ADVERTISEMENT

ಮಹಿಳೆಯನ್ನು ಕ್ರೂರವಾಗಿ ನಿಯಂತ್ರಿಸುವ ಎಫ್‌ಜಿಎಂ

‘ಮರುಭೂಮಿಯ ಹೂ’ ಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2014, 5:54 IST
Last Updated 1 ಡಿಸೆಂಬರ್ 2014, 5:54 IST

ಮಂಗಳೂರು: ಸಮಾಜದಲ್ಲಿ ಹೆಣ್ಣು ಮಕ್ಕಳು ಮುಕ್ತವಾಗಿ ತಮ್ಮ ಅನಿಸಿಕೆಯನ್ನು ಹೇಳಲು ಶುರು ಮಾಡಿದಲ್ಲಿ ಯಾವುದೇ ಧರ್ಮ, ಸಿದ್ಧಾಂತ, ತನ್ನ ನೆಲೆ ಕಳೆದುಕೊಂಡುಬಿಡುತ್ತವೆ ಎಂದು ಲೇಖಕಿ ಡಾ. ಎಚ್‌. ಅನುಪಮಾ ಹೇಳಿದರು.

ಕರಾವಳಿ ಲೇಖಕಿಯರ –ವಾಚಕಿಯರ ಸಂಘ ಮತ್ತು ಸಹಮತ ಫಿಲಂ ಸೊಸೈಟಿ ವತಿಯಿಂದ ಭಾನುವಾರ ಸೊಮಾಲಿಯದ ರೂಪದರ್ಶಿಯ ಆತ್ಮಕತೆಯನ್ನು ಆಧರಿಸಿದ ‘ಮರುಭೂಮಿಯ ಹೂ’ ಎಂಬ ಚಿತ್ರ­ಪ್ರದರ್ಶನದ ಬಳಿಕ ಅವರು ಮಾತನಾಡಿದರು.

ಈ ಚಿತ್ರ ಮಹಿಳೆಯ ಯೋನಿಯನ್ನು ಹೊಲಿಯುವ (Female Genital Mutilation) ಕೆಟ್ಟ ಸಂಪ್ರದಾಯದ ಕುರಿತಾದದ್ದು. ಹೆಣ್ಣನ್ನು ಇಂತಹ ಹಿಂಸೆಗೆ ಒಳಪಡಿಸಿ, ಕ್ರೂರವಾಗಿ ಆಕೆಯನ್ನು ನಿಯಂತ್ರಿ­ಸುವ ಆಚರಣೆಯ ಕುರಿತು ಸೊಮಾಲಿಯಾದ ರೂಪದರ್ಶಿ ವಾರಿಸ್‌ ಡೆರಿ ಎಂಬಾಕೆ ಧ್ವನಿ ಎತ್ತಿ ಮಾತನಾಡಿದ್ದಾಳೆ. ವಿಶ್ವಸಂಸ್ಥೆಯಲ್ಲಿಯೂ ಆಕೆ ಇದನ್ನು ಹೇಳುವುದು ಸಾಧ್ಯವಾಯಿತು. ಆ ಮೂಲಕ ಸಾವಿರಾರು ವರ್ಷಗಳ ಈ ಆಚರಣೆ  ಹೊರಜಗತ್ತಿಗೆ ಗೊತ್ತಾಯಿತು ಎಂದು ಡಾ. ಅನುಪಮಾ ವಿವರಿಸಿದರು.

