ADVERTISEMENT

ಸಿಬಿಐ ತನಿಖೆಗೆ ಸಿದ್ಧ: ಎನ್‌ಎಂಪಿಟಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 9:25 IST
Last Updated 20 ಸೆಪ್ಟೆಂಬರ್ 2011, 9:25 IST

ಮಂಗಳೂರು: ನಾಲ್ಕು ದಿನಗಳ ಹಿಂದೆ ಆರು ಮಂದಿ ಮೀನುಗಾರರು ಸಮುದ್ರದಲ್ಲಿ ನಾಪತ್ತೆಯಾದ ಪ್ರಕರಣ ಹಾಗೂ ಆರು ದಿನದ ಹಿಂದೆ ಐವರು ಮೀನುಗಾರರು ಗಾಯಗೊಂಡ ಪ್ರಕರಣಗಳಲ್ಲಿ ನವ ಮಂಗಳೂರು ಬಂದರು ಮಂಡಳಿಯ (ಎನ್‌ಎಂಪಿಟಿ) ತಪ್ಪೇನೂ ಇಲ್ಲ, ಮೀನುಗಾರರು ರಕ್ಷಣೆಗಾಗಿ ಕೋರಿಕೊಂಡೇ ಇಲ್ಲ. ಹೀಗಾಗಿ ಸಿಬಿಐ ಸಹಿತ ಯಾವುದೇ ತನಿಖೆಗೆ ಮಂಡಳಿ ಸಿದ್ಧವಿದೆ ಎಂದು ಎನ್‌ಎಂಪಿಟಿ ಅಧ್ಯಕ್ಷ ಪಿ. ತಮಿಳುವಾಣನ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ತಮ್ಮ ಕಚೇರಿಯಲ್ಲಿ ಬಂದರು ಸುರಕ್ಷತಾ ಸಮಿತಿ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಂದರು ಸಚಿವ ಕೃಷ್ಣ ಪಾಲೆಮಾರ್ ಅವರು ಸಿಬಿಐ ತನಿಖೆ ಬಗ್ಗೆ ಹೇಳಿಕೆ ನೀಡಿರಬಹುದು. ಪತ್ರಿಕೆಗಳಲ್ಲಿ ಬಂದಿರುವ ಆ ಹೇಳಿಕೆಗಳನ್ನು ಓದಿಲ್ಲ. ಆದರೆ ನಮ್ಮ ಮಟ್ಟಿಗೆ ನಾವು ಕ್ರಮಬದ್ಧವಾಗಿಯೇ ಇದ್ದೇವೆ. ಸಂಕಷ್ಟದಲ್ಲಿದ್ದ ಮೀನುಗಾರರಿಂದ ನೆರವಿಗಾಗಿ ಯಾವುದೇ ಕೋರಿಕೆ ಬಂದಿರುವ ದಾಖಲೆ ನಮ್ಮಲ್ಲಿ ಇಲ್ಲ, ಹೀಗಾಗಿ ನಾವು ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧ~ ಎಂದರು.

ಕಳೆದ ಮಂಗಳವಾರ ಬೆಳಿಗ್ಗೆ 9 ಗಂಟೆ ಹೊತ್ತಿಗೆ ಮೀನುಗಾರರ ಬೇಡಿಕೆ ನಮ್ಮ ಗಮನಕ್ಕೆ ಬಂದಿತು. ನಾವು ಅವರನ್ನು ಒಳಗೆ ಕರೆಸಿಕೊಳ್ಳಲು ಕ್ರಮ ಕೈಗೊಳ್ಳುತ್ತಿದ್ದಾಗಲೇ ಅವರು ಹಳೆ ಬಂದರಿನತ್ತ ತೆರಳಿದ್ದರು.

ಸಂವಹನ ಕೊರತೆ ಎದುರಾಗಿತ್ತು. ಆದರೆ ಬುಧವಾರ ರಾತ್ರಿ ಏಳು ಮೀನುಗಾರರು ಇದ್ದ ದೋಣಿ ಎನ್‌ಎಂಪಿಟಿ ಬಂದರಿನ ಬಳಿ ಬಂದೇ ಇಲ್ಲ. ಅದರೊಳಗಿದ್ದ ಮಂದಿ ನಮ್ಮ ಯಾವೊಂದು ವಿಭಾಗವನ್ನೂ ಸಂಪರ್ಕಿಸಿಲ್ಲ. ನಮ್ಮ ನಿಯಂತ್ರಣ ಕೊಠಡಿಗೂ ಕರೆ ಮಾಡಿಲ್ಲ. ಅವರು ನಮ್ಮನ್ನು ಸಂಪರ್ಕಿಸಿದ್ದಕ್ಕೆ ಯಾವ ದಾಖಲೆಯೂ ಇಲ್ಲ ಎಂದು ಅವರು ಹೇಳಿದರು.

