ADVERTISEMENT

ಸ್ಟೇಟ್‌ಬ್ಯಾಂಕ್‌ನಿಂದ ಲಾಲ್‌ಬಾಗ್‌, ರೈಲ್ವೆ ನಿಲ್ದಾಣ...

ಬಂದ್‌ ವೇಳೆ ಬಂದ ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 6:56 IST
Last Updated 4 ಮಾರ್ಚ್ 2014, 6:56 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಂದ್‌ ಹಿನ್ನೆಲೆಯಲ್ಲಿ ಬಸ್‌ಗಳು ಸಂಚಾರ ಮೊಟಕು­ಗೊಳಿಸಿದ್ದವು. ಆದರೆ ತುರ್ತು ಕಾರ್ಯನಿಮಿತ್ತ ಸಂಚರಿಸಬೇಕಾದವರು ಪ್ರಯಾಣ ಮೊಟಕು­ಗೊಳಿ­ಸಲು ಸಾಧ್ಯವೇ? ಇಂತಹ ಜಿಜ್ಞಾಸೆಯೊಂದು ದೂರದೂರಿನ ಪ್ರಯಾಣಿಕರ ಮನದಲ್ಲಿ ಸೋಮವಾರ ಮೂಡಿತ್ತು.

ದಾವಣಗೆರೆಯ ಹರಪನಹಳ್ಳಿಯ ಮಹಾಂತೇಶ ಮತ್ತು ಸಹೋದರಿ ತುರ್ತು ಕಾರ್ಯ ನಿಮಿತ್ತ ಮಧ್ಯಾಹ್ನ 3 ಗಂಟೆಗೆ ಊರು ತಲುಪಬೇಕಿತ್ತು. ಬೆಳಿಗ್ಗೆ 8 ಗಂಟೆ ವೇಳೆಗೆ ಸ್ಟೇಟ್‌ಬ್ಯಾಂಕ್‌ ಬಳಿ ಬಸ್‌ಗಾಗಿ ಹುಡುಕಾಡುತ್ತಿದ್ದರು. ಅಲ್ಲಿಂದ 10 ಗಂಟೆ ವೇಳೆಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ತೆರಳಿ ಅಲ್ಲೂ ಆತಂಕದಲ್ಲೇ ಇದ್ದರು. ‘ನೀವು ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಉಡುಪಿ ವರೆಗೆ ರೈಲಿನಲ್ಲಿ ಪ್ರಯಾಣಿಸಿ ಮುಂದೆ ಬಸ್‌ ಮೂಲಕ ತೆರಳಬಹುದು’ ಎಂಬ ಸಲಹೆಯನ್ನೂ ಅವರಿಗೆ ಕೆಲವರು ನೀಡಿದರು. ಒಟ್ಟಿನಲ್ಲಿ ಬಹುಕಾಲವನ್ನು ಅವರು ಸ್ಟೇಟ್‌ಬ್ಯಾಂಕ್‌ನಿಂದ ಲಾಲ್‌ಬಾಗ್‌, ಅಲ್ಲಿಂದ ರೈಲ್ವೆ ನಿಲ್ದಾಣಕ್ಕೆ ನಡೆಯುವುದರಲ್ಲೇ ಕಳೆದರು.

ಆಟೊಗಳನ್ನೂ ತಡೆದರು: ಬೆಳಿಗ್ಗಿನ ವೇಳೆ ಅಲ್ಲೊಂದು ಇಲ್ಲೊಂದು ಸಂಚರಿಸುತ್ತಿದ್ದ ಆಟೊ­ಗಳನ್ನು ಕಂಡು ಇತರ ಆಟೊಗಳೂ ರಸ್ತೆಗಿಳಿದವು. 9 ಗಂಟೆ ವೇಳೆಗೆ ರಸ್ತೆಗಿಳಿದ ಆಟೊಗಳ ಸಂಚಾರವನ್ನು ಕಂಡು ಕೆರಳಿದ ಪ್ರತಿಭಟನಾಕಾರರು ಹಂಪನಕಟ್ಟೆ ವೃತ್ತದಲ್ಲಿ ಆಟೊ ಚಾಲಕರೊಬ್ಬರನ್ನು ತರಾಟೆಗೆ ತೆಗೆದುಕೊಂಡರು.

