ADVERTISEMENT

ಸುರತ್ಕಲ್: ಗಮನ ಸೆಳೆದ ಪ್ರತಿಭಾ ಕಾರಂಜಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 8:26 IST
Last Updated 7 ಡಿಸೆಂಬರ್ 2012, 8:26 IST

ಸುರತ್ಕಲ್: `ವಿದ್ಯೆ ಇಲ್ಲವಾದರೂ ಅವಕಾಶದಿಂದಲೇ ಮೇಲೆ ಬಂದು ಸಾಧನೆ ಮರೆದಿರುವ ಸಾವಿರಾರು ಮಂದಿ ಸಾಧಕರು ನಮ್ಮ ನಡುವೆ ಇದ್ದಾರೆ. ಅವರ ಪ್ರೇರಣೆ ನಮಗೆ ದಾರಿದೀಪವಾಗಬೇಕು' ಎಂದು ಮಂಗಳೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹರೀಶ್ ತಿಳಿಸಿದರು.

ಸುರತ್ಕಲ್ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ ನಡೆದ ಮಂಗಳೂರು ಉತ್ತರ ವಲಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎರಡು ದಿನ ನಡೆದ ಈ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಶಿಸ್ತುಬದ್ಧವಾಗಿ ನಡೆದು ಗಮನ ಸೆಳೆಯಿತು.

`ಸುಮಾರು 15 ವರ್ಷ ಹಿಂದಿನವರೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ಹೊರತುಪಡಿಸಿದರೆ ಬೇರಾವ ಅವಕಾಶಗಳೂ ಇರುತ್ತಿರಲಿಲ್ಲ. ಹೀಗಾಗಿ ವಿದ್ಯಾರ್ಥಿ ಪ್ರತಿಭೆ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿ ಬಿಡುತ್ತಿದ್ದವು. ಇಂದು ವಿದ್ಯಾರ್ಥಿಗಳಿಗೆ ಅವಕಾಶಗಳು ಹೆಚ್ಚು. ಇದನ್ನು ಸದುಪಯೋಗ ಪಡಿಸಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು ಎಂದರು.

ಸಮಾರಂಭ ಉದ್ಘಾಟಿಸಿದ ಚರ್ಚ್‌ನ ಧರ್ಮಗುರು, ಸಮಾನತೆಯ ಶಿಕ್ಷಣದಲ್ಲಿ ಆಂತರಿಕ ಪ್ರತಿಭೆಯೂ ಬಹು ಮುಖ್ಯವಾಗಿದೆ. ಗೆದ್ದಾಗ ಬೀಗದೇ, ಸೋತಾಗ ಅಳುಕದೆ ಮುಂದೆ ಸಾಗಿದಾಗ ಮಾತ್ರ ನಿಜವಾದ ಶ್ರೇಯಸ್ಸು  ಸಾಧ್ಯ ಎಂದರು. ಉದ್ಯಮಿ ಮಹಾಬಲ ಪೂಜಾರಿ ಕಡಂಬೋಡಿ, ಮಾಜಿ ಮೇಯರ್ ರಜನಿ ದುಗ್ಗಣ್ಣ ಉಪಸ್ಥಿತರಿದ್ದರು.

ಸ್ಪಟಿಕ ಹೆಸರಿನಲ್ಲಿ ಹೋಲಿ ಫ್ಯಾಮಿಲಿ ಶಾಲೆ ಈ ಕಾರ್ಯಕ್ರಮ ನಡೆಸಿತ್ತು.  ಆರಂಭದಲ್ಲಿ ನಾಡಿನ ಜಾನಪದ, ಸಾಂಸ್ಕೃತಿಕ ಕಲೆಗಳನ್ನು ಪರಿಚಯಿಸಲಾಯಿತು. ಯಕ್ಷಗಾನ, ಕರಾಟೆ, ಭರತ ನಾಟ್ಯ, ಕೋಲಾಟ ಹೀಗೆ ವಿವಿಧ ಪ್ರಕಾರಗಳನ್ನು ಆರಂಭದಲ್ಲಿ ಪರಿಚಯಿಸಲಾಯಿತು. ಸರ್ವ ಶಿಕ್ಷಣ ಅಭಿಯಾನದ ಲಾಛನದೊಂದಿಗೆ ಕಾರಂಜಿಯ ಲಾಂಛನವನ್ನು ಅನಾವರಣ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.