ADVERTISEMENT

ಸ್ತನ್ಯಪಾನ ಮಕ್ಕಳ ಆರೋಗ್ಯವರ್ಧಕ: ವಿ.ಜಿ. ಕೆಲ್ಸಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 8:00 IST
Last Updated 4 ಸೆಪ್ಟೆಂಬರ್ 2013, 8:00 IST

ಬಿಜೂರು (ಬೈಂದೂರು): ತಾಯಂದಿರು ತಮ್ಮ ಮಕ್ಕಳಿಗೆ ಎದೆಹಾಲು ಉಣಿಸುವುದರಿಂದ ಅವರಿಗೆ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಎದೆಹಾಲು ಮಕ್ಕಳ ಆರೋಗ್ಯ ವರ್ಧಕ ಮತ್ತು ರೋಗ ನಿರೋಧಕವಾಗಿ ವರ್ತಿಸುತ್ತದೆ. ಅದನ್ನು ತಾಯಂದಿರು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ವಿ.ಜಿ.ಕೆಲ್ಸಿ ಹೇಳಿದರು.
 
ಬೈಂದೂರು ಇನ್ನರ್‌ವೀಲ್ ಕ್ಲಬ್ ಮತ್ತು ಬಿಜೂರು ಕಳವಿನ ಬಾಗಿಲು ಅಂಗನವಾಡಿ ಕೇಂದ್ರದ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಆ ಕುರಿತು ಮಾಹಿತಿ ನೀಡಿದರು. 

ಹಾಲುಣಿಸುವ ವೈಜ್ಞಾನಿಕ ವಿಧಾನ, ಅವಧಿ, ಹಾಲಿನಲ್ಲಿರುವ ಪೌಷ್ಟಿಕಾಂಶ ಮತ್ತು ತಾಯಿಯ ಆರೋಗ್ಯದ ಕುರಿತು ವಿವರಿಸಿದ ಅವರು ಹಾಲುಣಿಸುವುದರಿಂದ ಗರ್ಭಧಾರಣೆ ಮುಂದೂಡಲ್ಪಡುತ್ತದೆ ಎಂದರು.

ಇನ್ನರ್‌ವೀಲ್ ಅಧ್ಯಕ್ಷೆ ಶಾಂತಿ ಪಿರೇರಾ ಅಧ್ಯಕ್ಷತೆ ವಹಿಸಿದ್ದರು.  ಅಂಗನವಾಡಿ ಮೆಲ್ವಿಚಾರಕಿ ನಿವೇದಿತಾ ಸ್ವಾಗತಿಸಿದರು. ಕಿರಿಯ ಆರೋಗ್ಯ ಸಹಾಯಕ ಕೆ. ಉಮಾಕಾಂತ ವಂದಿಸಿದರು.

ಕ್ಲಬ್ ಸದಸ್ಯರಾದ ಸುಜಾತಾ ರಾವ್, ಆಶಾ, ಶಾಂತಿ ಡಯಾಸ್, ಕಿರಿಯ ಆರೋಗ್ಯ ಸಹಾಯಕಿ ಪವಿತ್ರಾ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.