ದುರಂತ ನಡೆದ ದಿನವೇ ಸಮರ್ಪಕವಾಗಿ ಕೋರಿಕೆ ಮುಂದಿಟ್ಟ ಹಾಗೂ ಸೂಕ್ತ ದಾಖಲೆ ಒದಗಿಸಿದ ಎರಡು ದೋಣಿಗಳನ್ನು ಬಂದರಿನೊಳಗೆ ಬಿಟ್ಟಿದ್ದೆವು. ಆ ದೋಣಿಗಳು ಮರುದಿನ ಇಲ್ಲಿಂದ ಹೊರಟಿದ್ದವು.

ಮೀನುಗಾರರಿಗೆ ಕಷ್ಟ ಎದುರಾದಾಗಲೆಲ್ಲಾ ನಾವು ಈ ಹಿಂದೆ ಅದೆಷ್ಟೋ ಬಾರಿ ನೆರವಾಗಿದ್ದೇವೆ. ಈ ಬಾರಿ ಸಂವಹನ ಕೊರತೆಯಿಂದ ಈ ದುರಂತ ನಡೆದಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಲು ಕೆಲವು ಬದಲಾವಣೆಗಳನ್ನೂ ತರಲಾಗಿದೆ, ಈಗಾಗಲೇ ನಿಯಂತ್ರಣ ಕೊಠಡಿಯ ದೂರವಾಣಿ ನಂಬರ್‌ಗಳನ್ನು ಮೀನುಗಾರರಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಕೋಸ್ಟ್‌ಗಾರ್ಡ್ ಸಮರ್ಥನೆ:  ಪೂರಕವೆಂಬಂತೆ ಮಾತನಾಡಿದ ಕರಾವಳಿ ರಕ್ಷಣಾ ಪಡೆ ಕಮಾಂಡೆಂಟ್ ರಾಜೇಂದ್ರ ಸಿಂಗ್ ಸಫಲ್, ಮುಳುಗುತ್ತಿದ್ದ ದೋಣಿಯ ಮಾಲೀಕ ಇರ್ಫಾನ್ ಅವರಿಂದ ತಮಗೆ ಗುರುವಾರ ನಸುಕಿನ 3 ಗಂಟೆ ವೇಳೆ ಕರೆ ಬಂದಿತು. ಆದರೆ ದೋಣಿ ಯಾವ ಕಡೆ ಇದೆ ಎಂಬುದನ್ನು ಅವರು ಹೇಳದೆ ಇದ್ದುದರಿಂದ ವೈಮಾನಿಕ ಕಾರ್ಯಾಚರಣೆ ನಡೆಸುವುದು ಸಾಧ್ಯವಾಗಲಿಲ್ಲ ಎಂದು ಸಮಜಾಯಿಷಿ ನೀಡಿದರು.

ಮರುದಿನ ಡಾರ್ನಿಯರ್ ವಿಮಾನ ಸಮುದ್ರದ ಮೇಲೆ ಹಾರಾಟ ನಡೆಸಿತ್ತು. ಆದರೆ ಅದಕ್ಕೆ ಫಲ ಸಿಗಲಿಲ್ಲ. ವಾತಾವರಣ ಪ್ರಕ್ಷುಬ್ಧಗೊಂಡಿದ್ದರಿಂದ ಹೆಲಿಕಾಪ್ಟರ್ ಹಾರಾಟ ನಡೆಸುವಂತಿರಲಿಲ್ಲ. ಕರಾವಳಿ ರಕ್ಷಣಾ ಪಡೆ ತನ್ನ ಶೋಧ ಕಾರ್ಯಾಚರಣೆ ಮುಂದುವರಿಸಿದ್ದರಿಂದಾಗಿ ಶನಿವಾರ ನೀಲೇಶ್ವರದ ಸಮೀಪ ಒಂದು ಮೃತದೇಹ ಪತ್ತೆಯಾಗಿದೆ. ಇತರಿಗಾಗಿ ಈಗಲೂ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ಹೇಳಿದರು.

ಜೀವರಕ್ಷಕ ಜಾಕೆಟ್: ಮೀನುಗಾರರು ತಮ್ಮ ಜತೆ ಜೀವರಕ್ಷಕ ಜಾಕೆಟ್ ಇಟ್ಟುಕೊಂಡಿರಬೇಕು. ನಾವು ಬಹಳಷ್ಟು ಬಾರಿ ಈ ಬಗ್ಗೆ ಹೇಳಿದ್ದರೂ ಮೀನುಗಾರರು ಪಾಲಿಸುತ್ತಿಲ್ಲ. ದುರಂತಕ್ಕೀಡಾದ ದೋಣಿಯಲ್ಲಿ ಇಂತಹ ಜಾಕೆಟ್ ಇರಲೇ ಇಲ್ಲ. ಇದ್ದಿದ್ದರೆ ನೀರಲ್ಲಿ ನಾಲ್ಕಾರು ಗಂಟೆ ತೇಲುತ್ತಿರಬಹುದಿತ್ತು, ಬಳಿಕ ಅವರನ್ನು ರಕ್ಷಿಸುವುದೂ ಸಾಧ್ಯವಿತ್ತು ಎಂದು ಅವರು ಪ್ರತಿಪಾದಿಸಿದರು.

ಸಂಕಷ್ಟದಲ್ಲಿದ್ದ ಮೀನುಗಾರರು ತಮ್ಮನ್ನು ಸಂಪರ್ಕಿಸಿಯೇ ಇಲ್ಲ. ತಮಗೆ ವಿಷಯ ಗೊತ್ತಾದುದು ಗುರುವಾರ ಬೆಳಿಗ್ಗೆ 5.20ಕ್ಕೆ ಎಂದು ಮೀನುಗಾರಿಕಾ ಉಪ ನಿರ್ದೇಶಕ ಸುರೇಶ್ ಕುಮಾರ್ ಸಹ ಇದೇ ವೇಳೆ ಸ್ಪಷ್ಟಪಡಿಸಿದರು.

ಆದರೆ, ದುರಂತಕ್ಕೊಳಗಾದ ದೋಣಿ ಸಮರ್ಪಕವಾಗಿತ್ತೆ? ಅದು ವಿಮೆ ಪಾವತಿಸಿತ್ತೇ? ಎಂಬ ಮಾಹಿತಿಗಳು ಸುರೇಶ್ ಕುಮಾರ್ ಬಳಿ ಇರಲಿಲ್ಲ.

ಮೀನುಗಾರರು ತೀವ್ರ ಸಂಕಷ್ಟದಲ್ಲಿದ್ದ ಬಗ್ಗೆ ನಗರದ ಪೊಲೀಸ್ ಅಧಿಕಾರಿಯೊಬ್ಬರಿಗೆ ಬುಧವಾರ ರಾತ್ರಿ 10 ಗಂಟೆಗೇ ಮಾಹಿತಿ ಸಿಕ್ಕಿತ್ತು. ಅವರ ಹೆಸರನ್ನು ಇಲ್ಲಿ ಬಹಿರಂಗಪಡಿಸುವುದಿಲ್ಲ. ರಕ್ಷಿಸಲ್ಪಟ್ಟ ಕೇರಳದ ಮೀನುಗಾರ ವಿನ್ಸೆಂಟ್ ಅವರು ನೀಡಿದ ಹೇಳಿಕೆಯ ದಾಖಲೆ ಸಹ ತಮ್ಮ ಬಳಿ ಇದೆ.

ಇದೆಲ್ಲವನ್ನೂ ಗಮನಿಸಿದಾಗ ಎನ್‌ಎಂಪಿಟಿ, ಕರಾವಳಿ ರಕ್ಷಣಾ ಪಡೆ, ಇತರ ಇಲಾಖೆ ಅಧಿಕಾರಿಗಳು ಹೊಣೆಗಾರಿಕೆಯಿಂದ ಪಾರಾಗುವಂತಹ ಹೇಳಿಕೆ ನೀಡುತ್ತಿರುವಂತಿದೆ. ಇದರ ಬಗ್ಗೆ ಎನ್‌ಎಂಪಿಟಿ ಸ್ಪಷ್ಟನೆ ನೀಡಬೇಕು ಎಂದು ಪತ್ರಕರ್ತರೊಬ್ಬರು ಹೇಳಿದರು. ಇದಕ್ಕೆ ತಮ್ಮ ಮೊದಲಿನ ಹೇಳಿಕೆಯನ್ನೇ ನೀಡಿದ ಎನ್‌ಎಂಪಿಟಿ ಅಧ್ಯಕ್ಷರು, ತಮ್ಮಿಂದ, ತಮ್ಮ ಸಿಬ್ಬಂದಿಯಿಂದ, ಸಿಐಎಸ್‌ಎಫ್ ಸಿಬ್ಬಂದಿಯಿಂದ ಯಾವುದೇ ಲೋಪವೂ ಆಗಿಲ್ಲ ಎಂದರು.