ಮೂರ್ನಾಲ್ಕು ವರ್ಷದ ಹೆಣ್ಣುಮಗುವಿನ ಯೋನಿಯ ಸಂವೇದಿ ಭಾಗವನ್ನು ಮತ್ತು ಯೋನಿ ತುಟಿಗಳನ್ನು ಕತ್ತರಿಸಿ ಹೊಲಿಯಲಾ­ಗುತ್ತದೆ. ಮೂತ್ರ ವಿಸರ್ಜನೆಯಾಗಲು ಮತ್ತು ಮುಟ್ಟಿನ ರಕ್ತ ಹೋಗಲು ಒಂದು ಚಿಕ್ಕ ರಂಧ್ರವನ್ನಷ್ಟೇ ಉಳಿಸಲಾಗುತ್ತದೆ. ಈ ಆಚರಣೆಯ ಮೂಲಕ ಹೆಣ್ಣಿನ ಶೀಲವನ್ನು ಕಾಪಾಡುವ ಕೆಟ್ಟ ಪದ್ಧತಿ ಇಂಡೋನೇಷಿಯಾ, ಸೊಮಾಲಿಯಾ, ಇಥಿಯೋಪಿಯಾ, ನೈಜೀರಿಯಾ, ಲ್ಯಾಟಿನ್‌ ಅಮೆರಿಕ ಮುಂತಾದ ಕಡೆಗಳಲ್ಲಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ದಾವೂದಿ ಬಹುರಾ ಎಂಬ ಇಸ್ಮಾಯಿಲಾ ಸೆಕ್ಟ್‌ನ ಜನಾಂಗದಲ್ಲಿ ಈ ಆಚರಣೆ ಇರುವುದು ಇತ್ತೀಚೆಗಷ್ಟೆ ಬೆಳಕಿಗೆ ಬಂದಿದೆ. ಈ ರೀತಿ ಹೊಲಿಗೆ ಹಾಕಿದ ನಂತರ ಮೂತ್ರ ವಿಸರ್ಜನೆಗೆ ತುಂಬ ಹೊತ್ತು ಬೇಕಾಗುತ್ತದೆ. ಮುಟ್ಟಿನ ಸಂದರ್ಭದಲ್ಲಿ ನಿಧಾನವಾಗಿ ಸ್ರಾವವಾಗುವುದರಿಂದ ಹೊಟ್ಟೆ­ನೋವು ಮತ್ತಿತರ ಕಾಯಿಲೆಗಳು ಬರುತ್ತವೆ. ಇದೊಂದು ಅಮಾನವೀಯ ಆಚರಣೆ ಎಂದು ಹೇಳಿದರು.

ಮಹಾರಾಷ್ಟ್ರ, ಗುಜರಾತ್‌ ಮತ್ತು ರಾಜಸ್ಥಾನದ ಕಡೆ ಈ ಆಚರಣೆ ಇದ್ದರೂ ಇದನ್ನು ಅಪರಾಧ ಎನ್ನಲು ಯಾವುದೇ ಕಾನೂನು ಇಲ್ಲ. ಇಂತಹ ಅನೇಕ ದೌರ್ಜನ್ಯ­ಗಳನ್ನು ಹೆಣ್ಣು ಮೌನವಾಗಿ ಸಹಿಸಿಕೊಳ್ಳುವು­ದನ್ನು ಬಿಟ್ಟು ಅದರ ವಿರುದ್ಧ ಧ್ವನಿಯೆತ್ತಿ ಮಾತನಾಡುವುದು ಅತ್ಯಗತ್ಯ ಎಂದು ಅವರು ಹೇಳಿದರು.

ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಉಪನ್ಯಾಸ ನೀಡಿದರು. ಕರಾವಳಿ ಲೇಖಕಿಯರ –ವಾಚಕಿಯರ ಸಂಘದ ಅಧ್ಯಕ್ಷರಾದ ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು. ಸಹಮತ ಫಿಲಂ ಸೊಸೈಟಿಯ ಪ್ರೊ. ಕೃಷ್ಣಮೂರ್ತಿ ಚಿತ್ರಾಪುರ ಉಪಸ್ಥಿತರಿದ್ದರು. ವಾರಿಸ್‌ ಡೆರಿ ಅವರ ಆತ್ಮಕತೆಯನ್ನು ‘ಮರುಭೂಮಿಯ ಹೂ’ ಎಂಬ ಶೀರ್ಷಿಕೆಯಲ್ಲಿ ಜಗದೀಶ್‌ ಕೊಪ್ಪ ಕನ್ನಡಕ್ಕೆ ಅನುವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.