ಹೋಟೆಲ್‌ಗಳ ಬಾಗಿಲು ಎಳೆದರು: ಬೆಳಿಗ್ಗೆ 6 ಗಂಟೆಯಿಂದ ನಗರದ ಸುತ್ತ ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿದ ಪ್ರತಿಭಟನಾಕಾರರು ಬಾಗಿಲು ತೆರೆದಿದ್ದ ಹೋಟೆಲ್‌ಗಳನ್ನು ಮುಚ್ಚುವಂತೆ ಸೂಚಿಸಿ ತೆರಳಿದರು. ಮರಳಿ ಬಂದಾಗಲೂ ವ್ಯಾಪಾರ ನಡೆಸುತ್ತಿದ್ದ ಹೋಟೆಲ್‌ಗಳ ಬಾಗಿಲನ್ನು ಮುಚ್ಚಿಬಿಟ್ಟರು.

ರಸ್ತೆ ತುಂಬ ಕಲ್ಲು, ಬೆಂಕಿ: ಮುಂಜಾನೆ ವೇಳೆ ರಸ್ತೆಗಳಲ್ಲಿ ಕಲ್ಲು ಇಟ್ಟು, ಟೈರ್‌ಗಳಿಗೆ ಬೆಂಕಿ ಹಚ್ಚಿ ಸಂಚಾರ ತಡೆಯುವ ಪ್ರಯತ್ನವೂ ನಡೆಯಿತು. ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಕಲ್ಲು ತೆರವು ಮಾಡಿದರು. 

ನಿದ್ದೆಗೆ ಮೊರೆ ಹೋದವರು: ದೂರದ ಊರುಗಳಿಂದ ನಗರಕ್ಕೆ ಬಂದು ಪ್ರಯಾಣದಿಂದಲೇ ಸುಸ್ತಾದವರು ವಾಹನಗಳು ಇಲ್ಲದೆ ಪರದಾಡಿದರು. ಕೆಲವರು ನಿದ್ದೆಗೆ ಜಾರಿದರು. ಮತ್ತೆ ಕೆಲವರು ನೆಲ ನೋಡಿ ಅಲ್ಲೇ ಒರಗಿದರು.

ತಾ ಮುಂದು ನಾ ಮುಂದೆಂದರು: ಮಧ್ಯಾಹ್ನ 3.30 ಬಳಿಕ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಬಸ್‌ ಆರಂಭ ಆಗಲಿದೆ ಎಂದು ಘೋಷಿಸುತ್ತಿದ್ದಂತೆ ಚಾತಕ ಪಕ್ಷಿಗಳಂತೆ ಕಾದಿದ್ದ ಪ್ರಯಾಣಿಕರು ಬಸ್‌ ಏರಲು ತಾ ಮುಂದು ನಾ ಮುಂದು ಎಂದು ತರಾತುರಿ ನಡೆಸಿದರು.

ಬಂದ್‌ ಆದ ಬಂದರು: ವಿವಿಧ ಗೋದಾಮು­ಗಳಿರುವ ಬಂದರು ಪ್ರದೇಶಕ್ಕೆ ಸೋಮವಾರ ಹೆಚ್ಚಿನ ಲಾರಿಗಳು ಬಂದಿರಲಿಲ್ಲ.
ಬಂದ ಲಾರಿಗಳ ಸರಕು ಖಾಲಿ ಮಾಡಲೂ ಕಾರ್ಮಿಕರು ಇರಲಿಲ್ಲ. ಆದ್ದರಿಂದ ಬಂದರು ಪ್ರದೇಶವೂ ಬಂದ್‌ ಆಗಿತ್ತು.
ಪೊಲೀಸ್‌ ಬಂದೋಬಸ್ತ್‌: ಬಂದ್‌ ಸಂದರ್ಭದಲ್ಲಿ ಶಾಂತಿ ಸುವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಪೊಲೀಸರ ಹೊರತಾಗಿ 5 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT