ADVERTISEMENT

ಸುಬ್ರಹ್ಮಣ್ಯ: ಪಿಡಿಒ ವಿರುದ್ಧ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಮೇ 2012, 9:10 IST
Last Updated 12 ಮೇ 2012, 9:10 IST

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿರುದ್ಧ ಶುಕ್ರವಾರ ಗ್ರಾಮ ಪಂಚಾಯಿತಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.ಅಭಿವೃದ್ಧಿ ಅಧಿಕಾರಿ ಯಶವಂತ್, ಕಳೆದ ಎರಡು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಹಾಗೂ ಗ್ರಾಮಸ್ಥರಿಗೆ ಆಗೌರವ ಹಾಗೂ ಅನುಚಿತ ವರ್ತನೆ, ಉದ್ಧಟತನದಿಂದ ವರ್ತಿಸುತ್ತಿದ್ದಾರೆ.

ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಎರಡು ಬಾರಿ ಸುಳ್ಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ  ಸ್ಥಳೀಯ ಮುಖಂಡರು ತಿಳಿಹೇಳಿದರೂ ಸ್ವಭಾವ ತಿದ್ದಿಕೊಂಡಿಲ್ಲ ಎಂದು ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರು ದೂರಿದ್ದಾರೆ.

ಪಿ.ಡಿ.ಒ., ಉದ್ಯೋಗ ಖಾತರಿ ಯೋಜನೆಯಲ್ಲಿ ಜನರಿಗೆ ರಸ್ತೆ ದುರಸ್ತಿಗೆ ಅವಕಾಶ ನಿರಾಕರಿಸಿದ್ದಾರೆ. ಇದರಿಂದ  ಸಂಚಾರಕ್ಕೆ ತೊಂದರೆಯಾಗಿದ್ದು, ಬಂದ ಅನುದಾನ ಬಳಕೆಯಾಗದೇ ಹಿಂದಕ್ಕೆ ಹೋಗಿದೆ. ಮನೆ ಮಂಜೂರಾತಿ ಆದವರಿಗೆ ಬಿಡುಗಡೆಗೆ ವಿನಾ ಕಾರಣ ಅಲೆದಾಡಿಸಿ ತೊಂದರೆ ನೀಡಲಾಗುತ್ತಿದೆ.. ಇವೇ ಮೊದಲಾದ ಅಪಾದನೆಗಳೊಂದಿಗೆ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಕೆಲವು  ಗ್ರಾಮಸ್ಥರು, ಸಂಘ ಸಂಸ್ಥೆಗಳು ಪಂಚಾಯಿತಿ ಎದುರು ಪ್ರತಿಭಟಿಸಿ, ಪಿ.ಡಿ.ಒ ವರ್ಗಾವಣೆಗೆ ಆಗ್ರಹಿಸಿದವು.

ಭರವಸೆ: ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಶಿವರಾಮಯ್ಯ, ಸುಳ್ಯ ತಾ.ಪಂ ಇ.ಒ.ಮಲ್ಲೇಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಜತೆ ಮಾತಾಡಿದರು. ನಂತರ ಪಂಚಾಯಿತಿ ಪಿ.ಡಿ.ಒ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪಿ.ಡಿ.ಒ. ಯಶವಂತ್ ಮಾತನಾಡಿ ಪಂಚಾಯಿತಿ ಆಡಳಿತದ ಜತೆಗೆ ಹೊಂದಾಣಿಕೆ ಆಗುವುದಿಲ್ಲ. ಆದುದರಿಂದ ಸೋಮವಾರದಿಂದ ಸ್ವಇಚ್ಛೆ ಮೇಲೆ ರಜೆಯಲ್ಲಿ ತೆರಳುವುದಾಗಿ ತಿಳಿಸಿದರು. ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಗ್ರಾ.ಪಂ. ಸದಸ್ಯ ಶಿವರಾಮ ರೈ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಬಾಸ್ಕರ ಪೂಜಾರಿ, ಉಪಾಧ್ಯಕ್ಷ ನಾರಾಯಣ ಆಗ್ರಹಾರ, ಸದಸ್ಯರು, ತಾ.ಪಂ. ಸದಸ್ಯೆ ವಿಮಲಾ ರಂಗಯ್ಯ, ಸುಳ್ಯ ತಾಲ್ಲೂಕು ಗ್ರಾ.ಪಂ. ಸದಸ್ಯರ ಒಕ್ಕೂಟದ ಅಧ್ಯಕ್ಷ  ಹಮೀದ್ ಸಂಪಾಜೆ ಹಾಗೂ ವಿವಿಧ ಪಂಚಾಯಿತಿ  ಜನಪ್ರತಿನಿಧಿಗಳು ಇದ್ದರು.

`ಆರೋಪ ಸರಿಯಲ್ಲ~: ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಯಶವಂತ್ ವಿರುದ್ಧ ಮಾಡಿರುವ ಆರೋಪಗಳು ಅಭಿವೃದ್ಧಿ ದೃಷ್ಟಿಯಿಂದ ಸಮಂಜಸವಲ್ಲ ಎಂದು ರಾಜ್ಯ ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ. ಬಾಸ್ಕರ ಬೆಂಡೋಡಿ ಹೇಳಿದ್ದಾರೆ.

ಗ್ರಾಮಾಭಿವೃದ್ಧಿಗಾಗಿ ಆದಿವಾಸಿ ಪಂಚಾಯತ್ ರಾಜ್ಯ ಕಾಯ್ದೆ ಅನುಮೋದಿಸಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲೇ ಮೊದಲಿಗರಾಗಿದ್ದಾರೆ. ಅಧಿಕಾರಿ ವಿರುದ್ಧ ಆರೋಪಗಳನ್ನು ಮಾಡಿ ವರ್ಗಾವಣೆ ಮಾಡಿಸುವುದರಿಂದ ಅಭಿವೃದ್ಧಿಗೆ ಪೆಟ್ಟುಬೀಳುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.