ADVERTISEMENT

`ಸಂವಿಧಾನದ ಆಶಯ ಬಲಗೊಳ್ಳಲಿ'

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 9:05 IST
Last Updated 7 ಡಿಸೆಂಬರ್ 2012, 9:05 IST

ಪುತ್ತೂರು:  ಡಾ. ಬಿ.ಆರ್.ಅಂಬೇಡ್ಕರ್ ನಮಗೆ ನೀಡಿದ ಸಂವಿಧಾನದ ಆಶಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಅಗತ್ಯವಾಗಿದೆ ಎಂದು ಸುಳ್ಯ ತಾಲ್ಲೂಕು ಎಸ್‌ಡಿಪಿಐ ಅಧ್ಯಕ್ಷ ಶಾಫಿ ಬೆಳ್ಳಾರೆ ಹೇಳಿದರು.

ಪುತ್ತೂರು ವಿಧಾನ ಸಭಾ ಕ್ಷೇತ್ರ ಎಸ್‌ಡಿಪಿಐ ವತಿಯಿಂದ ಪುತ್ತೂರಿನ ಎನ್‌ಜಿಒ ಸಭಾಂಗಣದಲ್ಲಿ  ಗುರುವಾರ  ಡಾ. ಬಿ.ಆರ್ ಅಂಬೇಡ್ಕರ್ ಪರಿನಿಬ್ಬಾಣ ಪ್ರಯುಕ್ತ ಹಮ್ಮಿಕೊಳ್ಳಲಾದ `ಶೋಷಿತರ ಜಾಗೃತಿ ದಿನಾಚರಣೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ಶೋಷಿತ ಸಮುದಾಯವಾದ ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗ ಮತ್ತು ದಲಿತರಿಗೆ ಸ್ವಾಭಿಮಾನದ ಬದುಕು ನೀಡಲು ಶ್ರಮಿಸಿದ ಡಾ.ಅಂಬೇಡ್ಕರ್ ಅವರು ನಿಧನರಾದ ಡಿಸೆಂಬರ್ 6ರಂದೇ ಬಾಬರಿ ಮಸೀದಿ  ಧ್ವಂಸ ಮಾಡಲು ಫ್ಯಾಸಿಸ್ಟ್ ಶಕ್ತಿಗಳು ಬಳಕೆ ಮಾಡಿಕೊಂಡಿರುವುದು ಅದರ ಗುಪ್ತ ಕಾರ್ಯಸೂಚಿ ತಿಳಿಸುತ್ತದೆ' ಎಂದು ಅವರು ಟೀಕಿಸಿದರು.

ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಎಂ.ಕೂಸಪ್ಪ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಡಾ. ಅಂಬೇಡ್ಕರ್ ಪ್ರತಿಪಾದಿಸಿದ ವ್ಯಕ್ತಿ ಸ್ವಾತಂತ್ರ್ಯ ಈ ತನಕ ಬಂದಿಲ್ಲ. ಶೋಷಿತ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ದೌರ್ಜನ್ಯ ತಡೆಯಲು ರಾಜಕೀಯ ನಿಲುವಿನ ಇಚ್ಚಾ ಶಕ್ತಿಯ ಅಗತ್ಯವಿದೆ ಎಂದರು.

ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಲತೀಫ್ ಪುತ್ತೂರು ಮಾತನಾಡಿ ಬಾಬರಿ ಮಸೀದಿಯನ್ನು ಧ್ವಂಸ ಮಾಡುವ ಮೂಲಕ ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಸೌಹಾರ್ದ ಮತ್ತು ಜಾತ್ಯತೀತ ವ್ಯವಸ್ಥೆಯನ್ನು ಧ್ವಂಸ ಮಾಡುವ ಕೆಲಸಕ್ಕೆ ಫ್ಯಾಸಿಸ್ಟ್ ವರ್ಗ ಮುಂದಾಯಿತು ಎಂದರು.

ದಲಿತ ಸಂಘರ್ಷ ಸಮಿತಿಯ  ಕಡಬ ವಲಯ ಅಧ್ಯಕ್ಷ ಚಂದ್ರಹಾಸ್ ಕೆ.ಜಿ ಅವರು ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಅಧ್ಯಕ್ಷತೆ ವಹಿಸಿದ್ದರು.

ಪಿಎಫ್‌ಐ ಪುತ್ತೂರು ಜಿಲ್ಲಾಧ್ಯಕ್ಷ ಸಿದ್ದೀಕ್ ಪುತ್ತೂರು, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅನ್ವರ್ ಸಾದತ್ ಬಜತ್ತೂರು, ಪುತ್ತೂರು ನಗರಾಧ್ಯಕ್ಷ ಅಬ್ದುಲ್ ರಹಿಮಾನ್ ಪಡೀಲ್, ಪಿ.ಬಿ.ಕೆ ಮಹಮ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.