನು ಸ್ಥಳದಲ್ಲಿದ್ದವರು ಅಭಿನಂದಿಸಿದರು. ನೂತನ ಮೇಯರ್- ಉಪ ಮೇಯರ್ ಅವಧಿ 2013ರ ಫೆ. 20ರವರೆಗೆ ಇದೆ.
ವಿರೋಧ ಪಕ್ಷ ಯಾವುದು?
ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಅಧಿಕಾರ ಹಂಚಿಕೊಂಡಿರುವುದರಿಂದ ವಿರೋಧ ಪಕ್ಷ ಯಾವುದು ಎಂಬ ಪ್ರಶ್ನೆ ಮೂಡಿದೆ. `ಸಿಪಿಎಂ, ಜೆಡಿಎಸ್, ಪಕ್ಷೇತರ ಸದಸ್ಯರು ಒಟ್ಟಾಗಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತೇವೆ~ ಎಂದು ಪಕ್ಷೇತರ ಸದಸ್ಯ ಹರೀಶ್ ತಿಳಿಸಿದರು.
ಸ್ಥಾಯಿ ಸಮಿತಿಗೆ ಆಯ್ಕೆ
ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಸದಸ್ಯರಾಗಿ ಶಾಂತಾ, ರಂಗನಾಥ ಕಿಣಿ, ಪದ್ಮನಾಭ, ತಿಲಕ್‌ರಾಜ್, ದಿವಾಕರ್, ಭಾರತಿ ದಿನೇಶ್, ಗೀತಾ ಎನ್. ನಾಯಕ್ ಆಯ್ಕೆಯಾದರು. ಗುಲ್ಜಾರ್ ಬಾನು ಮೇಯರ್ ಸ್ಥಾನಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ನಾಮಪತ್ರ ತಿರಸ್ಕರಿಸಲಾಯಿತು. ಮಧ್ಯಾಹ್ನ ಬಳಿಕ ನಡೆದ ಚುನಾವಣಾ ಪ್ರಕ್ರಿಯೆ ವೇಳೆಗೆ ನವೀನ್ ಡಿಸೋಜ ನಾಮಪತ್ರ ವಾಪಸ್ ಪಡೆದರು.
ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಸದಸ್ಯರಾಗಿ ಭಾಸ್ಕರಚಂದ್ರ ಶೆಟ್ಟಿ, ಪ್ರವೀಣ್, ಸುಧೀರ್ ಶೆಟ್ಟಿ, ಅಪ್ಪಿ, ನಾಗೇಂದ್ರ ಕುಮಾರ್, ಗಣೇಶ್ ಹೊಸಬೆಟ್ಟು, ಸುಮಿತ್ರಾ ಕಳಿಯ ಆಯ್ಕೆಯಾದರು.
ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಸದಸ್ಯರಾಗಿ ಯಶವಂತ ಮೀನಕಳಿಯ, ಕೆ.ನವೀನಚಂದ್ರ, ರಾಜೇಂದ್ರ, ಶಕೀಲಾ ಕಾವ, ಸುರೇಖಾ ಶ್ರೀನಿವಾಸ್, ಅಶೋಕ್ ಕುಮಾರ್, ಅಶೋಕ್ ಶೆಟ್ಟಿ ಆಯ್ಕೆಯಾದರು. ಲೆಕ್ಕಪತ್ರ ಸ್ಥಾಯಿ ಸಮಿತಿ ಸದಸ್ಯರಾಗಿ ಹರೀಶ್, ಮೋಹನ್ ಕುಮಾರ್, ಶಕುಂತಲಾ, ವಿಜಯ ಕುಮಾರ್ ಶೆಟ್ಟಿ, ಶರತ್ ಕುಮಾರ್, ಗ್ರೆಟ್ಟಾ ರೆಬೆಲ್ಲೋ, ಮೀರಾ ಬಾಯಿ ಆಯ್ಕೆಯಾದರು.
ಸಂಭ್ರಮಕ್ಕೆ ಸಿದ್ಧತೆ ನಡೆದಿತ್ತು!
ರೂಪಾ ಬಂಗೇರ ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಬೆಳಗ್ಗಿನಿಂದಲೇ ಎಸ್‌ಎಂಎಸ್ ಹರಿದಾಡಿತ್ತು. ಕುಲಾಲ ಸಮುದಾಯ ಮುಖಂಡರೊಬ್ಬರು ಪತ್ರಕರ್ತರಿಗೆ ರೂಪಾ ಬಯೋಡಾಟಾ ನೀಡಿದ್ದರು. ಚೆಂಡೆ ವಾದಕರನ್ನು ಕರೆಸಲಾಗಿತ್ತು. ಅರ್ಧ ಲಕ್ಷ ಮೌಲ್ಯದ ಪಟಾಕಿ ತರಿಸಲಾಗಿತ್ತು. ಆದರೆ ಬಳಿಕ ನಡೆದುದೇ ಬೇರೆ. ಗುಲ್ಜಾರ್ ಗೆಲುವಿನ ಬಳಿಕ ಶಾಸಕ ರಮಾನಾಥ ರೈ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಪಾಲಿಕೆಗೆ ಧಾವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.