ದೋಣಿ ದುರಂತ: ಮತ್ತೆ ನಾಲ್ವರ ಮೃತದೇಹ ಪತ್ತೆ?
ಮಂಗಳೂರು:
ಗುರುವಾರ ಬೆಳಿಗ್ಗೆ ಇಲ್ಲಿಗೆ ಸಮೀಪ ಸಮುದ್ರದಲ್ಲಿ ಮುಳುಗಿದ ದೋಣಿಯಲ್ಲಿದ್ದವರ ಪೈಕಿ ಐವರು ಇನ್ನೂ ನಾಪತ್ತೆಯಾಗಿದ್ದು, ಸೋಮವಾರ ರಾತ್ರಿ ಸುರತ್ಕಲ್ ಕಡಲ ತೀರ ಮತ್ತು ಕುಂಬ್ಳೆ ಕಡಲ ತೀರಗಳಲ್ಲಿ ಎರಡೆರಡು ಶವಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.

ಮೀನುಗಾರರು ಸುರತ್ಕಲ್ ಸಮುದ್ರ ತೀರದಲ್ಲಿ ಸುಮಾರು 15 ಮೀಟರ್ ದೂರದಲ್ಲಿ ಎರಡು ಶವಗಳನ್ನು ಕಂಡಿದ್ದಾರೆ ಎಂದು ಹೇಳಲಾಗಿದ್ದು, ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ರವಾನಿಸಿರುವ ಬಗ್ಗೆ ಮಾಹಿತಿ ಬಂದಿದೆ. ಇದೇ ರೀತಿ ಕುಂಬ್ಳೆ ಸಮೀಪ ಸಹ ಎರಡು ಮೃತದೇಹಗಳು ಸಮುದ್ರ ತೀರದಲ್ಲಿ ಸಿಕ್ಕಿರಬೇಕು ಎಂದು ಮೀನುಗಾರರು ಹೇಳಿದ್ದಾರೆ.

ಮೃತದೇಹಗಳಿಗಾಗಿ ಸಮುದ್ರದಲ್ಲಿ ವ್ಯಾಪಕಕಾರ್ಯಾಚರಣೆ ಮುಂದುವರಿದಿದ್ದು, ಶನಿವಾರ ನೀಲೇಶ್ವರದ ಬಳಿ ಒಂದು ಮೃತದೇಹ ದೊರೆತುದು ಬಿಟ್ಟರೆ ಸೋಮವಾರ ಸಂಜೆಯವರೆಗೆ ಉಳಿದವರ ಮೃತದೇಹ ಪತ್ತೆಯಾಗಿಲ್ಲ ಎಂದು ಕರಾವಳಿ ರಕ್ಷಣಾ ಪಡೆಯ ಕಮಾಂಡೆಂಟ್ ರಾಜೇಂದ್ರ ಸಿಂಗ್ ಸಫಲ್ `ಪ್ರಜಾವಾಣಿ~ಗೆ ತಿಳಿಸಿದರು.

ಸಮುದ್ರದ ನೀರಿನ ಅಲೆಗಳ ಸೆಳೆತಕ್ಕೆ ಈ ಒಂದು ಮೃತದೇಹ  ಸುಮಾರು 80 ಕಿ.ಮೀ. ದೂರ ಸಮುದ್ರದಲ್ಲಿ ಸಾಗಿತ್ತು. ಮುಳುಗಿನ ದೋಣಿಯ ಕೆಲವು ಅವಶೇಷಗಳೂ ಅದೇ ಭಾಗದಲ್ಲಿ ಸಿಕ್ಕಿವೆ. ಆದರೆ ಮುಳುಗಿದ ದೋಣಿಯನ್ನು ಇದುವರೆಗೆ ಪತ್ತೆಹಚ್ಚುವುದು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.