ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶದ ಸಿಹಿ ನೀರಿನಲ್ಲಿರುವ 40 ಪ್ರಭೇದದ ಮೀನುಗಳು ಅಳಿವಿನ ಅಂಚಿನಲ್ಲಿದ್ದು, ಅವುಗಳನ್ನು ಸಂರಕ್ಷಿಸುವ 9 ಕೋಟಿ ರೂಪಾಯಿ ವೆಚ್ಚದ ಯೋಜನೆಯೊಂದನ್ನು ಪಿಲಿಕುಳ ನಿಸರ್ಗಧಾಮ ಕೈಗೆತ್ತಿಕೊಳ್ಳಲಿದೆ.
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ(ಇಎಂಪಿಆರ್‌ಐ) ನಡೆಸಿದ ಅಧ್ಯಯನದಿಂದ ಈ ಆತಂಕಕಾರಿ ವಿಚಾರ ಬಹಿರಂಗವಾಗಿದೆ. ಅಪಾಯದ ಅಂಚಿಗೆ ಸರಿಯುತ್ತಿರುವ ಮೀನುಗಳ ಸಂರಕ್ಷಣೆ ಅಗತ್ಯ ಎಂಬ ಕಾರಣಕ್ಕೆ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಜೆ.ಆರ್.ಲೋಬೊ ಸೋಮವಾರ `ಪ್ರಜಾವಾಣಿ~ಗೆ ತಿಳಿಸಿದರು.
ಎರಡು ಹಂತಗಳಲ್ಲಿ ಸಂರಕ್ಷಣಾ ಯೋಜನೆ ಜಾರಿಗೆ ಬರಲಿದೆ. ಮೊದಲನೇ ಹಂತದಲ್ಲಿ `ಪಶ್ಚಿಮ ಘಟ್ಟದ ಜೀವವೈವಿಧ್ಯಗಳ ಸಂರಕ್ಷಣೆ ಮತ್ತು ಪ್ರದರ್ಶನ~ ಎಂಬ ಯೋಜನೆ ಜಾರಿಗೆ ಬರಲಿದೆ. ಪಶ್ಚಿಮ ಘಟ್ಟ ಭಾಗದ ಸಿಹಿ ನೀರಿನಲ್ಲಿ ಜೀವಿಸುವ ಮೀನುಗಳನ್ನು ಸಂಗ್ರಹಿಸಿ ಕೃತಕ ವಾತಾವರಣದಲ್ಲಿ ಅವುಗಳನ್ನು ಬೆಳೆಸುವುದು ಇದರ ಮುಖ್ಯ ಅಂಶವಾಗಿರುತ್ತದೆ. ಇವುಗಳನ್ನು ಜನಸಾಮಾನ್ಯರಿಗೆ ತೋರಿಸುವ ವ್ಯವಸ್ಥೆಯೂ ನಡೆಯಲಿದೆ.
ಈ ಯೋಜನೆಗೆ ಪಿಲಿಕುಳ ಕೊಳದ ದಂಡೆಯಲ್ಲಿ 2 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಈ ಕೃತಕ ಪರಿಸರದಲ್ಲಿ ನಿಂತ ನೀರಲ್ಲದೆ, ಹರಿಯುವ ನೀರಿನ ವ್ಯವಸ್ಥೆ ಇರಲಿದೆ. ಇದರಿಂದ ಮೀನುಗಳು ಸಹಜ ರೀತಿಯಲ್ಲೇ ಸಂತಾನ ವೃದ್ಧಿ ಮಾಡಿಕೊಳ್ಳುವುದು ಸಾಧ್ಯವಾಗಲಿದೆ.
ಇನ್ನು 15 ದಿನಗಳೊಳಗೆ ಮೊದಲ ಹಂತಕ್ಕೆ ಟೆಂಡರ್ ಕರೆಯಲಾಗುವುದು ಹಾಗೂ ಮುಂದಿನ ಜನವರಿಗೆ ಮೊದಲು ಈ ಯೋಜನೆ ಆರಂಭವಾಗುವ ನಿರೀಕ್ಷೆ ಇದೆ. ಮುಂದಿನ ವರ್ಷಾಂತ್ಯಕ್ಕೆ ಮೊದಲು ಯೋಜನೆಯ ಕಾಮಗಾರಿ ಕೊನೆಗೊಳ್ಳಲಿದೆ. ಮೊದಲ ಹಂತಕ್ಕೆ ರೂ.1 ಕೋಟಿ ವೆಚ್ಚವಾಗಲಿದ್ದು, ಈ ಹಣವನ್ನು ಭಾರತ ಸರ್ಕಾರ ಒದಗಿಸಿದೆ ಎಂದು ಲೋಬೊ ತಿಳಿಸಿದರು.
ಯೋಜನೆಯ ಎರಡನೇ ಹಂತದಲ್ಲಿ ಹಲವಾರು ಮೀನು ಪ್ರಭೇದಗಳಿಗಾಗಿ ಅಕ್ವೇರಿಯಂಗಳನ್ನು ನಿರ್ಮಿಸಲಾಗುವುದು. ಮೀನುಗಳ ಸಂತಾನ ವೃದ್ಧಿಸುವುದೇ ಇದರ ಮುಖ್ಯ ಉದ್ದೇಶ. ಈ ಪ್ರಸ್ತಾವವನ್ನು ಈ ವರ್ಷಾಂತ್ಯಕ್ಕೆ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಅವರು ಹೇಳಿದರು.
ಎರಡನೇ ಹಂತದ ಯೋಜನೆ ಮೂರು ವರ್ಷಗಳದ್ದಾಗಿದ್ದು, ಇದಕ್ಕೆ 8 ಕೋಟಿ ರೂಪಾಯಿ ವೆಚ್ಚ ತಗುಲಲಿದೆ ಎಂದು ಅವರು ತಿಳಿಸಿದರು.
ಇಎಂಪಿಆರ್‌ಐ ಅಧ್ಯಯನ ವರದಿಯ ಪ್ರಕಾರ ರಾಜ್ಯದ ನದಿಗಳು, ಕೆರೆಗಳು, ಜೌಗು ಪ್ರದೇಶಗಳಲ್ಲಿ 201 ಸಿಹಿನೀರಿನ ಮೀನು ವೈವಿಧ್ಯಗಳಿವೆ. ಮೀನುಗಳಿಗೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಅವುಗಳನ್ನು ಸಂಗ್ರಹಿಸುವ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.