ADVERTISEMENT

ಹೋಟೆಲ್‌ಗಳು ಭರ್ತಿ, ಹಾಸ್ಟೆಲ್‌ ಫುಲ್..

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 4:54 IST
Last Updated 21 ಡಿಸೆಂಬರ್ 2013, 4:54 IST

ಮೂಡುಬಿದಿರೆ: ನಾಲ್ಕು ದಿನಗಳ ಕಾಲ ಇಲ್ಲಿ ನಡೆಯುವ ಸಾಹಿತ್ಯ ಹಾಗೂ ಸಂಸ್ಕೃತಿಯ ಸುಗ್ಗಿಗೆ ಇಡೀ ನಗರದ ಬಹುತೇಕ ಎಲ್ಲ ಹೋಟೆಲ್‌ಗಳು ಭರ್ತಿಯಾಗಿವೆ. ಇಲ್ಲಿನ ಎಲ್ಲ ಹೋಟೆಲ್‌ಗಳನ್ನು ನುಡಿಸಿರಿ ಹಾಗೂ ವಿರಾಸತ್‌ಗಳಲ್ಲಿ ಭಾಗವಹಿಸುವ ಸಾಹಿತಿಗಳಿಗೆ, ಗಣ್ಯರಿಗೆ ಕಾಯ್ದಿರಿಸಲಾಗಿದೆ.

ಇಷ್ಟೇ ಅಲ್ಲ, ಸಮೀಪದ ಕಾರ್ಕಳ, ಮೂಲ್ಕಿ ಹಾಗೂ ಮಂಗಳೂರಿನ ಬಹುತೇಕ ಹೋಟೆಲ್‌ಗಳೂ ಭರ್ತಿಯಾಗಿವೆ. ತಡವಾಗಿ ಬಂದವರು ವಸತಿ ವ್ಯವಸ್ಥೆಗೆ ಪರದಾಡುತ್ತಿದ್ದಾರೆ. ಸಂಘಟಕರು ಹಾಸ್ಟೆಲ್‌ಗಳು, ಕಾಲೇಜಿನ ಕೊಠಡಿಗಳಲ್ಲಿ ಅವರು ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡುವಲ್ಲಿ ಹರಸಾಹಸ ಪಡುತ್ತಿದ್ದಾರೆ.

ಇವು ಗಣ್ಯರಿಗೆ ಬಂದ ಭಾಗ್ಯವಾದರೆ ಬಹುಪಾಲು ಮಾಧ್ಯಮದವರನ್ನು ಹಾಸ್ಟೆಲ್‌ನಲ್ಲಿ ಪ್ರತಿ ಕೊಠಡಿಗೆ ಮೂರು ಮಂದಿಯಂತೆ ಇರಿಸಲಾಗಿದೆ. ಒಟ್ಟು 10 ಹಾಸ್ಟೆಲ್‌ಗಳನ್ನು ಇದಕ್ಕಾಗಿಯೇ ವಿದ್ಯಾರ್ಥಿಗಳಿಂದ ತೆರವುಗೊಳಿಸಲಾಗಿದೆ. ಸಾಗರೋಪಾದಿಯಲ್ಲಿ ಬಂದ ಮಾಧ್ಯಮದವರು ಹಾಗೂ ಜನರಿಗೆ ಕಾಲೇಜಿನ ಹಲವು ಕೋಣೆಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಸಾಮಾನ್ಯರಂತೂ ಒಂದು ಕೋಣೆಯಲ್ಲಿ ಐದಾರು ಮಂದಿಯಂತೆ ಇದ್ದಾರೆ. ಒಂದು ಮೂಲದ ಪ್ರಕಾರ, ಸುಮಾರು 35 ಸಾವಿರ ಮಂದಿಗೆ ಕಾರ್ಯಕ್ರಮ ಸಂಘಟಕರು ವಸತಿ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಸಾರಿಗೆ ವ್ಯವಸ್ಥೆ:  ಆಳ್ವಾಸ್ ಕಾಲೇಜಿನ 30 ವಾಹನಗಳು ಸೇರಿದಂತೆ ಹೊರಗಿನಿಂದ ಬಾಡಿಗೆಗೆ ಪಡೆದ 37 ವಾಹನಗಳನ್ನು ಸಂಚಾರಕ್ಕೆ ನಿಯೋಜಿಸಲಾಗಿದೆ. ಒಟ್ಟು 67 ವಾಹನಗಳು ಬೆಳಿಗ್ಗೆ 6 ರಿಂದ ತಡರಾತ್ರಿ 11ರವರೆಗೂ ಎಡೆಬಿಡದೆ ಸಾಹಿತಿಗಳನ್ನು, ಗಣ್ಯರನ್ನು, ಹಾಗೂ ಮಾಧ್ಯಮದವರನ್ನು ಕರೆತರುವ ಮತ್ತೆ ಮರಳಿ ಅವರನ್ನು ಕಳುಹಿಸುವ ಕಾಯಕದಲ್ಲಿ ನಿರತವಾಗಿವೆ.

ಇವರಿಗೆಲ್ಲಾ ಕುಡಿಯುವ ನೀರಿನ ಪೂರೈಕೆ, ಊಟ ಬಡಿಸುವ ಕಾರ್ಯ ಮೊದಲಾದ ಸಣ್ಣಪುಟ್ಟ ಕೆಲಸಗಳಲ್ಲಿ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ತಲ್ಲೀನರಾಗಿದ್ದಾರೆ. ಶುಕ್ರವಾರ ಒಂದೇ ದಿನ ಹೊರಗಡೆಯ ಕಾಲೇಜುಗಳಿಂದ ಇಲ್ಲಿಗೆ ಬಂದ ಎನ್‍ಎಸ್‍ಎಸ್ ಕಾರ್ಯಕರ್ತರ ಸಂಖ್ಯೆ ಬರೋಬರಿ 2,500! ಸುತ್ತಲಿನ ಗ್ರಾಮಗಳಿಂದ 580 ಮಂದಿ ಇಲ್ಲಿಗೆ ಸ್ವಯಂಸೇವಕರಾಗಿ ಬಂದಿದ್ದಾರೆ.

ಇವರಷ್ಟೇ ಅಲ್ಲ ಕಾಲೇಜಿನ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ವರ್ಗವೂ ಕೂಡ ಸಮ್ಮೇಳನಕ್ಕೆ ಬಂದ ಅತಿಥಿಗಳ, ಸಾಹಿತ್ಯಾಸಕ್ತರ ಯೋಗಕ್ಷೇಮ ನೋಡಿಕೊಳ್ಳುವಲ್ಲಿ ನಿರತವಾಗಿದೆ. ಆಳ್ವಾಸ್ ಪ್ರೌಢಶಾಲೆಯ 30 ಮಂದಿ ಶಿಕ್ಷಕರು, ಪಿಯು ಕಾಲೇಜಿನ 250, ಪದವಿ ಕಾಲೇಜಿನ 150, ಸ್ನಾತಕೋತ್ತರ ಪದವಿಯ 80, ಎಂಜಿನಿಯರಿಂಗ್ ವಿಭಾಗದ 30, ಪ್ಯಾರಾ ಮೆಡಿಕಲ್‌ನ 150 ಮಂದಿ ಉಪನ್ಯಾಸಕರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.