ADVERTISEMENT

ರಚನಾತ್ಮಕ ಕೆಲಸ ನಿರ್ವಹಿಸಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 9:25 IST
Last Updated 18 ಅಕ್ಟೋಬರ್ 2011, 9:25 IST

ಕಡಬ (ಉಪ್ಪಿನಂಗಡಿ):  ಗ್ರಾಮ ಪಂಚಾಯಿತಿ ಜನರ ಕಲ್ಪನೆಗೆ ಪೂರಕವಾಗಿ, ಜನಜೀವನಕ್ಕೆ ಅನುಗುಣವಾಗಿ ಚರ್ಚಿಸಿ ಯೋಜನೆ ಹಮ್ಮಿಕೊಳ್ಳಬೇಕು. ಆ ಮೂಲಕ ರಚನಾತ್ಮಕವಾಗಿ ಕೆಲಸ ಮಾಡಬೇಕು. ಆಗ ಅದು ಸ್ವತಂತ್ರ ಸರ್ಕಾರವಾಗಿ ಆಗಿ ಕೆಲಸ ಮಾಡಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಐತ್ತೂರು ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಜರುಗಿದ ಭಾರತ್ ನಿರ್ಮಾಣ್ ರಾಜೀವ್‌ಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.


ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರು ಭಾಗವಹಿಸಿ ಅಭಿವೃದ್ಧಿ ಬಗ್ಗೆ ಚರ್ಚಿಸಿ ಅನುದಾನಗಳನ್ನು ಪಡೆಯುವ ನಿಟ್ಟಿನಲ್ಲಿ ಮುಂದಾಗಬೇಕು. ಕಡು ಬಡವರಿಗೆ ಸವಲತ್ತು ಸಿಗುವ ರೀತಿಯಲ್ಲಿ ರಚನಾತ್ಮಕವಾಗಿ ಕೆಲಸ ಮಾಡಬೇಕು. ಆಗ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.


ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕ ಎಸ್. ಅಂಗಾರ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಆರ್ಥಿಕವಾಗಿ ಸದೃಢರಾದಾಗ ಸಹಜವಾಗಿಯೇ ದೇಶ ಅಭಿವೃದ್ಧಿ ಹೊಂದುತ್ತದೆ ಎಂದರು.

ADVERTISEMENT


ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮಾರಿ ವಾಸುದೇವನ್ ನೀರು ಸರಬರಾಜು ಯೋಜನೆ ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಪುಲಸ್ಯಾ ರೈ ನಿವೇಶನ ಆದೇಶ ಪತ್ರ ವಿತರಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸರೋಜಿನಿ, ದಿವ್ಯಾ ಬಾಲಕೃಷ್ಣ, ಓಂಬುರ್ಡ್ಸ್‌ಮನ್ ನೋಡೆಲ್ ಅಧಿಕಾರಿ ಶೀನ ಶೆಟ್ಟಿ, ಪುತ್ತೂರು ಎಪಿಎಂಸಿ ಅಧ್ಯಕ್ಷ ಸೀತಾರಾಮ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಸತೀಶ್ ಮಾತನಾಡಿದರು.

ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಗೋಪಾಲ ಗೌಡ, ಜಿಲ್ಲಾ ಪಂಚಾಯಿತಿ ಸಹಾಯಕ ಎಂಜಿನಿಯರ್ ಪ್ರಭಾಚಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆಶಾ, ಮೆಸ್ಕಾಂ ಎಂಜಿನಿಯರ್ ಸಜಿ ಕುಮಾರ್, ಸಬ್‌ಇನ್ಸ್‌ಪೆಕ್ಟರ್ ಪೌಲ್ ಪ್ರಿಯಾ ಕುಮಾರ್, ಪಂಚಾಯಿತಿ ಕಾರ್ಯದರ್ಶಿ ವಾಸುದೇವ ಗೌಡ, ಪಂಚಾಯತಿ ಉಪಾಧ್ಯಕ್ಷೆ ಶ್ಯಾಮಲಾ, ಗ್ರಾಮ ಪಂಚಾಯಿತಿ ಸದಸ್ಯ ಇಸ್ಮಾಯಿಲ್, ನಾರಾಯಣ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.