ADVERTISEMENT

`ಸದ್ಗುಣಕ್ಕೆ ದೇವತಾ ಶಕ್ತಿ ಮುಖ್ಯ'

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 10:36 IST
Last Updated 8 ಜುಲೈ 2013, 10:36 IST

ಮಂಗಳೂರು: ಮನುಷ್ಯ ಉತ್ತಮ ಗುಣ ಮೈಗೂಡಿಸಿಕೊಳ್ಳಲು ದೇವತಾ ಶಕ್ತಿ ಮುಖ್ಯ. ಜೀವನದಲ್ಲಿ ವಿವಿಧ ರೀತಿಯಲ್ಲಿ ಬರುವ ಕಷ್ಟ ಪರಿಹಾರಕ್ಕೆ ನಾವು ದೇವರ ಮೊರೆ ಹೋಗುವುದು ಸಾಮಾನ್ಯ ಎಂದು ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷ ಅನಂತಕೃಷ್ಣ ಹೇಳಿದರು.

ನಗರದ ಪಂಪ್‌ವೆಲ್ ಸಮೀಪ ಭಾನುವಾರ ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಆಗಮಿಸಿದ ಮುಹೂರ್ತ ಶಿಲೆಗಳ ಮೆರವಣಿಗೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವರ ಮೇಲಿನ ಭಕ್ತಿಗೆ ಪೂರಕವಾಗಿ ನಾವೆಲ್ಲರೂ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಆರೋಗ್ಯಪೂರ್ಣ ಮನಸ್ಸು ಮತ್ತು ಹೃದಯ ವೈಶಾಲ್ಯದಿಂದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾನ್ ಗಿರಿಧರ ಭಟ್, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಅಮೂಲ್ಯ ಅವಕಾಶ. ಎಲ್ಲರೂ ಧರ್ಮಕಾರ್ಯದಲ್ಲಿ ತೊಡಗಿಸಿಕೊಂಡಾಗ ಏಳಿಗೆ ಹೊಂದಲು ಸಾಧ್ಯ. ದೇವಳದ ಜೀರ್ಣೋದ್ಧಾರ ಶಾಸ್ತ್ರಾಧಾರವಾಗಿ ನಡೆಯಬೇಕು ಎಂದರು.

ತಮಿಳುನಾಡಿನಿಂದ ಶಿಲೆಗಳನ್ನು ತಂದಿದ್ದ ಲಾರಿಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಕೀಲುಕುದುರೆ, ವೈವಿಧ್ಯಮಯ ಗೊಂಬೆ, ಚೆಂಡೆ ಮೇಳಗಳೊಂದಿಗೆ ಭಕ್ತರು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಮೋನಪ್ಪ ಭಂಡಾರಿ, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಪಿ.ಶೆಟ್ಟಿ, ಕಂಕನಾಡಿ ಗರೋಡಿ ಅಧ್ಯಕ್ಷ ಚಿತ್ತರಂಜನ್, ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾಯ್ಕ, ಬಾಲಕೃಷ್ಣ ಸುವರ್ಣ, ಸೀತಾರಾಮ, ಪುರುಷೋತ್ತಮ ರೈ, ಪುರುಷೋತ್ತಮ ಶೆಟ್ಟಿ, ಪ್ರದೀಪ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.